ಮೈಸೂರು: ಸರ್ಕಾರವನ್ನು ಬೀಳಿಸಲು 50 ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ತಲಾ 50 ಕೋಟಿ ರೂಪಾಯಿ ನೀಡುವುದಾಗಿ ಆಫರ್ ನೀಡಿದೆ ಎಂದು ಸಿಎಂ ಸಿದ್ದರಾಮಯ್ಯ ಮಾಡಿರುವ ಆರೋಪದ ಬಗ್ಗೆ ಎಸ್‌ಐಟಿ ತನಿಖೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ ತನ್ನ ಅಧಿಕಾರವನ್ನು ಸದುಪಯೋಗಪಡಿಸಿಕೊಂಡು ಲಂಚ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು ಎಂದು ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
”50 ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಲಂಚ ನೀಡಲು ಮುಂದಾಗಿತ್ತು ಆದರೆ ಯಾರೂ ಅದಕ್ಕೆ ಒಪ್ಪಲಿಲ್ಲ ಹೀಗಾಗಿ ಬಿಜೆಪಿಯವರು ಮುಡಾ ನಿವೇಶನ ಹಂಚಿಕೆ ಹಗರಣದಂತಹ ಸುಳ್ಳು ಪ್ರಕರಣಗಳಲ್ಲಿ ಅವರನ್ನು ಗುರಿಯಾಗಿಸಿಕೊಂಡು ಅವರನ್ನು ಬಂಧಿಸುತ್ತಿದ್ದಾರೆ” ಎಂದು ಮುಖ್ಯಮಂತ್ರಿ ಬುಧವಾರ ಹೇಳಿಕೆ ನೀಡಿದ್ದರು.
”ಲಂಚದ ಬಗ್ಗೆ ಮುಖ್ಯಮಂತ್ರಿಗಳ ಹೇಳಿಕೆ ಬೇಜವಾಬ್ದಾರಿಯುತವಾಗಿದೆ. ಬಫೂನ್‌ಗಳು ನೀಡಿದ ಹೇಳಿಕೆಗಳಂತೆ ಕಾಣುವ ಕಾರಣ ಅಂತಹ ಹೇಳಿಕೆಗಳನ್ನು ನೀಡಬಾರದು. ಸಿದ್ದರಾಮಯ್ಯ ವಿವಿಧ ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದಾರೆ. ಈ ಪ್ರಕರಣದ ತನಿಖೆಗೆ ಅವರು ಮತ್ತೊಂದು ಎಸ್‌ಐಟಿ ರಚಿಸಲಿ,ಎಸ್‌ಐಟಿ ರಚಿಸದಿದ್ದರೆ ಜನರು ಅವರನ್ನು ಮತ್ತು ಅವರ ಕ್ಯಾಬಿನೆಟ್ ಸಹೋದ್ಯೋಗಿಗಳನ್ನು ಅನುಮಾನಿಸಿ ನೋಡುತ್ತಾರೆ” ಎಂದು ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಕುಮಾರಸ್ವಾಮಿ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.