Advertisement

4 ದಿನ ಮಳೆಯಬ್ಬರ: ದಕ್ಷಿಣ ರಾಜ್ಯಗಳಲ್ಲಿ ಭಾರೀ ಮಳೆ ; ಕೇರಳದಲ್ಲಿ ಭೂಕುಸಿತದಿಂದ 5 ಸಾವು

12:08 AM Aug 30, 2022 | Team Udayavani |

ಹೊಸದಿಲ್ಲಿ: ಇಡೀ ದೇಶವೇ ಗಣೇಶ ಚತುರ್ಥಿ ಹಬ್ಬದ ಸಂಭ್ರಮದಲ್ಲಿರುವಾಗ ವರುಣ ಮತ್ತೆ ಅಬ್ಬರಿಸತೊಡಗಿದ್ದಾನೆ. ಹಲವೆಡೆ ಮಳೆಯ ಆರ್ಭಟ ತೀವ್ರಗೊಂಡಿದೆ. ಕೇರಳ, ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಈ ವಾರ ಪೂರ್ತಿ ಮಳೆಯಾಗುವ ನಿರೀಕ್ಷೆಯಿದೆ.

Advertisement

ಕೇರಳದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ರವಿವಾರ ರಾತ್ರಿ ಬೆಳಗಾಗುವುದರೊಳಗೆ ಹಲವು ಪ್ರದೇಶಗಳಲ್ಲಿ ದಿಢೀರ್‌ ಪ್ರವಾಹ ಉಂಟಾಗಿ, ಅನೇಕ ಗ್ರಾಮಗಳು ಜಲಾವೃತಗೊಂಡಿವೆ. ತೋಡುಪ್ಪುಳದಲ್ಲಿ ಸೋಮವಾರ ಸಂಭವಿಸಿದ ಭೂಕುಸಿತಕ್ಕೆ ಒಂದೇ ಕುಟುಂಬದ ಐವರು ಬಲಿಯಾಗಿದ್ದಾರೆ.

ಶುಕ್ರವಾರದ ವರೆಗೂ ಮಳೆಯಬ್ಬರ ಇದೇ ರೀತಿ ಮುಂದುವರಿಯಲಿದೆ ಎಂದು ಭಾರತೀಯ ಹವಾ ಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ತಿರುವನಂತ ಪುರ ಸೇರಿದಂತೆ ಕೇರಳದ ಎಲ್ಲ ಜಿಲ್ಲೆಗಳಿಗೂ 5 ದಿನಗಳ ಕಾಲ ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಮಲ ಪ್ಪುರಂ, ಕಲ್ಲಿಕೋಟೆ, ಕಣ್ಣೂರು ಜಿಲ್ಲೆಗಳಲ್ಲಿ ಮಳೆಯಬ್ಬ ರದಿಂದ ದಿಢೀರ್‌ ಪ್ರವಾಹ ಮತ್ತು ಭೂಕುಸಿತ ಸಂಭವಿಸಿವೆ. ಮಲ್ಲಪ್ಪಳ್ಳಿ ತಾಲೂಕಿನಲ್ಲಿ ಹಲವು ಮನೆ, ಅಂಗಡಿಗಳಿಗೆ ನೀರು ನುಗ್ಗಿದೆ. ಕಾರೊಂದು ನೀರಿನಲ್ಲಿ ಕೊಚ್ಚಿಹೋಗಿದ್ದು, ಸ್ಥಳೀಯರು ಸೇರಿ ಅದನ್ನು ಮರವೊಂದಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಕೇರಳದಲ್ಲಿ ಆಗಸ್ಟ್‌ ತಿಂಗಳಲ್ಲಿ ಕೇರಳದಲ್ಲಿ ವಾಡಿಕೆಗಿಂತ ಶೇ. 16ರಷ್ಟು ಹೆಚ್ಚು ಮಳೆ ಸುರಿದಿದೆ.

ನದಿಗೆ ದೂಡಿದ ವೀಡಿಯೋ ವೈರಲ್‌
ಮಧ್ಯಪ್ರದೇಶದ ಸಾತ್ನಾ ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರುವ ನದಿಯೊಂದಕ್ಕೆ ಗೋವುಗಳು ಸೇರಿದಂತೆ 15 ಜಾನುವಾರುಗಳನ್ನು ನೂಕಿರುವಂಥ ವೀಡಿಯೋ ವೈರಲ್‌ ಆಗಿದೆ. ಗುಂಪೊಂದು ಈ ಜಾನುವಾರುಗಳನ್ನು ನದಿಗೆ ದೂಡಿದ್ದು, ಅವುಗಳು ಹೊರಬರಲು ಪ್ರಯತ್ನಿಸಿದರೂ ಮತ್ತೆ ಸುತ್ತುವರಿದು ಅವುಗಳನ್ನು ಕೊಚ್ಚಿಹೋಗುವಂತೆ ಮಾಡಲಾಗಿದೆ. ಪ್ರಕರಣ ಸಂಬಂಧ ಲಾಲ್‌ಭಾಯಿ ಪಟೇಲ್‌, ರಾಂಪಾಲ್‌, ಸುನೀಲ್‌ ಪಾಂಡೆ ಸೇರಿ 6ಕ್ಕೂ ಅಧಿಕ ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪಾಕ್‌ ಪ್ರವಾಹ: ಮೃತರ ಸಂಖ್ಯೆ 1,100ಕ್ಕೆ: ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ಥಾನವನ್ನು ಪ್ರವಾಹ ಕಂಗೆಡಿಸಿದೆ. ನೆರೆಗೆ ಬಲಿಯಾದವರ ಸಂಖ್ಯೆ 1,100ಕ್ಕೆ ಏರಿಕೆಯಾಗಿದೆ. ಈವರೆಗೆ 3.30 ಕೋಟಿ ಮಂದಿ ಅಂದರೆ, ಪಾಕ್‌ ಜನಸಂಖ್ಯೆಯ ಏಳನೇ ಒಂದರಷ್ಟು ಮಂದಿ ನಿರ್ವಸಿತರಾಗಿದ್ದಾರೆ. 10 ಲಕ್ಷ ಮನೆಗಳು ಕುಸಿದುಬಿದ್ದಿವೆ. ಪ್ರಧಾನಿ ಶೆಹಬಾಜ್‌ ಷರೀಫ್ ಅವರು ಸಹಾಯ ಯಾಚಿಸಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಪರಿಹಾರ ಹರಿದುಬರಲಾರಂಭಿಸಿದೆ. ಈ ಮಳೆಯನ್ನು ದೇಶದ ಹವಾಮಾನ ಬದಲಾವಣೆ ಸಚಿವ ಶೆರ್ರಿ ರೆಹಮಾನ್‌, “ಶತಮಾನದ ರಾಕ್ಷಸ ಮಳೆ’ ಎಂದು ಕರೆದಿದ್ದಾರೆ.

Advertisement

ನದಿಯಲ್ಲಿ ಕೊಚ್ಚಿ
ಹೋದ ಯುವಕರು
ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿರುವ ಯಮುನಾ ನದಿಯಲ್ಲಿ ಶ್ರೀಕೃಷ್ಣನ ವಿಗ್ರಹ ವಿಸರ್ಜನೆಗೆಂದು ಹೊರಟಿದ್ದ ಐವರು ಯುವ ಕರು ಸೋಮವಾರ ಕೊಚ್ಚಿಹೋದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ವಿಗ್ರಹ ವಿಸರ್ಜನೆ ಬಳಿಕ ನದಿಯಲ್ಲೇ ಸ್ನಾನಕ್ಕಿಳಿದ ಅವರು ನೀರಿನ ರಭಸದಿಂದ ಮುಳುಗಿ ಸಾವ ನ್ನಪ್ಪಿ ದ್ದಾರೆ. ಉತ್ತರಾಖಂಡದ ಡೆಹ್ರಾ ಡೂನ್‌ನ ರಾಜ್‌ಪುರ ದಲ್ಲಿ ಭಾರೀ ಮಳೆ ಯಿಂದಾಗಿ ಮನೆಯೊಂದು ಕುಸಿದುಬಿದ್ದಿದ್ದು, ಇಬ್ಬರು ಮಹಿಳೆಯರು ಮತ್ತು ಒಂದು ಮಗು ಮೃತಪಟ್ಟಿದೆ.

ಬರಪೀಡಿತ ಪ್ರದೇಶಕ್ಕೆ ಪ್ರವಾಹ ಎಚ್ಚರಿಕೆ!
ಹವಾಮಾನ ವೈಪರೀತ್ಯದ ವಿಪರ್ಯಾಸಕ್ಕೆ ಮತ್ತೂಂದು ಉದಾಹರಣೆ ಎಂಬಂತೆ ಈ ತಿಂಗಳಿಡೀ ಬರಗಾಲದಿಂದ ನಲುಗಿರುವ ಚೀನದ ನೈಋತ್ಯ ಭಾಗದಲ್ಲಿ ಏಕಾಏಕಿ ಭಾರೀ ಮಳೆ ಹಾಗೂ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಚೋಂಗ್‌ಖೀಂಗ್‌ ಮತ್ತು ಸಿಚುವಾನ್‌ ಪ್ರಾಂತ್ಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಏಕಾಏಕಿ ಮಳೆ ಸುರಿಯಲಾರಂಭಿಸಿದ್ದು, ಪ್ರವಾಹದ ಭೀತಿ ಎದುರಾಗಿದೆ. ಈ ತಿಂಗಳ ಆರಂಭದಲ್ಲಿ ಇಲ್ಲಿನ ಜಲಾಶಯಗಳೆಲ್ಲ ಬತ್ತಿ ಹೋಗಿ, ವಿದ್ಯುತ್‌ಗೆ ತೀವ್ರ ಅಭಾವ ಉಂಟಾದ ಹಿನ್ನೆಲೆಯಲ್ಲಿ ಸರಕಾರವು “ರಾಷ್ಟ್ರೀಯ ಬರ ತುರ್ತು ಪರಿಸ್ಥಿತಿ’ ಘೋಷಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next