ಬೀದರ: ಕೋವಿಡ್-19 ನಿಯಂತ್ರಣಕ್ಕೆ ಘೋಷಿಸಿದ ಲಾಕ್‌ಡೌನ್ ಕಾರಣ ಆರ್ಥಿಕ ಸಂಕಷ್ಟಕ್ಕೊಳಗಾದ ಅಗಸ ಮತ್ತು ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರ 5000 ರೂ. ನೆರವು ಘೋಷಿಸಿದ್ದು, ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಫಲಾನುಭವಿಯು ಕಡ್ಡಾಯ ಕ್ಷೌರಿಕ ಮತ್ತು ಅಗಸ ವೃತ್ತಿಯಲ್ಲಿ ತೊಡಗಿರಬೇಕು. ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಕುಟುಂಬಗಳಿಗೆ ಇದು ಅನ್ವಯಿಸಲಿದೆ. 18ರಿಂದ 65 ವರ್ಷದವರಿವರಿಗೆ ಇದು ಸೀಮಿತವಾಗಿದೆ. ಎಲ್ಲ ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ ಮೂಲಕವೇ ಸಲ್ಲಿಸಬೇಕು ಎನ್ನುವ ಅರ್ಹತೆಗಳು ಮತ್ತು ಷರತ್ತುಗಳನ್ನು ಸರಿಯಾಗಿ ತಿಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯದ ಬಿಪಿಎಲ್ ಕಾರ್ಡ್ ಹೊಂದಿದಲ್ಲಿ ಮಾತ್ರ ರಾಜ್ಯದಲ್ಲಿ ಅಗಸ, ಕ್ಷೌರಿಕ ವೃತ್ತಿ ನಿರ್ವಹಿಸುತ್ತಿರುವ ಹೊರ ರಾಜ್ಯದ ಕಾರ್ಮಿಕರು ಸಹ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ. ಸ್ವಯಂ ಘೋಷಣೆ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಸಹಿ ಮಾಡಿ ಅರ್ಜಿ ಅಪ್ ಲೋಡ್ ಮಾಡಬೇಕು. ಅಗಸ ಹಾಗೂ ûೌರಿಕ ವೃತ್ತಿಯಲ್ಲಿ ತೊಡಗಿರುವ ಕುರಿತು ನಿಗದಿಪಡಿಸಿದ ನಮೂನೆಯಲ್ಲಿ ಉದ್ಯೋಗ ದೃಢೀಕರಣ ಪತ್ರವನ್ನು ಸಂಬಂಧಿಸಿದ ಅಧಿಕಾರಿಗಳಿಂದ ಪಡೆದಿರಬೇಕು. ಮಹಿಳಾ ಫಲಾನುಭವಿಗಳು ಕ್ಷೌರಿಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಲ್ಲಿ ಮಾತ್ರ ಪರಿಹಾರಕ್ಕೆ ಅರ್ಹರಾಗಿರುತ್ತಾರೆ. ಇದನ್ನು ಹೊರತುಪಡಿಸಿ ಬ್ಯೂಟಿಷಿಯನ್ ಅಥವಾ ಇತರ ಕೆಲಸಗಳನ್ನು ನಿರ್ವಹಿಸುತ್ತಿದ್ದಲ್ಲಿ ಪರಿಹಾರ ಪಡೆಯಲು ಅರ್ಹರಿರುವುದಿಲ್ಲ ಎಂಬ ಮಾಹಿತಿ ಎಲ್ಲರಿಗೂ ತಿಳಿಯಬೇಕು ಮತ್ತು ಈ ನಿಯಮಗಳು ಸರಿಯಾಗಿ ಪಾಲನೆಯಾಗಬೇಕು ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಂದ ಮಾತನಾಡಿ, ಸಂಬಂಧಪಟ್ಟ ಅಧಿಕಾರಿಗಳಿಂದ ಉದ್ಯೋಗ ದೃಢೀಕರಣ ಪ್ರಮಾಣ ಪತ್ರವನ್ನು ಪಡೆಯಬೇಕು. ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್, ಉದ್ಯೋಗ ದೃಢೀಕರಣ ಪತ್ರ, ಜನ್ಮ ದಿನಾಂಕ ದಾಖಲೆ, ಪಾಸ್‌ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ ಹೊಂದಿರಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆ ಸೌಲಭ್ಯವನ್ನು ಆಧಾರ್ ಲಿಂಕ್ ಹೊಂದಿರುವ ಅವರವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು ಅರ್ಜಿ ಸಲ್ಲಿಸಲು ಜೂನ್ 30ರವರೆಗೆ ಅವಕಾಶ ಇರುತ್ತದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಡಿಯುಡಿಸಿಯ ಶರಣಬಸಪ್ಪ ಕೊಟ್ಟಪ್ಪಗೋಳ, ಜಿಪಂ ಪಿಡಿ ವಿಜಯಕುಮಾರ, ನಗರಸಭೆ ಅಧಿಕಾರಿಗಳು ಸೇರಿದಂತೆ ಸವಿತಾ ಸಮಾಜದ ಉಮೇಶಕುಮಾರ ಗೋಂದಿಗಾಂವ, ಮಡಿವಾಳ ಸಮಾಜದ ಧನರಾಜ್ ಮಡಿವಾಳ, ಇತರರು ಇದ್ದರು.