Advertisement
ಬೆಳ್ಮಣ್: ಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯಬೇಕಿದ್ದ ಸಂಕಲಕರಿಯ -ಪೊಸ್ರಾಲು ದೇಗುಲ ರಸ್ತೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನಡೆದು ಬರೋಬ್ಬರಿ 5 ವರ್ಷಗಳೇ ಸಂದರೂ ಈವರೆಗೂ ಕಾಮಗಾರಿ ಅಪೂರ್ಣವಾಗಿ ಉಳಿದಿದೆ. ಸಂಕಲಕರಿಯದಿಂದ ಐತಿಹಾಸಿಕ ಪೊಸ್ರಾಲು ಶ್ರೀ ಮಹಾಲಿಂಗೇಶ್ವರ ದೇಗುಲಕ್ಕೆ ಈ ಉದ್ದೇಶಿತ ರಸ್ತೆ ಬಹಳ ಹತ್ತಿರವಾಗಿದೆ. ಇಲ್ಲವಾದಲ್ಲಿ 10ರಿಂದ 15 ಕಿ.ಮೀ. ಸುತ್ತಿ ಬಳಸಿ ಹೋಗಬೇಕಾದ ಅನಿವಾರ್ಯ ಇದೆ. ಈ ಕಾರಣಕ್ಕೆ ಪಂಚಾಯತ್ ರಸ್ತೆ ನಿರ್ಮಾಣಕ್ಕೆ ಮುಂದಾಗಿತ್ತು. ಹಿಂದಿನ ಪಂಚಾಯತ್ ಅಧ್ಯಕ್ಷರ ಕಾಲಾವಧಿಯಲ್ಲಿ ಯೋಜನೆ ರೂಪಿಸಲಾಗಿತ್ತು. 1 ಲಕ್ಷ ರೂ. ಅನುದಾನದಿಂದ ಎರಡು ಮೋರಿಗಳೊಂದಿಗೆ ಕಚ್ಚಾ ರಸ್ತೆ ನಿರ್ಮಿಸಲಾಗಿತ್ತು.
ಹೊಸ ರಸ್ತೆಗಾಗಿ ಕಲ್ಲಾಡಿ, ಉಗ್ಗೆದಬೆಟ್ಟು, ಪೆರ್ಗೊಟ್ಟು, ಪೇರುಗುತ್ತು, ಪೊಸ್ರಾಲು ಭಾಗದ ಜನ ತಮ್ಮ ಭೂಮಿಯ ಪಕ್ಕದಲ್ಲಿ ದೇಗುಲಕ್ಕೊಂದು ರಸ್ತೆ ನಿರ್ಮಾಣವಾಗುತ್ತದೆ ಎಂಬ ಆಶಯದಿಂದ ಸ್ವಯಂಇಚ್ಛೆಯಿಂದ ಜಮೀನು ಬಿಟ್ಟು ಕೊಟ್ಟಿದ್ದರು. ಶಾಸಕರಿಂದ ಶಿಲಾನ್ಯಾಸ ನಡೆದಿತ್ತು
ಅಂದು ಶಾಸಕ ವಿ.ಸುನಿಲ್ ಕುಮಾರ್ ಈ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು. ಜಮೀನು ಬಿಟ್ಟು ಕೊಟ್ಟಿದ್ದ ದಾನಿಗಳನ್ನು ಶಾಸಕರೇ ಸ್ವಯಂ ಗೌರವಿಸಿದ್ದರು. ಪಂಚಾಯತ್ ಸದಸ್ಯರೂ, ಗಣ್ಯರೂ ಅಂದಿನ ಕಾರ್ಯಕ್ರಮಕ್ಕೆ ಸಾಕ್ಷಿಗಳಾಗಿದ್ದರು. ಬಳಿಕ ಶಾಸಕರ ಮುತುವರ್ಜಿಯಲ್ಲಿ ಗ್ರಾಮ ಸಡಕ್‌ನಲ್ಲಿ 1 ಕೋಟಿ ರೂ. ಗಳ ಅನುದಾನ ಮಂಜೂರಾಗಿದ್ದರೂ ಜನಸಂಖ್ಯೆಯ ಕೊರತೆಯ ಕಾರಣದಿಂದ ಆ ಅನುದಾನ ಹಿಂದೆ ಹೋಗಿತ್ತು. ಇದೀಗ ಈ ರಸ್ತೆ ನಿರ್ಮಾಣದ ಬಗ್ಗೆ ಮತ್ತೆ ಭರವಸೆ ಇಡಲಾಗಿದೆ. ಶಾಸಕರು ಮತ್ತೆ ಈ ರಸ್ತೆಗೆ ಅನುದಾನ ತರಬೇಕು ಎನ್ನುವುದು ಜನರ ಆಶಯವಾಗಿದೆ.
Related Articles
ಪೆರ್ಗೊಟ್ಟು ಬಳಿ ನೀರಿನ ಒರತೆ ಇರುವ ಗದ್ದೆಗಳನ್ನು ಎತ್ತರ ಪಡಿಸುವುದರ ಜತೆ ಕಾಲುವೆಗೆ ಕಿರು ಸೇತುವೆಯ ಅಗತ್ಯವೂ ಇದ್ದು ಈ ರಸ್ತೆಗೆ ಹಿಂದಿನ ಅಂದಾಜು ಪಟ್ಟಿ ಪ್ರಕಾರ 1 ಕೋಟಿ ರೂ. ಗೂ ಮಿಕ್ಕಿ ಆರ್ಥಿಕ ಸಂಪನ್ಮೂಲದ ಅಗತ್ಯ ಇದೆ.
Advertisement
ಇಚ್ಛಾ ಶಕ್ತಿ ಬೇಕುರಸ್ತೆ ಕಾಮಗಾರಿ ಶುರುವಾಗಲು ಪಂಚಾಯತ್ ಆಡಳಿತ ಮತ್ತೆ ಶ್ರಮಿಸಬೇಕಾಗಿದ್ದು, ಇದರಿಂದ ಗ್ರಾಮಸ್ಥರು ಸುತ್ತು ಬಳಸಿ ಪ್ರಯಾಣಿಸುವ ಪ್ರಮೇಯ ತಪ್ಪಲಿದೆ. ಇದಕ್ಕಾಗಿ ಊರವರು, ಪಂಚಾಯತ್ ಸದಸ್ಯರು ಒಟ್ಟಾಗಿ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಬಲವಾದ ಆಗ್ರಹ ವ್ಯಕ್ತಪಡಿಸುವುದನ್ನು ಮಾಡಬೇಕಿದೆ. ಮೂಡುಬಿದಿರೆಗೂ ಹತ್ತಿರವಾಗಲಿದೆ
ಈ ರಸ್ತೆ ನಿರ್ಮಾಣಗೊಂಡರೆ ಸಂಕಲಕರಿಯದಿಂದ ಮೂಡುಬಿದಿರೆಗೂ ಬಲು ಹತ್ತಿರವಾಗಲಿದೆ. ಈ ರಸ್ತೆಯ ಮೂಲಕ ಸಾಗಿದರೆ ಮುಕ್ಕಡಪ್ಪು ಮಾರ್ಗವಾಗಿ ಕಡಂದಲೆಗೆ ಸಂಧಿಸುವ ಉತ್ತಮ ರಸ್ತೆ ಸಂಪರ್ಕವೂ ಇದೆ. ಸಹಕಾರ ಕೇಳಲಾಗುವುದು
ಪಂಚಾಯತ್‌ನಿಂದ ಇಷ್ಟು ದೊಡ್ಡ ಮೊತ್ತದ ಅನುದಾನ ಹೊಂದಿಸಲು ಅಸಾಧ್ಯವಾದ್ದರಿಂದ ಶಾಸಕರ ಸಹಿತ ಇತರ ಜನಪ್ರತಿನಿಧಿಗಳ ಸಹಕಾರ ಕೇಳಲಾಗುವುದು.
-ಶುಭಾ ಪಿ. ಶೆಟ್ಟಿ,
ಅಧ್ಯಕ್ಷರು, ಮುಂಡ್ಕೂರು ಗ್ರಾಮ ಪಂಚಾಯತ್ ತೊಡಕು ನಿವಾರಣೆ
ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಸದಾ ಸಹಕಾರ ಇದೆ. ಇರುವ ತೊಡಕುಗಳನ್ನು ನಿವಾರಿಸಿ ಕಾಮಗಾರಿ ನಡೆಸಲಾಗುವುದು.
-ವಿ.ಸುನಿಲ್ ಕುಮಾರ್,
ಶಾಸಕರು ಪ್ರಯತ್ನ ಪ್ರಗತಿಯಲ್ಲಿ
ಈ ರಸ್ತೆಯ ಬಗ್ಗೆ ಸ್ಥಳೀಯರ ಆಗ್ರಹ ಹೆಚ್ಚಿತ್ತು. ಸ್ವಯಂಪ್ರೇರಿತರಾಗಿ ಜಮೀನು ಬಿಟ್ಟು ಕೊಟ್ಟಿದ್ದರು. ರಸ್ತೆ ನಿರ್ಮಿಸಲು ಒಂದು ಕೋಟಿ ರೂ. ಗೂ ಮಿಕ್ಕಿ ಅನುದಾನದ ಅಗತ್ಯ ಇದೆ. ಪ್ರಯತ್ನ ಪ್ರಗತಿಯಲ್ಲಿದೆ.
-ಸತ್ಯಶಂಕರ ಶೆಟ್ಟಿ,ಮಾಜಿ ಅಧ್ಯಕ್ಷರು,
ಮುಂಡ್ಕೂರು ಗ್ರಾಮ ಪಂಚಾಯತ್ ಕಾರ್ಯಪ್ರವೃತ್ತರಾಗಲಿ
ಸಾರ್ವಜನಿಕರಿಗೆ ಅನುಕೂಲದ ದೃಷ್ಟಿಯಿಂದ ಜನ ಜಾಗ ಬಿಟ್ಟುಕೊಟ್ಟಿದ್ದಾರೆ. ಈ ರಸ್ತೆ ನಿರ್ಮಾಣಗೊಂಡರೆ ಕಿನ್ನಿಗೋಳಿ ಕಡೆಯಿಂದ ದೇಗುಲಕ್ಕೆ ಬರುವವರಿಗೆ ಭಾರೀ ಹತ್ತಿರವಾಗಲಿದೆ. ಜನಪ್ರತಿನಿಧಿಗಳು ಕೂಡಲೇ ಕಾರ್ಯಪ್ರವೃತ್ತರಾಗಬೇಕಾಗಿದೆ.
-ರವೀಂದ್ರ ಶೆಟ್ಟಿ ಬಾಳೆಬಾಕಿಮಾರು,ಸ್ಥಳೀಯರು -ಶರತ್ ಶೆಟ್ಟಿ ಮುಂಡ್ಕೂರು