ಗೋಮಾ:ಚಿನ್ನದ ಗಣಿ ಕುಸಿದು ಬಿದ್ದ ಪರಿಣಾಮ 50 ಮಂದಿ ಕಾರ್ಮಿಕರು ಜೀವಂತವಾಗಿ ಸಮಾಧಿಯಾಗಿರುವ ಘಟನೆ ಪೂರ್ವ ಡೆಮಾಕ್ರಟಿಕ್ ಆಫ್ ಕಾಂಗೋದ ಕಮಿಟುಗಾ ಎಂಬಲ್ಲಿ ಸಂಭವಿಸಿರುವುದಾಗಿ ಸ್ಥಳೀಯ ಗಣಿಕಾರಿಕೆ ಎನ್ ಜಿಒ ತಿಳಿಸಿದೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ 3ಗಂಟೆಗೆ ಡೆಟ್ರಾಯಿಟ್ ಗಣಿ ಪ್ರದೇಶದಲ್ಲಿರುವ ಚಿನ್ನದ ಗಣಿ ಕುಸಿದು ಬಿದ್ದು ಈ ದುರಂತ ಸಂಭವಿಸಿರುವುದಾಗಿ ಮಹಿಳೆಯರ ಸಾಮಾಜಿಕ ಮೇಲ್ವಿಚಾರಣೆ ಅಧ್ಯಕ್ಷ ಎಮಿಲಿಯಾನ್ ಇಟೊಂಗ್ವಾ ತಿಳಿಸಿದ್ದಾರೆ.
ಹಲವಾರು ಮಂದಿ ಮುಚ್ಚಿದ್ದ ಗಣಿದ್ವಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗಲೇ ಭಾರೀ ಪ್ರಮಾಣದ ಕುಸಿತ ಸಂಭವಿಸಿದ್ದರಿಂದ ಯಾರೊಬ್ಬರು ಹೊರ ಬರಲು ಸಾಧ್ಯವಾಗಿರಲಿಲ್ಲ. ನಾವು ಸುಮಾರು 50 ಮಂದಿಯ ಸಂಪರ್ಕದಲ್ಲಿರುವುದಾಗಿ ಇಟೊಂಗ್ವಾ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋಗಳು ಮತ್ತು ವಿಡಿಯೋಗಳಲ್ಲಿ ಪರ್ವತಪ್ರದೇಶವನ್ನು ಆವರಿಸಿಕೊಂಡಿರುವ ಚಿನ್ನದ ಗಣಿಯ ಪ್ರವೇಶ ದ್ವಾರದಲ್ಲಿ ನೂರಾರು ಮಂದಿ ಚೀರಾಡುತ್ತಿರುವ ಶಬ್ದ ಕೇಳಿಸುತ್ತಿದೆ ಎಂದು ವರದಿ ವಿವರಿಸಿದೆ.
ಕಾಂಗೋದಲ್ಲಿ ಕಾರ್ಮಿಕರಿಂದ ನಡೆಸುತ್ತಿರುವ ಗಣಿಗಾರಿಕೆಯಲ್ಲಿ ಆಕಸ್ಮಿಕ ದುರ್ಘಟನೆ ಪ್ರತಿವರ್ಷ ಸಂಭವಿಸುತ್ತಲೇ ಇರುತ್ತದೆ. ನುರಿತ ಕಾರ್ಮಿಕರಲ್ಲದ ಜನರಿಂದ ಭೂಮಿಯನ್ನು ಅಗೆದು ಚಿನ್ನದ ಶೋಧ ನಡೆಸುತ್ತಿರುವ ಕಾಂಗೋದಲ್ಲಿ ನೂರಾರು ಮಂದಿ ದುರಂತದಲ್ಲಿ ಸಾವನ್ನಪ್ಪುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಕಳೆದ ವರ್ಷ ಅಕ್ಟೋಬರ್ ಚಿನ್ನದ ಗಣಿ ಕುಸಿದು ಬಿದ್ದು 16 ಮಂದಿ ಸಾವನ್ನಪ್ಪಿದ್ದರು. 2019ರ ಜೂನ್ ನಲ್ಲಿ ಸಂಭವಿಸಿದ ಮತ್ತೊಂದು ಗಣಿ ದುರಂತದಲ್ಲಿ 43 ಮಂದಿ ಗಣಿ ಕಾರ್ಮಿಕರು ಸಾವನ್ನಪ್ಪಿರುವುದಾಗಿ ವರದಿ ಹೇಳಿದೆ.