ಧಾರವಾಡ: ಪ್ರಸಕ್ತ ಸಾಲಿನಲ್ಲಿ ವಿವಿಧ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳಲು ಸುಮಾರು 50 ಕೋಟಿ ರೂ.ಗಳು ಲಭ್ಯವಾಗಿದ್ದು, ಹೀಗಾಗಿ ಸಂಬಂಧಿಸಿದ ಇಲಾಖೆಗಳು ಕೂಡಲೇ ಪ್ರಸ್ತಾವನೆಗಳನ್ನು ಸಲ್ಲಿಸಿದರೆ ಅಗತ್ಯ ಕ್ರಮ ವಹಿಸಲು ಸಹಕಾರಿಯಾಗಲಿದೆ ಎಂದು ಡಿಸಿ ದೀಪಾ ಚೋಳನ್ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿ ಬಳಕೆಯ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಅಗತ್ಯವಾಗಿರುವ ಕಾರ್ಯಗಳು, ಶಿಕ್ಷಣ, ಮಕ್ಕಳ ವಿಕಾಸ, ಉದ್ಯಾನವನಗಳ ಅಭಿವೃದ್ಧಿ, ನಗರದ ಸೌಂದರ್ಯೀಕರಣಕ್ಕೆ ಪೂರಕ ಚಟುವಟಿಕೆಗಳನ್ನು ಸಿಎಸ್‌ಆರ್ ನಿಧಿಯಡಿ ಕೈಗೊಳ್ಳಲು ಹೊಸ ಸೃಜನಾತ್ಮಕ ಪ್ರಸ್ತಾವನೆಗಳನ್ನು 2-3 ದಿನಗಳಲ್ಲಿ ಸಲ್ಲಿಸಬೇಕು. ನಿಧಿಯ ಬಳಕೆ ಸಂಪೂರ್ಣ ಪಾರದರ್ಶಕವಾಗಿ ನಡೆಯಬೇಕು. ಜಿಲ್ಲೆಯ ಜನತೆಗೆ ಅದರ ಪ್ರಯೋಜನ ಶೀಘ್ರ ತಲುಪಬೇಕು ಎಂದರು.
ಬಾಲಮಂದಿರಗಳು, ಉದ್ಯಾನವನಗಳ ಸೌಂದರ್ಯೀಕರಣ, ರಸ್ತೆ ವಿಭಜಕಗಳ ಅಭಿವೃದ್ಧಿ, ಟೆನಿಸ್ ಕೋರ್ಟ್‌ಗಳ ನಿರ್ಮಾಣ, ನೀಟ್, ಐಐಟಿ, ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ತರಬೇತಿ ನೀಡುವುದು, ಕೊಪ್ಪಳ ಜಿಲ್ಲೆಯ ಗಂಗಾವತಿ ಉಪವಿಭಾಗ ಆಸ್ಪತ್ರೆ ಮಾದರಿಯಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಸುಧಾರಿಸಬೇಕು ಎಂದರು.
ವಾಲ್ಮಿ ಸಹಯೋಗದಲ್ಲಿ ಮಳೆನೀರು ಕೊಯ್ಲು ಯೋಜನೆ ಶಾಲಾ ಹಂತದಿಂದಲೇ ಜಲಸಾಕ್ಷರತೆ ಕಾರ್ಯಕ್ರಮಗಳನ್ನು ರೂಪಿಸುವುದು, ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಗಳಲ್ಲಿ ಬಯೋಟಾಯ್ಲೆಟ್ ಗಳ ಅಳವಡಿಕೆ, ಹುಬ್ಬಳ್ಳಿಯ ಮಂದಮತಿ ಹಾಗೂ ದೃಷ್ಟಿವಿಕಲಚೇತನ ಮಕ್ಕಳ ವಸತಿ ಶಾಲೆಗೆ ವಾಷಿಂಗ್ ಮಷಿನ್, ಕುಕ್ಕಿಂಗ್ ರೇಂಜ್ ನಿರ್ಮಾಣ, ವಿಪತ್ತು ಸಂದರ್ಭದಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳಲು ಅಗ್ನಿಶಾಮಕ ಇಲಾಖೆಗೆ ಆಧುನಿಕ ರಕ್ಷಣಾ ಸಾಮಾಗ್ರಿ ಒದಗಿಸುವುದು ಎಂದರು.
ಕೌಶಲ್ಯಾಭಿವೃದ್ಧಿ ಕೇಂದ್ರ ಅಭಿವೃದ್ಧಿ ಪಡಿಸುವುದು. ಸರ್ಕಾರಿ ಕಚೇರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪಿಂಕ್‌ಜೋನ್ ನಿರ್ಮಿಸಿ ತಾಯಂದಿರು ಮಕ್ಕಳಿಗೆ ಹಾಲು ಕುಡಿಸಲು ಹಾಗೂ ವಿಶ್ರಾಂತಿ ಕೊಠಡಿಗಳ ಸ್ಥಾಪನೆ, ಮಕ್ಕಳ ಆಟಿಕೆ ಆವರಣ ನಿರ್ಮಿಸುವುದು, ಹುಬ್ಬಳ್ಳಿ ರಾಜ್ಯ ಸಮಾಚಾರ ಕೇಂದ್ರಕ್ಕೆ ಪತ್ರಿಕಾ ವಾಹನ, ಸಾಮಾಜಿಕ ಜಾಲತಾಣ ಕೇಂದ್ರ, ಸರ್ಕಾರದ ಯೋಜನೆಗಳು ಹಾಗೂ ಸಾಮಾನ್ಯ ಜ್ಞಾನ ಕುರಿತು ಶಾಲಾ ಕಾಲೇಜು ಮಕ್ಕಳಿಗೆ ರಸಪ್ರಶ್ನೆ, ಪ್ರಬಂಧ, ಭಾಷಣ ಸ್ಪರ್ಧೆ ಆಯೋಜಿಸುವುದು ಸೇರಿದಂತೆ ವಿವಿಧ ಸಲಹೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಪಾಲಿಕೆ ಆಯುಕ್ತ ಡಾ| ಸುರೇಶ್ ಇಟ್ನಾಳ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿನಾಯಕ ಪಾಲನಕರ, ಲೋಕೋಪಯೋಗಿ ಕಾರ್ಯ ನಿರ್ವಾಹಕ ಇಂಜಿನಿಯರ್ ವಿರೂಪಾಕ್ಷಪ್ಪ ಯಮಕನಮರಡಿ, ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಎನ್.ಆರ್. ಪುರುಷೋತ್ತಮ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅಜ್ಜಪ್ಪ ಸೊಗಲದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಶೆಟ್ಟರ, ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಡಿ. ನಾಯಕ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಎ.ಎಂ. ಮಿರ್ಜಣ್ಣವರ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.