ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ನಡೆಸಲು ಚುನಾವಣ ಆಯೋಗ ಮತ್ತು ಸರಕಾರ ಎಷ್ಟು ಖರ್ಚು ಮಾಡಬೇಕು ಬಲ್ಲಿರಾ – 500 ಕೋಟಿ ರೂ.ಗಳಿಗೂ ಹೆಚ್ಚು! ಒಟ್ಟು 224 ಶಾಸಕರು ಆಯ್ಕೆಯಾಗಬೇಕಿದ್ದು, ಒಬ್ಬೊಬ್ಬರಿಗೆ ತಲಾ 2 ಕೋಟಿ ರೂ.ಗಳಂತೆ ಆಯೋಗ ವೆಚ್ಚ ಮಾಡಬೇಕಾಗುತ್ತದೆ.
ಕಳೆದ ವಿಧಾನಸಭೆ ಚುನಾವಣೆಗೆ ಸುಮಾರು 394 ಕೋಟಿ ರೂ. ವೆಚ್ಚವಾಗಿತ್ತು. ಹಣದುಬ್ಬರ, ಬೆಲೆ ಏರಿಕೆ ಇತ್ಯಾದಿ ಕಾರಣಗಳಿಂದಾಗಿ ಈ ಬಾರಿ 500 ಕೋಟಿ ರೂ. ಬೇಕಾಗಬಹುದು ಎಂದು ಆಯೋಗ ಅಂದಾಜಿಸಿದೆ. ಇದು ಈವರೆಗಿನ ಅಂದಾಜು ಆಗಿದ್ದು, 10ರಿಂದ 12 ಕೋ.ರೂ. ಹೆಚ್ಚಾಗಬಹುದು ಎನ್ನಲಾಗಿದೆ.
ಈಗಾಗಲೇ ರಾಜ್ಯ ಸರಕಾರ 300 ಕೋಟಿ ರೂ. ಬಿಡುಗಡೆ ಮಾಡಿದೆ. ಉಳಿದ ಹಣ ಮುಂದಿನ ಹಣಕಾಸು ವರ್ಷದಲ್ಲಿ ಬಿಡುಗಡೆ ಮಾಡಲಾಗು ತ್ತದೆ. ಈ ಸಂಬಂಧ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಹೋಗಿದೆ ಎಂದು ರಾಜ್ಯ ಮುಖ್ಯ ಚುನಾ ವಣಾಧಿಕಾರಿಗಳ ಕಚೇರಿಯ ಮೂಲಗಳು ತಿಳಿಸಿವೆ.
ಪ್ರತೀ ಚುನಾವಣೆಗೆ ವೆಚ್ಚ ದುಪ್ಪಟ್ಟು ಆಗುತ್ತಲೇ ಇದೆ. 2013ರ ವಿಧಾನಸಭೆ ಚುನಾವಣೆಗೆ ಸುಮಾರು 160 ಕೋಟಿ ರೂ. ವೆಚ್ಚವಾಗಿತ್ತು. 2018ರಲ್ಲಿ 250 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸ ಲಾಗಿತ್ತು. ಆದರೆ ಇವಿಎಂ ಜತೆಗೆ ವಿವಿಪ್ಯಾಟ್ ಬಳಕೆ ಮಾಡಿದ್ದರಿಂದ ವೆಚ್ಚ 394 ಕೋಟಿ ರೂ. ತಲುಪಿತ್ತು.
Related Articles
ಯಾವುದಕ್ಕೆ ವೆಚ್ಚ?
ಮತದಾರರ ಪಟ್ಟಿ ತಯಾರಿ, ಮುದ್ರಣ, ಎಪಿಕ್ ಕಾರ್ಡ್‌ಗಳ ಮುದ್ರಣ, ಮತದಾರರ ಜಾಗೃತಿ, ಚುನಾವಣ ಸಿಬಂದಿಗೆ ತರಬೇತಿ, ಕರ್ತವ್ಯ ಭತ್ತೆ, ಇವಿಎಂ ಹಾಗೂ ಚುನಾವಣ ಸಾಮಗ್ರಿಗಳ ಸಾಗಾಟ, ಚೆಕ್‌ಪೋಸ್ಟ್ ನಿರ್ಮಾಣ, ಮತಗಟ್ಟೆ, ಸ್ಟ್ರಾಂಗ್‌ರೂಂ ಹಾಗೂ ಮತ ಎಣಿಕೆ ಕೇಂದ್ರಗಳನ್ನು ಸಜ್ಜುಗೊಳಿಸುವುದು, ಚುನಾವಣ ನೀತಿ ಸಂಹಿತೆ ಜಾರಿ ತಂಡಗಳ ನಿರ್ವಹಣೆ ಸೇರಿದಂತೆ ವಿವಿಧ ಕಾರ್ಯಗಳಿಗೆ ವೆಚ್ಚವಾಗುತ್ತದೆ.
ಯಾವುದಕ್ಕೆ ಹೆಚ್ಚು?
ಚುನಾವಣೆಗೆ ತಗಲುವ ಒಟ್ಟು ವೆಚ್ಚದಲ್ಲಿ ಭದ್ರತ ವೆಚ್ಚ ಹಾಗೂ ಸಿವಿಲ್ ವೆಚ್ಚಕ್ಕೆ ಬಹುಪಾಲು ಹೋಗುತ್ತದೆ. ರಾಜ್ಯ ಪೊಲೀಸ್ ಇಲಾಖೆಯಿಂದ ಮಾಡುವ ಭದ್ರತ ವ್ಯವಸ್ಥೆಗೆ 100ರಿಂದ 150 ಕೋಟಿ ರೂ. ಬೇಕಾಗುತ್ತದೆ. ಕೇಂದ್ರ ಸರಕಾರದಿಂದ ನಿಯೋಜಿಸಲ್ಪಡುವ ಭದ್ರತೆ ಪಡೆಗಳ ವೆಚ್ಚವನ್ನು ಕೇಂದ್ರ ಸರಕಾರವೇ ಭರಿಸುತ್ತದೆ. ಉಳಿದಂತೆ ಸಿವಿಲ್ ವೆಚ್ಚಗಳಾದ ಮತದಾರರ ಜಾಗೃತಿ ಕಾರ್ಯಕ್ರಮಗಳು, ಸಿಬಂದಿ ಮತ್ತು ವೀಕ್ಷಕರ ನಿಯೋಜನೆ ಹಾಗೂ ತರಬೇತಿ, ಮತಗಟ್ಟೆಗಳ ನಿರ್ಮಾಣ, ಮತದಾರರ ಪಟ್ಟಿಯ ಮುದ್ರಣ, ಗುರುತಿನ ಚೀಟಿ ಮುದ್ರಣ, ಚುನಾವಣ ಸಾಮಗ್ರಿಗಳ ಸಾಗಾಟಕ್ಕೆ ಒಟ್ಟು ವೆಚ್ಚದ ಶೇ. 45ರಿಂದ 50ರಷ್ಟು ಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಉಳಿದಂತೆ ಚೆಕ್‌ಪೋಸ್ಟ್‌ಗಳ ನಿರ್ಮಾಣಕ್ಕೆ ಶೇ. 10, ಮತ ಎಣಿಕೆ ಕೇಂದ್ರಗಳ ಸ್ಥಾಪನೆ, ಸ್ಟ್ರಾಂಗ್ ರೂಂಗಳ ನಿರ್ಮಾಣಕ್ಕೆ ಶೇ. 30ರಷ್ಟು, ನೀತಿ ಸಂಹಿತೆ ಜಾರಿಗೆ ಶೇ. 10ರಷ್ಟು ಬೇಕಾಗಬಹುದು ಎಂದು ಚುನಾವಣ ಆಯೋಗ ಅಂದಾಜು ಹಾಕಿದೆ. ಚುನಾವಣೆ ವೆಚ್ಚವು ಮತಗಟ್ಟೆಗಳ ಸಂಖೆಯನ್ನು ಅವಲಂಬಿಸಿರುತ್ತದೆ. ಮತದಾರರ ಸಂಖ್ಯೆ ಹೆಚ್ಚಾದರೆ ಮತಗಟ್ಟೆಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಆದರೆ ಕಳೆದ ಬಾರಿಗಿಂತ ಮತಗಟ್ಟೆಗಳು ದೊಡ್ಡ ಸಂಖ್ಯೆಯಲ್ಲಿ ಏರಿಕೆ ಆಗಿಲ್ಲ. ಆದರೂ ಸಿವಿಲ್ ವೆಚ್ಚ ಇದ್ದೇ ಇದೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.
ಈ ಬಾರಿಯ ಚುನಾವಣೆಗೆ ಸುಮಾರು 500 ಕೋಟಿ ರೂ. ವೆಚ್ಚ ಬರಬಹುದು. ಈಗಾಗಲೇ ಸರಕಾರ 300 ಕೋಟಿ ರೂ. ಬಿಡುಗಡೆ ಮಾಡಿದೆ.
– ಮನೋಜ್ ಕುಮಾರ್ ಮೀನಾ, ರಾಜ್ಯ ಮುಖ್ಯ ಚುನಾವಣಾಧಿಕಾರಿ
- ರಫೀಕ್ ಅಹ್ಮದ್