Advertisement

ವಾರ್ಡ್‌ಗೆ 50 ಲಕ್ಷ ಕನ್ನಡಿಯೊಳಗಿನ ಗಂಟು?

02:06 PM Oct 27, 2022 | Team Udayavani |

ಹುಬ್ಬಳ್ಳಿ: ಪ್ರತಿ ವಾರ್ಡ್‌ಗೆ 50 ಲಕ್ಷ ರೂ.ನಂತೆ ಅಭಿವೃದ್ಧಿ ಕಾರ್ಯಕ್ಕೆ ನೀಡುವುದಾಗಿ ಮಹಾಪೌರರು ಘೋಷಿಸಿ ನಾಲ್ಕು ತಿಂಗಳು ಕಳೆದರೂ ಇದುವರೆಗೂ ಬಿಡಿಕಾಸು ಬಿಡುಗಡೆಯಾಗಿಲ್ಲ. ಅ. 28ರಂದು ನಡೆಯುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ವಿಷಯ ಅನುಮೋದನೆಗೆ ಬರಲಿದೆ ಎಂದು ಹೇಳಲಾಗುತ್ತಿದ್ದು, ಆ ಸಭೆಯಲ್ಲಿಯಾದರೂ ಅನುಮೋದನೆಗೊಂಡು ವಾರ್ಡ್‌ ಅಭಿವೃದ್ಧಿಗೆ ಹಣ ಬಂದೀತೆ ಎಂಬ ನಿರೀಕ್ಷೆ ಎಲ್ಲ ಸದಸ್ಯರದ್ದಾಗಿದೆ. ಆದರೆ, ಸದ್ಯದ ಸ್ಥಿತಿಯಲ್ಲಿ ಅದು ಕಷ್ಟಸಾಧ್ಯ ಎಂಬುದನ್ನು ವಾಸ್ತವದ ಸ್ಥಿತಿ ಹೇಳುತ್ತಿದೆ.

Advertisement

ಮಹಾಪೌರ ಈರೇಶ ಅಂಚಟಗೇರಿ ಅವರು ಮಹಾಪೌರರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಸಾಮಾನ್ಯ ಸಭೆಯಲ್ಲಿ ಮಾಡಿದ ಭಾಷಣದಲ್ಲಿ ಪ್ರತಿ ವಾರ್ಡ್‌ಗೆ 50 ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದರು. ವಿಪಕ್ಷ-ಆಡಳಿತ ಪಕ್ಷದ ಸದಸ್ಯರು ಮೇಜು ತಟ್ಟುವ ಮೂಲಕ ಸ್ವಾಗತಿಸಿದ್ದರು. ಆದಷ್ಟು ಶೀಘ್ರದಲ್ಲಿಯೇ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಲಾಗಿತ್ತು. ನಾಲ್ಕು ತಿಂಗಳು ಕಳೆಯುತ್ತಿದ್ದರೂ ಅನುದಾನ ವಿಚಾರದಲ್ಲಿ ಯಾವುದೇ ಪ್ರಗತಿ ಕಾಣದಾಗಿದೆ.

ಪಾಲಿಕೆ ಸಭೆಯಲ್ಲಿ ಮಹಾಪೌರರೇ ಘೋಷಿಸಿದಂತೆ ಪ್ರತಿ ವಾರ್ಡ್‌ಗೆ 50 ಲಕ್ಷ ರೂ. ಅನುದಾನ ನೀಡಿಕೆಗೆ ಕ್ರಮ ಕೈಗೊಳ್ಳಬೇಕಾದ ಪಾಲಿಕೆ ಆಯುಕ್ತರು, ಇದನ್ನು ನೇರವಾಗಿ ಅನುಷ್ಠಾನಕ್ಕೆ ಮುಂದಾಗದೆ ವಿಷಯವನ್ನು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದ ನಂತರ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

28 ರಂದು ಮಂಡನೆ-ಅನುಮೋದನೆ?:

ಅ.28ರಂದು ನಡೆಯುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ ವಾರ್ಡ್‌ಗೆ 50 ಲಕ್ಷ ರೂ. ನೀಡಿಕೆಯ ಮಹಾಪೌರರ ಘೋಷಣೆಯನ್ನು ಮಂಡಿಸಿ ಅನುಮೋದನೆ ಪಡೆಯಲು ಪಾಲಿಕೆ ಆಯುಕ್ತರು ಮುಂದಾಗಿದ್ದಾರೆಯಾದರೂ, ಸಭೆ ನಡೆಯುವುದೇ ಎಂಬ ಶಂಕೆ ವ್ಯಕ್ತವಾಗಿದೆ.

Advertisement

ಮಹಾಪೌರರು ಗೌನ್‌ ಧರಿಸದಿರಲು ನಿರ್ಧರಿಸಿದ್ದು, ವಿಪಕ್ಷ ಸದಸ್ಯರು ಇದನ್ನು ವಿರೋಧಿಸಿದ ಪರಿಣಾಮ ಹಿಂದಿನ ಸಭೆಯೇ ಮೊಟಕುಗೊಂಡಿತ್ತು. ಅ.28ರಂದು ಧಾರವಾಡದಲ್ಲಿ ನಡೆಯುವ ಪಾಲಿಕೆ ಸಾಮಾನ್ಯ ಸಭೆಗೂ ಮಹಾಪೌರರು ಗೌನ್‌ ಧರಿಸದೆ ಬರಲು ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಮಹಾಪೌರರು ಗೌನ್‌ ಧರಿಸದಿದ್ದರೆ ಸಭೆ ನಡೆಸಲು ಬಿಡುವುದಿಲ್ಲ ಎಂಬುದು ವಿಪಕ್ಷದವರ ಸ್ಪಷ್ಟ ನಿಲುವಾಗಿದೆ. ಇದರಿಂದ ಅ. 28 ರಂದು ಸಾಮಾನ್ಯ ಸಭೆಯಲ್ಲಿ ಗದ್ದಲವಾಗಿ ಸಭೆ ಮುಂದೂಡಿಕೆಯಾದರೆ ವಾರ್ಡ್‌ಗೆ 50 ಲಕ್ಷ ರೂ. ನೀಡಿಕೆ ವಿಷಯ ಮಂಡನೆಯೂ ಸಾಧ್ಯವಾಗದು. ಅಲ್ಲಿಗೆ ವಿಷಯ ಮಂಡನೆ ಮತ್ತೂಂದು ತಿಂಗಳಿಗೆ ಮುಂದೂಡಿಕೆಯಾದಂತಾಗಲಿದೆ.

ಮಂಡನೆಯಾದರೂ ಹಣ ದೊರಕೀತೇ?

ಸಾಮಾನ್ಯ ಸಭೆಯಲ್ಲಿ ಮಂಡನೆಯಾಗಿ ಅನುಮೋದನೆ ಪಡೆದರೂ ಹಣ ನೀಡಿಕೆ ಸಾಧ್ಯವೇ? ಪ್ರತಿ ವಾರ್ಡ್‌ಗೆ 50 ಲಕ್ಷ ರೂ.ನಂತೆ ಒಟ್ಟು 82 ವಾಡ್‌ ìಗಳಿಗೆ ಅಂದಾಜು 41 ಕೋಟಿ ರೂ. ಹಣ ಬೇಕಾಗುತ್ತದೆ. ಸದ್ಯದ ಪಾಲಿಕೆ ಆರ್ಥಿಕ ಸ್ಥಿತಿಯಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಎಲ್ಲಿಂದ ಹೊಂದಿಕೆ ಮಾಡುವುದು ಎಂಬುದು ಯಕ್ಷಪ್ರಶ್ನೆಯಾಗಿದೆ. ಕೆಲ ಮೂಲಗಳ ಪ್ರಕಾರ ಪಾಲಿಕೆಗೆ ಇಲ್ಲಿವರೆಗೆ ಅಂದಾಜು 30 ಕೋಟಿ ರೂ. ಆದಾಯ ಸಂಗ್ರಹವಾಗಿದ್ದು, ಡಿಸೆಂಬರ್‌-ಜನವರಿ ವೇಳೆಗೆ ಇನ್ನು 100 ಕೋಟಿ ರೂ. ಆದಾಯ ಸಂಗ್ರಹವಾಗಬಹುದು ಎಂದು ಅಂದಾಜಿಸಲಾಗಿದೆ. ಒಟ್ಟಾರೆ 130 ಕೋಟಿ ರೂ. ಬರಬಹುದು ಎಂಬ ನಿರೀಕ್ಷೆ ಇದೆ. ಮತ್ತೂಂದು ಕಡೆ ಪಾಲಿಕೆಯಿಂದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಕಾರ್ಯಾದೇಶ (ವರ್ಕ್‌ ಆರ್ಡರ್‌) ನೀಡಿದ ಮೊತ್ತವೇ ಅಂದಾಜು 300 ಕೋಟಿ ರೂ. ಆಗಿದೆ. ಈಗಾಗಲೇ ಕಾರ್ಯಾದೇಶ ನೀಡಿದ ಕಾಮಗಾರಿಗಳಿಗೆ ನೀಡಬೇಕಾದ ಹಣದ ಅರ್ಧದಷ್ಟು ಆದಾಯ ಪಾಲಿಕೆ ಬರುವುದಿಲ್ಲ ಎಂದಾದರೆ, ಪ್ರತಿ ವಾರ್ಡ್‌ಗೆ 50 ಲಕ್ಷ ರೂ. ಯಾವ ಬಾಬತ್ತಿನಿಂದ ನೀಡಲಾಗುತ್ತದೆ ಎಂಬ ಪ್ರಶ್ನೆ ಕಾಡತೊಡಗಿದೆ.

ಗುತ್ತಿಗೆದಾರರ ಹಿಂದೇಟು

ಪಾಲಿಕೆಯಿಂದ ಬರಬೇಕಾದ ಬಾಕಿ ಹಣದ ಹಿನ್ನೆಲೆಯಲ್ಲಿ ಪಾಲಿಕೆ ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆ ಪಡೆಯಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ಇದೇ ಸ್ಥಿತಿ ಮುಂದುವರಿದರೆ ಪಾಲಿಕೆ ಕಾಮಗಾರಿ ಗುತ್ತಿಗೆ ಪಡೆಯುವುದಕ್ಕೂ ಗುತ್ತಿಗೆದಾರರು ಸಿಗದ ಸ್ಥಿತಿ ನಿರ್ಮಾಣವಾಗಲಿದೆ ಎಂಬ ಆತಂಕ ಅನೇಕರದ್ದಾಗಿದೆ.

ಗೊಂದಲ-ಶಂಕೆ

ರಾಷ್ಟ್ರಪತಿ ಪೌರಸನ್ಮಾನಕ್ಕಾಗಿ ಕೈಗೊಂಡ ಕಾರ್ಯಗಳ ಹಣವನ್ನೇ ಇನ್ನು ನೀಡಿಲ್ಲ ಎಂದು ಹೇಳಲಾಗುತ್ತಿದೆ. ಇಂತಹ ಸ್ಥಿತಿಯಲ್ಲಿ ಪ್ರತಿ ವಾರ್ಡ್‌ಗೆ 50 ಲಕ್ಷ ರೂ. ನೀಡಲು ಸಾಧ್ಯವೆ ಎಂಬ ಗೊಂದಲ-ಶಂಕೆ ಅನೇಕ ಸದಸ್ಯರನ್ನು ಕಾಡುತ್ತಿದೆ. ಈ ಬಗ್ಗೆ ಮಹಾಪೌರರು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದ್ದು, ತಾವು ಮಾಡಿದ ಘೋಷಣೆಯಂತೆ ಆದಷ್ಟು ಶೀಘ್ರ ವಾರ್ಡ್‌ಗಳಿಗೆ ತಲಾ 50 ಲಕ್ಷ ರೂ. ಬಿಡುಗಡೆ ಮಾಡಬೇಕು. ಇಲ್ಲವಾದರೆ, ಮಹಾಪೌರರ ಘೋಷಣೆ ನಮ್ಮ ಮೂಗಿಗೆ ಸವರಿದ ತುಪ್ಪದಂತಾಗಲಿದೆ ಎಂಬ ಅನಿಸಿಕೆ ಹಲವು ಸದಸ್ಯರದ್ದಾಗಿದೆ.

„ಅಮರೇಗೌಡ ಗೋನವಾರ

 

Advertisement

Udayavani is now on Telegram. Click here to join our channel and stay updated with the latest news.

Next