Advertisement

ಶೇ.50 ರಸಗೊಬ್ಬರ ಕೊರತೆ

03:15 PM Jun 22, 2022 | Team Udayavani |

ಭಾಲ್ಕಿ: ಜಿಲ್ಲೆಯಲ್ಲಿ ಶೇ.50ರಷ್ಟು ರಸಗೊಬ್ಬರದ ಕೊರತೆ ಎದುರಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ರೈತರ ಬಗ್ಗೆ ನಿಜವಾದ ಕಾಳಜಿ ಇದ್ದಲ್ಲಿ ತಕ್ಷಣ ಸಮರ್ಪಕವಾಗಿ ರಸಗೊಬ್ಬರ ಪೂರೈಸಿ ರೈತರಿಗೆ ನೆರವಾಗಿ. ಇಲ್ಲದಿದ್ದರೆ ರೈತರು ರೊಚ್ಚಿಗೇಳಲ್ಲಿದ್ದಾರೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ ಎಚ್ಚರಿಕೆ ನೀಡಿದ್ದಾರೆ.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ಉತ್ತಮ ಮಳೆ ಆಗುತ್ತಿದೆ. ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ರಸಗೊಬ್ಬರದ ಅಭಾವ ಇರುವುದರಿಂದ ಬಿತ್ತನೆಗೆ ರೈತರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಮೊದಲೇ ಬಿತ್ತನೆಗೆ 15 ದಿನ ವಿಳಂಬ ಆಗಿದ್ದು, ಈಗ ಮಳೆ ಆಗಿದ್ದರೂ ರೈತರ ಹೊಲಗಳ ಬಿತ್ತನೆಗೆ ಗೊಬ್ಬರ ಸಿಗುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಸಚಿವ ಖೂಬಾ ಹಾಗೂ ಕೃಷಿ ಅಧಿಕಾರಿಗಳು ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಇಲ್ಲ ಎಂದು ಹೇಳುತ್ತಾರೆ. ಹಾಗಾದರೆ ಜಿಲ್ಲೆಯ ಎಲ್ಲ ಪಿಕೆಪಿಎಸ್‌ ಗಳಲ್ಲಿ ಗೊಬ್ಬರದ ಕೊರತೆ ಎದುರಾಗಿದೆ. ಇದಕ್ಕೆ ಕಾರಣ ಏನು ಎಂದು ಪ್ರಶ್ನಿಸಿದರು.

ಬರೀ ಹೇಳಿಕೆ ನೀಡುವುದನ್ನು ಬಿಟ್ಟು ಎಲ್ಲ ಕಡೆಗಳಲ್ಲಿ ಭೇಟಿ ನೀಡಿ ಪರಿಶೀಲಿಸಿದರೆ ವಾಸ್ತವ ಸ್ಥಿತಿ ಗೊತ್ತಾಗುತ್ತದೆ. ಪಿಕೆಪಿಎಸ್‌ನವರು ಗೊಬ್ಬರದ ಬೇಡಿಕೆ ಪಟ್ಟಿ ಸಲ್ಲಿಸಿದ್ದಾರೆ. ಅದರಂತೆ ಯಾವ ಸೊಸೈಟಿಯಲ್ಲಿಯೂ ಸ್ಟಾಕ್‌ ಇಲ್ಲ ಎಂದರು.

ನಮಗೆ ರಾಜಕೀಯ ಮಾಡುವ ಉದ್ದೇಶವಿಲ್ಲ. ರೈತರ ಹಿತ ಮುಖ್ಯವಾಗಿದೆ. ಜಿಲ್ಲೆಯಲ್ಲಿ ಸುಮಾರು 2.70 ಲಕ್ಷ ರೈತರಿದ್ದಾರೆ. ಒಬ್ಬ ರೈತನಿಗೆ ಕನಿಷ್ಟ 4 ಬ್ಯಾಗ್‌ ಗೊಬ್ಬರ ಅಂದರೆ ಸುಮಾರು 10 ಲಕ್ಷಕ್ಕೂ ಅಧಿಕ ಬ್ಯಾಗ್‌ ಗೊಬ್ಬರ ಬೇಕಾಗುತ್ತದೆ. ಆದರೆ ಇದುವರೆಗೂ ಕೇವಲ 5 ಲಕ್ಷ ಬ್ಯಾಗ್‌ ಮಾತ್ರ ಪೂರೈಕೆ ಆಗಿದೆ. ಇನ್ನೂ ಅರ್ಧದಷ್ಟು ಗೊಬ್ಬರ ಬರಬೇಕಿದೆ ಎಂದರು.

Advertisement

ಸರಕಾರ ಸೋಯಾ ಅವರೆ ಸಬ್ಸಿಡಿಯಲ್ಲಿ ಬ್ಯಾಗ್‌ ಒಂದಕ್ಕೆ 2,970 ರೂ. ದರದಲ್ಲಿ ನೀಡುತ್ತಿದೆ. ಅದೇ ಬೀಜ ಮಾರುಕಟ್ಟೆಯಲ್ಲಿ 2700-2800 ರೂ. ದರದಲ್ಲಿ ಸಿಗುತ್ತಿದೆ. ಸರಕಾರ ನೀಡುವ ಸಬ್ಸಿಡಿ ಯಾರಿಗೂ ಲಾಭ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ತಾಲೂಕು ರೈತ ಸಂಘದ ಅಧ್ಯಕ್ಷ ಬಾಬುರಾವ್‌ ಜೋಳದಾಪಕೆ ಮಾತನಾಡಿದರು. ತಾಲೂಕು ರೈತ ಸಂಘದ ಉಪಾಧ್ಯಕ್ಷ ನಾಗಶೆಟ್ಟಿ ಖಂದಾರೆ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿರಾದಾರ್‌ ಇನ್ನಿತರರು ಇದ್ದರು.

ಕಬ್ಬಿಗೆ 2,400 ರೂ. ದರ ನೀಡಲು ವಿಫಲ

ರೈತರು ಕಬ್ಬಿಗೆ 2,400 ರೂ. ದರ ನೀಡುವಲ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ವಿಫಲವಾಗಿವೆ ಎಂದು ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ ದೂರಿದರು. ಈ ಹಿಂದೆ ನಡೆದ ಸಚಿವರ, ಡಿಸಿ ಸಭೆಯಲ್ಲಿ ಕಾರ್ಖಾನೆ ಮಾಲೀಕರಾದ ಪ್ರಕಾಶ ಖಂಡ್ರೆ, ಡಿ.ಕೆ. ಸಿದ್ರಾಮ ಅವರು ರೈತರ ಪ್ರತಿ ಟನ್‌ ಕಬ್ಬಿಗೆ 2,400 ರೂ. ನೀಡುವುದಾಗಿ ಭರವಸೆ ನೀಡಿ ಈಗ 1,950 ರೂ. ದರ ನೀಡಿ ರೈತರನ್ನು ವಂಚಿಸಿದ್ದಾರೆ ಎಂದು ಆರೋಪಿಸಿದರು. ಅದಲ್ಲದೇ ಎಂಜಿಎಸ್‌ ಎಸ್‌.ಕೆ. ಹೊರತುಪಡಿಸಿ ಉಳಿದ ಕಾರ್ಖಾನೆಗಳಿಗೆ ರೈತರಿಗೆ ಉಚಿತ ಸಕ್ಕರೆ ಕೊಟ್ಟಿಲ್ಲ ಎಂದು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next