Advertisement

ಮೇಷ್ಟ್ರು ಬಂದ್ಮೇಲೆ,ರಸ್ತೆ ಬಂತು, ಕರೆಂಟು ಬಂತು…

08:39 PM Aug 30, 2019 | Sriram |

ಮರಗಡಿದಡ್ಡಿ! ಊರಿನ ಹೆಸರೇ ಕೇಳಿರಲಿಲ್ಲ. ಅಂಥ ಊರಿನ ಶಾಲೆಗೆ ಮೇಷ್ಟ್ರಾಗಿ ಬಂದೆ. ಮುಂಡಗೋಡ- ಶಿರಸಿ ರಸ್ತೇಲಿ ಸೈಕಲ್‌ ತುಳಿದು ಕಾಡಿನ ದಾರೀಲಿ ಊರಿಗೆ ಬರುವುದೇ ಒಂದು ಸಾಹಸವಾಯ್ತು. ರಸ್ತೆ ಸರಿ ಇಲ್ಲ, ಸುತ್ತೆಲ್ಲ ಕಾಡು. ಆನೆಗಳ ರಾಜಬೀದಿ. ಇಲ್ಲಿ ಬಂದು ನೋಡಿದರೆ ಶಾಲೆಗೆ ಒಂದು ಕಪ್ಪು ಹಲಗೆಯ ಫ‌ಲಕವೂ ಇಲ್ಲ.

Advertisement

ಈ ಊರಿಗೆ ಬರುವ ರಸ್ತೆ, ಕರೆಂಟ್‌ ಕಂಬ ಇದ್ದರೂ ಬಾರದ ವಿದ್ಯುತ್ತು, ಮನೆ ಮುಂದೆ ಗಲೀಜು, ಚೆಂದದ ಮನೆ ಯಾವುದೂ ಇಲ್ಲ! ಪಾಪದ ಜನ. ಪಾಪದ ಮಕ್ಕಳು. ಅಂಥ ಮಕ್ಕಳಿಗೆ ಮೇಷ್ಟ್ರು. ಶಿರಸಿ ಶೈಕ್ಷಣಿಕ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿನ ಶಾಲಾ ಶೈಕ್ಷಣಿಕ ಭದ್ರತೆ ಯೋಜನೆಯ ಹೆಚ್ಚುವರಿ ಶಾಲೆ. ಇದೆಲ್ಲ ನೋಡಿದ್ದು 2007ರ ಜನವರಿ ಮೊದಲವಾರ.

ಸೈಕಲ್‌ ಬೆಲ್‌ ಮಾಡಿದೆ. ಟ್ರಿನ್‌ ಟ್ರಿನ್‌… ಮಕ್ಕಳು, ಶಾಲೆಯ ಹೊರಗೆ ನಿಂತಿದ್ದ ನನ್ನನ್ನು ನೋಡಿದರು. “ಅಲ್ಲಾರೋ ಬಾಗು, ಯಾರೋ ಬಂದಿದ್ದಾರೆ ನೋಡೋ’ ಎಂದರು. ಯಮು, ಪಾಕು ಎಲ್ಲರೂ ಬಂದು ಹೆಸರು ಹೇಳಿ ಪರಿಚಯ ಮಾಡಿಕೊಂಡರು. “ನಾನು ಈ ಶಾಲೆಯ ಹೊಸ ಮೇಷ್ಟ್ರು’ ಎಂದೆ. ಮಕ್ಕಳು ನಕ್ಕರು.

ಶಾಲೆ ಎಂದರೆ ಸಣ್ಣ ಗುಡಿಸಲು ಥರ. ಗುಡಿಸಲು ಥರ ಎಂದರೆ, ಗುಡಿಸಲೇ! ಪಕ್ಕದ ಮರಗಡಿದಡ್ಡಿಯಲ್ಲಿರುವ ಮುಖ್ಯ ಶಾಲೆಯಿಂದ ಬೋರ್ಡ್‌ ತಂದೆವು. ಒಂದು ಕಂಬಕ್ಕೆ ಹಲಗೆ ಕಟ್ಟುವಾಗ ಊರವರೆಲ್ಲ ನಿಂತು ನೋಡಿದ್ದರು. 2008ರಲ್ಲಿ ಶಾಲೆಗೆ ಕೊಠಡಿ ಮಂಜೂರ್‌ ಆಯ್ತು. ಈಗ ವಿದ್ಯಾರ್ಥಿಗಳ ಸಂಖ್ಯೆ 16. ಒಂದರಿಂದ ಐದನೇ ತರಗತಿ ತನಕ ಓದುತ್ತಾರೆ. ಅಂದು ತಲೆಯ ಕೂದಲನ್ನು ಬಾಚಿಕೊಳ್ಳುವುದೂ ಗೊತ್ತಿರಲಿಲ್ಲ. ಅಂಥವರಿಗೆ ಸ್ವತ್ಛತೆಯ ಪಾಠ ಮಾಡಿದೆವು. ಮನೆ ಮಂದಿಗೂ ಮಕ್ಕಳ ಮೂಲಕ ಸ್ವತ್ಛತೆ ಪ್ರಯೋಗ ಮಾಡಿದೆವು. ನಿಧಾನಕ್ಕೆ ಶಾಲೆ, ಎಲ್ಲ ಶಾಲೆಗಳಂತೆ ಆಯಿತು.

ನಾವೂ ಎಲ್ಲೋ ಉಳಿಯುದಕ್ಕಿಂತ, ಇಲ್ಲೇ ಉಳಿಯೋಣ ಎಂದು ಮನಸ್ಸು ಮಾಡಿದೆವು. ಹತ್ತು ವರ್ಷದಿಂದ ಇದೇ ಊರಿನಲ್ಲಿ ಉಳಿದೆವು. ಒಬ್ಬರ ಸ್ಥಳದಲ್ಲಿ ಗೌಳಿಗರ ನೆರವಿನಿಂದ 25 ಸಾವಿರ ರೂ. ಖರ್ಚು ಮಾಡಿ ಮನೆ ಕಟ್ಟಿದೆವು. ಕೇವಲ ಹದಿನೈದು ದಿನಕ್ಕೆ ಕಟ್ಟಿದ ಮನೆ. ಮರದ ಕಂಬ ನಿಲ್ಲಿಸಿ, ಹೆಂಚು ಹಚ್ಚಿ, ತಟ್ಟಿ ಕಟ್ಟಿ, ಅದಕ್ಕೆ ಮಣ್ಣಿನ ಭರಣಿ ತಟ್ಟಿ ಕಟ್ಟಿದ ಗೋಡೆಯ ಮನೆ. ನಮ್ಮಾಕೆ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಹಳ್ಳಿಯವರು. ಅವರೂ ಇಲ್ಲೇ ಉಳಿಯಲು ಮನಸ್ಸು ಮಾಡಿದರು. ಗೌಳಿಗರ ಒಡನಾಟ ಅವರ ಸಂಭ್ರಮ ಹೆಚ್ಚಿಸಿದೆ. ಖುಷಿಯಾಗಿದ್ದೇವೆ. ನಮ್ಮ ಮಕ್ಕಳಂತೆ ಊರ ಮಕ್ಕಳು. ಊರ ಮಕ್ಕಳಂತೆ ನಮ್ಮ ಮಕ್ಕಳು!

Advertisement

ಶಾಲೆಗೆ ಅನೇಕ ಅಧಿಕಾರಿಗಳು, ಜನಪ್ರತಿನಿಧಿಗಳು ಬಂದರು. ಈ ಊರಿಗೆ ರಸ್ತೆ ಆಗಬೇಕು, ಕರೆಂಟು ಬರಬೇಕು. ಊರು ಸುಧಾರಣೆ ಆಗಬೇಕು ಎಂದು ಮನವಿ ಕೊಟ್ಟೆವು. ಪರಿಣಾಮ, ಊರಿಗೆ ರಸ್ತೆ ಹಾಸಿಕೊಂಡಿತು. ಗೌಳಿವಾಡದಲ್ಲಿ ಚೆಂದದ ಸಿಮೆಂಟ್‌ ರಸ್ತೆಯೂ ಆಯಿತು. ಊರು ನಿಧಾನಕ್ಕೆ ಕಳೆಗಟ್ಟಿತು. ಸಿಮಂಟ್‌ ರಸ್ತೆಯ ಪಕ್ಕ ಸಾಲು ಗಿಡ ನೆಟ್ಟೆವು. ಶೌಚಾಲಯಗಳು ಬಂದವು. ಆಶ್ರಯ ಮನೆಗಳು ಎದ್ದು ನಿಂತವು. ನಲ್ಲಿಗಳಲ್ಲಿ ನೀರೂ ಬಂತು.

ಆದರೂ, ಈ ಊರಿಗೆ ಕರೆಂಟೇ ಇಲ್ವಲ್ಲ ಎಂಬ ಚಿಂತೆಯಿತ್ತು. ಕಂಬಗಳು, ವಿದ್ಯುತ್‌ ತಂತಿಗಳಿದ್ದರೂ ವಿದ್ಯುತ್‌ ಎಲ್ಲ ಮನೆಗಳಿಗೂ ಸಿಕ್ಕಿರಲಿಲ್ಲ. ಏನಾದರೂ ಮಾಡಿ ಬೆಳಕು ಹರಿಸಬೇಕು ಎಂದು ಯೋಚಿಸಿದೆವು. ಜನಪ್ರತಿನಿಧಿಗಳಿಗೆ, ಶಾಸಕರಿಗೆ, ಅಧಿಕಾರಿಗಳಿಗೆ ಮನವಿ ಕೊಟ್ಟೆವು. ಸೆಲ್ಕೋ ಸೋಲಾರ್‌ ಸಿಇಒ ಮೋಹನ್‌ ಹೆಗಡೆ ಅವರನ್ನು ಭೇಟಿ ಮಾಡಿ ಸೋಲಾರಿಗೂ ಮನವಿ ಮಾಡಿದೆವು. ಈಗ ಎಲ್ಲರ ಮನೆಗೂ ಸೋಲಾರ್‌ ಬಂದಿದೆ. ಒಂದು ಪುಟ್ಟ ಹಿಟ್ಟಿನ ಗಿರಣಿ ಕೂಡ ಬಂದಿದೆ. ಗೋಬರ್‌ ಗ್ಯಾಸ್‌ ಘಟಕವೂ ಕೆಲಸ ಮಾಡಲು ಶುರುಮಾಡಿದೆ. ಅರ್ಧದಷ್ಟು ಹಣವನ್ನು ಗೌಳಿಗರು ಹಾಕಿದ್ದಾರೆ. ಉಳಿದ ಅರ್ಧದಷ್ಟು ಸೆಲ್ಕೊ ಹಾಕಿಕೊಂಡಿದೆ. ಸೋಲಾರ್‌ ಬೆಳಕಿನಡಿ, ರಾತ್ರಿಯ ದಾರಿ ಸಾಗುತ್ತಿದೆ.

– ಇವೆಲ್ಲವೂ ಹನುಮಂತಪ್ಪ ಮೇಷ್ಟ್ರು ಹೇಳಿದ ಕತೆ. ಇವರು ಮೂಲತಃ ಹಾನಗಲ್‌ ತಾಲೂಕಿನವರು. ಗೌಳಿಗರ ನಡುವೆಯೇ ಬಾಳುತ್ತಾ, ಅವರ ಬಡತನ ಹೋಗಲಾಡಿಸಲು ಇದ್ದಲ್ಲೇ ಸ್ವರ್ಗ ಕಟ್ಟುತ್ತಿರುವ ಅಕ್ಷರಯೋಗಿ.

– ರಾಘವೇಂದ್ರ ಬೆಟ್ಟಕೊಪ್ಪ, ಶಿರಸಿ

Advertisement

Udayavani is now on Telegram. Click here to join our channel and stay updated with the latest news.

Next