ನವದೆಹಲಿ:ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ದೆಹಲಿ ಗಡಿಯಲ್ಲಿ ಪಂಜಾಬ್, ಹರ್ಯಾಣ ರೈತರು ನಡೆಸುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳತೊಡಗಿದೆ. ಶುಕ್ರವಾರ(ಡಿ.11, 2020) ಪಂಜಾಬ್ ನ ವಿವಿಧ ಜಿಲ್ಲೆಗಳಿಂದ ಸುಮಾರು 50 ಸಾವಿರಕ್ಕೂ ಅಧಿಕ ರೈತರು ಹಾಗೂ ಆರು ತಿಂಗಳಿಗಾಗುವಷ್ಟು ಆಹಾರ ಪದಾರ್ಥಗಳನ್ನು 1,200 ಟ್ರ್ಯಾಕ್ಟರ್ ಗಳಲ್ಲಿ ತುಂಬಿಸಿಕೊಂಡು ದೆಹಲಿಯತ್ತ ಪ್ರಯಾಣಬೆಳೆಸಿರುವುದಾಗಿ ವರದಿ ತಿಳಿಸಿದೆ.
ಜೀ ನ್ಯೂಸ್ ಜತೆ ಮಾತನಾಡಿರುವ ಮಜ್ದೂರ್ ಸಂಘರ್ಷ್ ಸಮಿತಿಯ ಸತ್ನಾಂ ಸಿಂಗ್ ಪನ್ನು, ಪಂಜಾಬ್ ನಿಂದ ಮತ್ತೆ ಸಾವಿರಾರು ರೈತರು ದೆಹಲಿಗೆ ಆಗಮಿಸುತ್ತಿದ್ದಾರೆ. ಅವರು ತಮ್ಮ ಕೊನೆ ಉಸಿರು ಬಿಡಲು ಸಿದ್ದರಾಗಿದ್ದಾರೆ. ನಮ್ಮ ಭವಿಷ್ಯದ ಬಗ್ಗೆ ಮೋದಿ ಸರ್ಕಾರವೇ ನಿರ್ಧರಿಸಲಿ. ಇಲ್ಲದಿದ್ದರೆ ನಾವು ಕುಳಿತ ಸ್ಥಳ ಬಿಟ್ಟು ಕದಲುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.
ಪಂಜಾಬ್ ನ ಫಿರೋಜ್ ಪುರ್, ಫಾಜಿಲ್ಕಾ, ಅಬೋಹಾರ್, ಫರೀದ್ ಕೋಟ್ ಮತ್ತು ಮೋಗಾ ಜಿಲ್ಲೆಗಳಿಂದ ಸಾವಿರಾರು ರೈತರು ದೆಹಲಿ ಗಡಿಯತ್ತ ಆಗಮಿಸುತ್ತಿದ್ದಾರೆ. ಅಷ್ಟೇ ಅಲ್ಲ ಜತೆಗೆ ಆರು ತಿಂಗಳಿಗಾಗುವಷ್ಟು ರೇಷನ್ ಕೂಡಾ ಜತೆಗೆ ತರುತ್ತಿದ್ದಾರೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಜಾರಿಗೆ ತಂದಿರುವ ನೂತನ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಸಾವಿರಾರು ರೈತರು ದೆಹಲಿ, ಹರ್ಯಾಣ ಮತ್ತು ಉತ್ತರಪ್ರದೇಶದ ಗಡಿಭಾಗದಲ್ಲಿ ಕಳೆದ 16 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಈಗಾಗಲೇ ಕೇಂದ್ರ ಸರ್ಕಾರದ ಜತೆ ಐದಾರು ಸುತ್ತಿನ ಮಾತುಕತೆ ನಡೆಸಿದರೂ ಅದು ವಿಫಲವಾಗಿತ್ತು. ಕೇಂದ್ರ ಸರ್ಕಾರ ರೈತ ಮುಖಂಡರಿಗೆ ಕಳುಹಿಸಿದ್ದ ಕರಡು ತಿದ್ದುಪಡಿ ಪ್ರಸ್ತಾಪದ ಆಫರ್ ಅನ್ನು ಕೂಡಾ ತಿರಸ್ಕರಿಸಿದ್ದರಿಂದ ಕೇಂದ್ರ ಮತ್ತು ರೈತರ ನಡುವಿನ ಬಿಕ್ಕಟ್ಟು ಇನ್ನಷ್ಟು ಉಲ್ಬಣಗೊಂಡಂತಾಗಿದೆ.