Advertisement

ದಸರಾಕ್ಕೆ 500 ಟನ್‌ ಹೆಚ್ಚು ತ್ಯಾಜ್ಯ ಸೃಷ್ಠಿ

12:51 PM Oct 06, 2022 | Team Udayavani |

ಬೆಂಗಳೂರು: ದಸರಾ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಕಳೆದೆರಡು ದಿನಗಳಿಂದ ಮಾಮೂಲಿಗಿಂತ 500 ಟನ್‌ ಹಸಿ ತ್ಯಾಜ್ಯ ಹೆಚ್ಚಾಗಿ ಸೃಷ್ಟಿಯಾಗಿದೆ.

Advertisement

ಆಯುಧ ಪೂಜೆ ಮತ್ತು ವಿಜಯದಶಮಿ ಅಂಗವಾಗಿ 2 ದಿನಗಳಿಂದ ಕೆ.ಆರ್‌.ಮಾರುಕಟ್ಟೆ, ಮಲ್ಲೇಶ್ವರ, ಕಲಾಸಿಪಾಳ್ಯ, ಯಶವಂತಪುರ, ಕೆಂಗೇರಿ, ಮಡಿವಾಳ, ಯಲಹಂಕ ಹಾಗೂ ಬಸವನಗುಡಿ ಸೇರಿ ವಿವಿಧೆಡೆ ಪೂಜೆ ಮತ್ತು ಅಲಂಕಾರಿಕ ಸಾಮಗ್ರಿಗಳ ಮಾರಾಟ ಹೆಚ್ಚಾಗಿತ್ತು. ಬಾಳೆಕಂದು, ಮಾವಿನ ಎಲೆ, ಕುಂಬಳಕಾಯಿ, ಹಣ್ಣು ಮತ್ತು ತರಕಾರಿಗಳ ಮಾರಾಟವಾಗದೆ ಉಳಿದ ತ್ಯಾಜ್ಯ ಹಾಗೂ ಆಯುಧಪೂಜೆ ಹಿನ್ನೆಲೆ ವಾಹನಗಳ ಪೂಜೆ ಮಾಡಿದ ನಂತರದ ತ್ಯಾಜ್ಯ ವಸತಿ ಪ್ರದೇಶಗಳಲ್ಲಿ ರಾಶಿಯಾಗಿ ಬಿದ್ದಿತ್ತು.

ಈ ಕಾರಣಗಳಿಂದಾಗಿ ಮಂಗಳವಾರ ಮತ್ತು ಬುಧವಾರ ಸಾಮಾನ್ಯ ದಿನಗಳಿಗಿಂತ 500 ಮೆಟ್ರಿಕ್‌ ಟನ್‌ ಹಸಿತ್ಯಾಜ್ಯ ಹೆಚ್ಚಿಗೆ ಉತ್ಪಾದನೆಯಾಗಿದೆ. ಎಲ್ಲ ಮಾರುಕಟ್ಟೆಗಳಲ್ಲಿ ತ್ಯಾಜ್ಯವನ್ನು ಬೆಳಗ್ಗೆ 8 ಗಂಟೆಯೊಳಗೆ ಸ್ವಚ್ಛಗೊಳಿಸಲಾಗಿದೆ. ಆದರೆ ವಸತಿ ಪ್ರದೇಶಗಳಲ್ಲಿ ತ್ಯಾಜ್ಯ ಸಂಗ್ರಹ ಸಮರ್ಪಕವಾಗಿ ಆಗಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ ನಿತ್ಯ 5 ಸಾವಿರ ಮೆಟ್ರಿಕ್‌ ಟನ್‌ ಘನತ್ಯಾಜ್ಯ ಉತ್ಪಾದನೆ ಆಗುತ್ತಿದೆ. ಈ ತ್ಯಾಜ್ಯವನ್ನು ಸಂಸ್ಕರಣೆ ಮಾಡಲು 7 ಸಂಸ್ಕರಣಾ ಘಟಕಗಳನ್ನು ಬಿಬಿಎಂಪಿ ಹೊಂದಿದೆ. ಆದರೆ ಅದರಲ್ಲಿ 5 ಘಟಕಗಳು ಮಾತ್ರ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಒಂದು ಘಟಕದ ಕಾರ್ಯ ನಿರ್ವಹಣೆ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣವಿದ್ದು ಸ್ಥಗಿತಗೊಂಡಿದೆ.

ಉಳಿದ ಒಂದು ಘಟಕದ ಕೆಲಸಕ್ಕೆ ಸ್ಥಳೀಯರಿಂದ ವಿರೋಧವಿದ್ದು, ಘಟಕ ಮುಚ್ಚಲಾಗಿದೆ. ಹೀಗಾಗಿ, ಪ್ರತಿನಿತ್ಯ ಉತ್ಪಾದನೆ ಆಗುವ ಹಸಿ ಕಸದಲ್ಲಿ ಶೇ. 30ರಿಂದ 40 ತ್ಯಾಜ್ಯವನ್ನು ಸಂಸ್ಕರಿಸಲಾಗುತ್ತಿದೆ. ಉಳಿದ ಶೇ. 60ರಷ್ಟು ತ್ಯಾಜ್ಯವನ್ನು ಭೂ ಭರ್ತಿ ಕೇಂದ್ರದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಈಗ ಹಬ್ಬದ ಹಿನ್ನೆಲೆಯಲ್ಲಿ 500 ಟನ್‌ ಹಸಿಕಸ ಹೆಚ್ಚಾಗಿ ಉತ್ಪಾದನೆ ಆಗಿದೆ. ಹೀಗಾಗಿ ಹಸಿ ತ್ಯಾಜ್ಯ ಸಂಸ್ಕರಣೆಯಲ್ಲಿ ವ್ಯತ್ಯವಾಗಿದೆ.

Advertisement

ಹಬ್ಬದ ಹಿನ್ನೆಲೆಯಲ್ಲಿ ಸಾಮಾನ್ಯ ದಿನಗಳಿಗಿಂತ ಕಳೆದೆರಡು ದಿನಗಳಲ್ಲಿ 500 ಟನ್‌ ಹೆಚ್ಚಿಗೆ ತ್ಯಾಜ್ಯ ಉತ್ಪಾದನೆಯಾಗಿದೆ. ಆ ತ್ಯಾಜ್ಯವನ್ನು ಭೂಭರ್ತಿ ಕೇಂದ್ರದಲ್ಲಿ ವಿಲೇವಾರಿ ಮಾಡಲಾಗಿದೆ. ಹೀಗಾಗಿ ಬುಧವಾರ ಭೂಭರ್ತಿ ಕೇಂದ್ರದಲ್ಲಿ ತ್ಯಾಜ್ಯ ವಿಲೇವಾರಿಗೆ ಬರುವ ಕಾಂಪ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಾಗಿತ್ತು. ●ಕರ್ನಲ್‌ ರಾಜಬೀರ್‌ ಸಿಂಗ್‌, ಬಿಬಿಎಂಪಿ ಚೀಫ್‌ ಮಾರ್ಷಲ್‌

 

Advertisement

Udayavani is now on Telegram. Click here to join our channel and stay updated with the latest news.

Next