Advertisement

ಕೊರಗ ಕಾಲನಿ ಹೆಸರಲ್ಲಿ 50 ಲಕ್ಷ ರೂ. ನೀರುಪಾಲು

02:29 AM Dec 02, 2021 | Team Udayavani |

ಉಡುಪಿ: ಕೊರಗ ಕುಟುಂಬಕ್ಕೆ ಕೊಂಡಾಡಿಯಲ್ಲಿ ವಾಸಿಸಲು ಯೋಗ್ಯವಲ್ಲದ ಭೂಮಿ ನೀಡಿ, ಜಾಗದ ಅಭಿವೃದ್ಧಿಗೆ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ತಡೆಗೋಡೆ ಮೊದಲ ಮಳೆಗೆ ನೀರು ಪಾಲಾಗಿದೆ ಎಂದು ಮಾನವ ಹಕ್ಕುಗಳ ರಕ್ಷಣಪ್ರತಿಷ್ಠಾನ ಅಧ್ಯಕ್ಷ ಡಾ| ರವೀಂದ್ರನಾಥ್‌ ಶಾನ್‌ಭಾಗ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

Advertisement

ನಿರಂತರ ಅಲೆದಾಟದ ಫ‌ಲವಾಗಿ ಇಲ್ಲಿನ ಕೊರಗ ಕುಟುಂಬಕ್ಕೆ ಸರಕಾರ 2011ರಲ್ಲಿ ನಿವೇಶನ ಹಕ್ಕು ಪತ್ರ ನೀಡಿದ್ದರೂ, ವಾಸ ಜಾಗವನ್ನು ತೋರಿಸಿ ರಲಿಲ್ಲ. ಈಗ ಹಂಚಿಕೆಯಾಗಿವ ಭೂಮಿಯು ವಾಸ ಯೋಗ್ಯವಾಗಿಲ್ಲದೇ ಇರುವುದರಿಂದ ಕೊನೆಯ ಪ್ರಯತ್ನವಾಗಿ ಜಿಲ್ಲಾ ನ್ಯಾಯಾಧೀಶರಿಗೆ ದೂರು ನೀಡಿದ್ದೇವೆ ಎಂದರು.

2010ರಲ್ಲಿ ಆರ್ಥಿಕವಾಗಿ ಹಿಂದುಳಿದ ಗಿರಿಜನ ಕುಟುಂಬಗಳಿಗೆ ನಿವೇಶನಗಳನ್ನು ನೀಡುವ ಯೋಜನೆಯನ್ನು ಸರಕಾರ ಹಮ್ಮಿಕೊಂಡಿತ್ತು. ಈ ಬಗ್ಗೆ ತಿಳಿದ ಕೊರಗ ಜನಾಂಗದ ವಿಜಯಲಕ್ಷ್ಮೀ, ಸಮೀರಾ, ಅಪ್ಪಿ ಸಹಿತ 29 ಕುಟುಂಬಗಳು ಸಮಗ್ರ ಗಿರಿಜನ ಯೋಜನಾಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿ ವರ್ಷವಾದರೂ ನಿವೇಶನ ಸಿಗುವ ಸೂಚನೆ ಮಹಿಳೆಯರಿಗೆ ಸಿಕ್ಕಿಲ್ಲ. ಅರ್ಜಿಗಳು ತಹಶೀಲ್ದಾರ್‌, ಡಿಸಿ ಕಚೇರಿಯಲ್ಲಿದೆ ಎಂದು ಅಲೆದಾಡಿಸುತ್ತಿದ್ದರು. ಈ ನಡುವೆ ಆದಾಯ ಮಿತಿ ಹೆಚ್ಚಿರುವುದರಿಂದ ಅರ್ಜಿಗಳನ್ನು ಪರಿಗಣಿಸುವುದು ಅಸಾಧ್ಯ ಎಂಬ ಪ್ರತಿಕ್ರಿಯೆ ತಹಶೀಲ್ದಾರ್‌ ಕಡೆಯಿಂದ ಕೇಳಿ ಮಹಿಳೆಯರು ದಂಗಾಗಿದ್ದರು. ಆರು ತಿಂಗಳ ಅನಂತರ ಬೊಮ್ಮರ ಬೆಟ್ಟು ಗ್ರಾಮದ ಕೊಂಡಾಡಿ ಎಂಬಲ್ಲಿ ಕಲ್ಲುಗುಡ್ಡಗಳಿರುವ 229ನೇ ಸರ್ವೇ ನಂಬರ್‌ 2.61 ಎಕ್ರೆ ಜಾಗದಲ್ಲಿ 29 ಕುಟುಂಬಗಳಿಗೆ ತಲಾ 8 ಸೆಂಟ್ಸ್‌ ವಿಸ್ತೀರ್ಣದ ಮನೆ ನಿವೇಶನಗಳು ಮಂಜೂರು ಮಾಡಿದರು. ಆದರೆ, ಅದು ಈಗ ವಾಸಯೋಗ್ಯವಾಗಿಲ್ಲ ಎಂದು ಕೊರಗ ಮಹಿಳೆಯರು ಅಳಲು ತೋಡಿಕೊಂಡರು.

ಕಾಲ ನಿಗೆ ಮೂಲಸೌಕರ್ಯಕ್ಕೆ ಒದಗಿಸುವ ಅನುದಾನದಲ್ಲಿ ಭೂಮಿ ಸಮತಟ್ಟು ಮಾಡಿ, ತಡೆಗೋಡೆ ಕಟ್ಟಿ ಸೈಟು ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಈ ಪ್ರಕ್ರಿಯೆ ಸಂಪೂರ್ಣ ಅವೈಜ್ಞಾನಿಕ ಇದು ಸೂಕ್ತವಲ್ಲ, ಬೇರೆ ನಿವೇಶನ ನೀಡಿ ಎಂದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಇಲ್ಲಿಯವರೆಗೂ ನಿವೇಶನಕ್ಕಾಗಿ ಹೋರಾಡಿ ಸಾಕಾಗಿದೆ ನಮಗೊಂದು ಸೂಕ್ತ ಸ್ಥಳದಲ್ಲಿ ನಿವೇಶನ ಕೊಡುವ ಕೆಲಸ ಜಿಲ್ಲಾಡಳಿತ ಮಾಡಲಿ ಎಂದು ಸುದ್ದಿಗೋಷ್ಠಿಯಲ್ಲಿದ್ದ ಸುಬೇಧಾ, ಮಹಾಲಕ್ಷ್ಮೀ, ಸಮೀರ ನೋವು ಹಂಚಿಕೊಂಡರು.

ಮಂಜೂರಾದ ಹಣ ಎಲ್ಲಿಗೋಯ್ತು ?
2013 ಮಾರ್ಚ್‌ನಲ್ಲಿ ಮೂಲ ನಿವಾಸಿ ಅಭಿವೃದ್ಧಿ ಯೋಜನೆಯಡಿ ಈ ಭೂಮಿ ಸಮತಟ್ಟು ಮಾಡಲು 1.5 ಲಕ್ಷ ರೂ., ಮಂಜೂರಾಗಿ ಅದರಲ್ಲಿ 97 ಸಾವಿರ ರೂ., ಬಿಡುಗಡೆಯಾಗಿದ್ದು ಆ ಹಣವು ಏನಾಗಿದೆ ಎಂಬುದು ತಿಳಿದು ಬಂದಿಲ್ಲ. 2013-2014ರಲ್ಲಿ ಇದೇ ಕೆಲಸಕ್ಕಾಗಿ 3 ಲಕ್ಷ ರೂ., ಅನುದಾನಕ್ಕೆ ಕಾರ್ಯಪಾಲಕ ಎಂಜಿನಿಯರ್‌ ಅಂದಾಜುಪಟ್ಟಿ ತಯಾರಿಸಿ ಸರಕಾರಕ್ಕೆ ಸಲ್ಲಿಸಿದ್ದಾರೆ. ಈ ಹಣ ಏನಾಯಿತು ಎಂಬ ಬಗ್ಗೆಯೂ ವಿವರಗಳಿಲ್ಲ. ಈ ಹಿಂದೆ ಕರ್ತವ್ಯ ಲೋಪಮಾಡಿದ್ದ ಗಿರಿಜನ ಯೋಜನಾ ಸಮನ್ವಯಾಧಿಕಾರಿ ವಿರುದ್ಧ ಕೊರಗ‌ರ ಅಹವಾಲು ಸ್ವೀಕರಿಸಿದ ರಾಜ್ಯ ಲೋಕಾಯುಕ್ತ ನೋಟಿಸು ನೀಡಿ ತನಿಖೆ ನಡೆಸಿದ್ದರು. ಕಾಲ ನಿಗೆ ರಸ್ತೆ, ನಳ್ಳಿನೀರು, ವಿದ್ಯುತ್‌ ಸಹಿತ ಇನ್ನಿತರ ಸೌಕರ್ಯಗಳನ್ನು ಒದಗಿಸಲು ಬಿಡುಗಡೆ ಮಾಡಲಾಗಿದ್ದ 50 ಲಕ್ಷ ರೂ., ಹೇಗೆ ವ್ಯಯಿಸಲಾಗಿದೆ ಎಂಬ ವಿಚಾರದಲ್ಲೂ ಸ್ಪಷ್ಟತೆ ಇಲ್ಲ ಎಂದು ಡಾ| ಶಾನ್‌ಭಾಗ್‌ ದೂರಿದರು.

Advertisement

ಮಳೆಗೆ ಕೊಚ್ಚಿಹೋದ ತಡೆಗೋಡೆ
ಪ್ರತಿಭಟನೆ, ಲೋಕಾಯುಕ್ತ ನೋಟೀಸ್‌ಗೆ ಉತ್ತರಿಸಲಾಗದೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅವಸರದಲ್ಲಿ ಕೊಂಡಾಡಿ ಜಾಗದಲ್ಲಿ 50 ಲಕ್ಷ ರೂ., ವೆಚ್ಚ ಮಾಡಿ 18 ಅಡಿ ಎತ್ತರದ ತಡೆಗೋಡೆಗಳನ್ನು ಕಟ್ಟಿ, ಗುಡ್ಡ ಕೊರೆದು ಮೂರು ಹಂತಗಳಲ್ಲಿ ಸಮತಟ್ಟು ಮಾಡಿ ನಿವೇಶನಗಳನ್ನು ನೀಡಿದರು. ಇದೀಗ ವರ್ಷದ ಮಳೆಗೆ ಗುಡ್ಡ ಜರೆದಿದ್ದು, ತಡೆಗೋಡೆ ನೆಲಸಮವಾಗಿದೆ. ಅತ್ಯಂತ ಕಳಪೆ ಗುಣಮಟ್ಟದಲ್ಲಿ ತಡೆಗೋಡೆ ಕಾಮಗಾರಿ ನಡೆಸಲಾಗಿದೆ. ಇಷ್ಟೆಲ್ಲಾ ನಡೆದು ನಿವೇಶನಗಳು ಅಸುರಕ್ಷಿತವಾಗಿದ್ದರೂ ಅಲ್ಲಿಯೇ ಮನೆ ಕಟ್ಟಿಕೊಳ್ಳಿ ಎಂದು ನಿರ್ದಯ ಅಧಿಕಾರಿಗಳು ಅಸಹಾಯಕ ಕೊರಗರ‌ನ್ನು ಒತ್ತಾಯಿಸುತ್ತಿದ್ದಾರೆ. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ ಹೇಳಿದಂತೆ ಕೊರಗರು ಮನೆ ಕಟ್ಟಿಕೊಂಡಿದ್ದಲ್ಲಿ ಈಗಾಗಲೇ ಹಲವಾರು ಹೆಣ ಬೀಳುತ್ತಿದ್ದವು. ಈ ಹಗರಣದ ನ್ಯಾಯಾಂಗ ತನಿಖೆ ಆಗಬೇಕು ಎಂದು ಡಾ| ರವೀಂದ್ರನಾಥ್‌ ಶಾನ್‌ಬಾಗ್‌ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next