Advertisement
ಟಿ20 ಕ್ರಿಕೆಟ್ ಮುನ್ನೆಲೆಗೆ ಬಂದ ಮೇಲೆ ಕ್ರಿಕೆಟ್ ಎನ್ನುವುದು ಸಂಪೂರ್ಣವಾಗಿ ಬ್ಯಾಟ್ಸ್‌ಮನ್‌ಗಳ ಆಟವಾಗಿದೆ. ಕಲಾತ್ಮಕ ಆಟಕ್ಕಿಂತ ಎಷ್ಟೇ ಉತ್ತಮ ಎಸೆತವನ್ನೂ ಬೌಂಡರಿ ಗೆರೆಯಾಚೆಗೆ ನಿರ್ದಯವಾಗಿ ಚಚ್ಚುವ ಆಟಗಾರರಿಗೆ ಕೋಟಿ ಲೆಕ್ಕದಲ್ಲಿ ಬೆಲೆ ಬರುತ್ತಿದೆ. ಇಂತಹ ದೈತ್ಯ ಪ್ರತಿಭೆಗಳಿಗೇ ತಂಡಗಳು ವಿಶೇಷ ಮಣೆ ಹಾಕುತ್ತಿವೆ.
ವಿಶ್ವಕಪ್ ಇತಿಹಾಸದ ಎರಡೂ ದ್ವಿಶತಕಗಳು 2015ರ ಆವೃತ್ತಿಯಲ್ಲೇ ದಾಖಲಾಗಿವೆ. ಮಾರ್ಟಿನ್ ಗಪ್ಟಿಲ್ ಅಜೇಯ 237 ಹಾಗೂ ಕ್ರಿಸ್ ಗೇಲ್ 215 ರನ್ ಬಾರಿಸಿದ್ದಾರೆ.
ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯ 2015ರಲ್ಲಿ ಅಫ್ಘಾನಿಸ್ಥಾನದ ವಿರುದ್ಧ ಗಳಿಸಿದ 417 ರನ್ ಈ ವರೆಗಿನ ಗರಿಷ್ಠ ತಂಡ ಗಳಿಕೆ. ಈ ಪಂದ್ಯವನ್ನು ಬೃಹತ್ ಅಂತರದಿಂದ (275 ರನ್) ಗೆದ್ದ ದಾಖಲೆಯೂ ಕಾಂಗರೂ ಪಾಲಾಯಿತು. ಭಾರತ 2007ರಲ್ಲಿ 413 ರನ್ ಬಾರಿಸಿತ್ತು. ದಕ್ಷಿಣ ಆಫ್ರಿಕಾ ಎರಡು ಸಲ 400ರ ಗಡಿ ದಾಟಿದೆ (411, 408).
Related Articles
Advertisement
481 ರನ್ ವಿಶ್ವದಾಖಲೆ ಉಳಿದೀತೇ?ಏಕದಿನ ಇತಿಹಾಸದಲ್ಲಿ ಈವರೆಗೆ 20 ಬಾರಿ ತಂಡಗಳು 400 ರನ್ ಗಡಿ ದಾಟಿವೆ. ದಕ್ಷಿಣ ಆಫ್ರಿಕಾ 6 ಸಲ, ಭಾರತ 4 ಸಲ (ಗರಿಷ್ಠ 418) ಈ ಸಾಧನೆ ಮಾಡಿವೆ. 2018ರಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯ ಎದುರು 6 ವಿಕೆಟಿಗೆ 481 ರನ್ ಪೇರಿಸಿದ್ದು ವಿಶ್ವದಾಖಲೆ. ಇದಕ್ಕೆ ಇನ್ನು ಕೇವಲ 19 ರನ್ ಸೇರಿದರೆ 500ರ ಗಡಿ ತಲುಪಬಹುದು. ಈ ವಿಶ್ವಕಪ್ ಇಂಥದೊಂದು ಅದ್ಭುತ ಇನ್ನಿಂಗ್ಸಿಗೆ ಸಾಕ್ಷಿಯಾದೀತೇ ಎಂಬ ನಿರೀಕ್ಷೆ ಕ್ರಿಕೆಟ್ ಅಭಿಮಾನಿಗಳದ್ದು. ಪ್ರಚಂಡ ಫಾರ್ಮ್ನಲ್ಲಿರುವ ಇಂಗ್ಲೆಂಡಿಗೆ ಹೆಚ್ಚಿನ ಅವಕಾಶ ಇದೆ ಎಂಬುದೊಂದು ಲೆಕ್ಕಾಚಾರ. ಸಮಸ್ಯೆಯೆಂದರೆ, ಚೆನ್ನಾಗಿ ದಂಡಿಸಿಕೊಳ್ಳುವ ದುರ್ಬಲ ತಂಡಗಳ, ಲೆಕ್ಕದ ಭರ್ತಿಯ ತಂಡಗಳ ಗೈರು! ಸಿಕ್ಸರ್ ಸುರಿಮಳೆಯ ನಿರೀಕ್ಷೆ
ವಿಶ್ವಕಪ್‌ನ ಒಂದೇ ಪಂದ್ಯದಲ್ಲಿ ಗೇಲ್ 16 ಸಿಕ್ಸರ್ ಹೊಡೆದಿದ್ದಾರೆ. ಎಬಿಡಿ ಅವರೊಂದಿಗೆ 37 ಸಿಕ್ಸರ್‌ಗಳ ಜಂಟಿ ದಾಖಲೆ ಹೊಂದಿರುವ ಗೇಲ್ ಈ ಬಾರಿ ಅದನ್ನು ಮೀರಿ ಮುನ್ನುಗ್ಗುವ ಹುಮ್ಮಸ್ಸಿನಲ್ಲಿದ್ದಾರೆ.
ಈ ವರ್ಷ ಫೆಬ್ರವರಿಯಲ್ಲಿ ಇಂಗ್ಲಂಡ್ ವಿರುದ್ಧ ವೆಸ್ಟ್ ಇಂಡೀಸ್ ಒಂದೇ ಪಂದ್ಯದಲ್ಲಿ 23 ಸಿಕ್ಸರ್ ಸಿಡಿಸಿತು. 9 ದಿನಗಳ ಬಳಿಕ ಇಂಗ್ಲೆಂಡ್ 24 ಸಿಕ್ಸರ್ ಬಾರಿಸಿ ನೂತನ ದಾಖಲೆ ಸ್ಥಾಪಿಸಿತು. ಈ ದಾಖಲೆ ವಿಶ್ವಕಪ್‌ನಲ್ಲಿ ಪತನಗೊಂಡೀತೇ? 16 ಎಸೆತಗಳಲ್ಲಿ ಅರ್ಧ ಶತಕ, 35 ಎಸೆತಗಳಲ್ಲಿ ಶತಕ ಬಾರಿಸಿದವರಿದ್ದಾರೆ. ದಾಖಲೆಗಳಿರುವುದೇ ಮುರಿಯುವುದಕ್ಕೆ ಎನ್ನುವ ಸ್ಥಿತಿಯಲ್ಲಿ ಈ ಬಾರಿ ನಿರೀಕ್ಷೆ ಹೆಚ್ಚಿದೆ. 2019ರ ವಿಶ್ವಕಪ್‌ನಲ್ಲಿ ಬಲಾಡ್ಯ ತಂಡಗಳೇ ಕಣದಲ್ಲಿವೆ. ಅವುಗಳ ಎದುರಿಗೂ ಯಾವುದಾದರೂ ಒಂದು ತಂಡ 500 ರನ್ ಗುಡ್ಡೆ ಹಾಕಿದರೆ ಅದು ನಿಜಕ್ಕೂ ಅಸಾಮಾನ್ಯ ಸಾಧನೆ ಆಗಲಿದೆ.