Advertisement

ಮ್ಯೂಚುವಲ್ ಫ‌ಂಡ್‌ ಹೂಡಿಕೆದಾರರ 5 ತಪ್ಪುಗಳು!

11:36 PM Aug 04, 2019 | mahesh |

ಭಾರತದಲ್ಲಿ ಬಂಡವಾಳ ಹೂಡುವ ವಿಶ್ವಸನೀಯ ಮಾರ್ಗ ಗಳಲ್ಲಿ ಮ್ಯೂಚುವಲ್ ಫ‌ಂಡ್‌ ಪ್ರಮುಖವಾದುದು. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿ ಮ್ಯೂಚುವಲ್ ಫ‌ಂಡ್‌ನ‌ತ್ತ ಆಕರ್ಷಿತರಾಗುತ್ತಿದ್ದಾರೆ. ಮ್ಯೂಚುವಲ್ ಫ‌ಂಡ್‌ ಯೋಜನೆಗಳು ಅದೆಷ್ಟೇ ಸರಳ ಮತ್ತು ಲಾಭಕರವಾಗಿದ್ದರೂ ಹೂಡಿಕೆದಾರರು, ತಮ್ಮ ಬಂಡವಾಳವನ್ನು ಸೂಕ್ತವಾಗಿ ನಿರ್ವಹಣೆ ಮಾಡದಿದ್ದರೆ ನಷ್ಟವಾಗುತ್ತದೆ. ತಪ್ಪು ನಿರ್ಧಾರಗಳಿಂದ ಆರ್ಥಿಕ ಅಸ್ಥಿರತೆ ಉಂಟಾಗಬಹುದು. ಹೂಡಿಕೆ ಮಾಡಿದ ಬಂಡವಾಳ ಲಾಭ ತರಬೇಕು. ಹೀಗಾಗಿ ಕಷ್ಟಪಟ್ಟು ಗಳಿಸಿದ ಹಣವನ್ನು ವ್ಯವಸ್ಥಿತವಾಗಿ ಬಳಸಬೇಕು. ಮ್ಯೂಚುವಲ್ ಫ‌ಂಡ್‌ ಹೂಡಿಕೆದಾರರು ಎಸಗುವ 5 ಸಾಮಾನ್ಯ ತಪ್ಪುಗಳು ಇವು.

Advertisement

ಲಾಭದ ಗುರಿ ಹಾಕುವುದು
ಬಂಡವಾಳ ಹೂಡಿಕೆ ಮಾಡುವುದೇ ಲಾಭಕ್ಕೋಸ್ಕರ. ಹೀಗಾಗಿ ನಿರ್ದಿಷ್ಟ ಮೊತ್ತದಷ್ಟು ಲಾಭದ ಗುರಿಯನ್ನು ಹೂಡಿಕೆದಾರ ಹಾಕಿಕೊಂಡಿರಬೇಕು. ನಮ್ಮ ಆರ್ಥಿಕ ಶಕ್ತಿಗೆ ತಕ್ಕಂತೆ, ಹೆಚ್ಚು ಪ್ರಯೋಜನಗಳನ್ನು ಒದಗಿಸುವ ಯೋಜನೆಗಳನ್ನು ಹುಡುಕಿ, ಪರಾಮರ್ಶಿಸಿ, ಬಳಿಕವೇ ಬಂಡವಾಳ ಹೂಡಬೇಕು.

ಕಡಿಮೆ ಅವಧಿಯ ಹೂಡಿಕೆ
ಮ್ಯೂಚುವಲ್ ಫ‌ಂಡ್‌ನ‌ಲ್ಲಿ ದೀರ್ಘಾವಧಿಗೆ ಹೂಡಿಕೆ ಮಾಡಿದಷ್ಟೂ ಹೆಚ್ಚು ಲಾಭ ದೊರೆಯುತ್ತದೆ. ಕಡೇ ಪಕ್ಷ 5 ರಿಂದ 7 ವರ್ಷಗಳ ಅವಧಿಗಾದರೂ ಹೂಡಿಕೆ ಮಾಡುವುದು ಉತ್ತಮ. ದೀರ್ಘಾವಧಿಯ ಕಾಲ ಬಂಡವಾಳ ಹೂಡಿಕೆ ಮಾಡುವುದರಿಂದ, ಒಳಹೊರಗು ತಿಳಿಯುವುದರ ಜತೆಗೆ, ಮಾರುಕಟ್ಟೆಯಲ್ಲಿ ನಿಯಂತ್ರಣ ಸಾಧಿಸಬಹುದಾಗಿದೆ.

ಎನ್‌ಎವಿಗೆ ಹೋಲಿಕೆ
ದಿ ಚೀಪರ್‌, ದಿ ಬೆಟರ್‌’ ಎಂಬ ಮಾತನ್ನು ನೀವು ಕೇಳಿರುತ್ತೀರಿ. ಮ್ಯೂಚುವಲ್ ಫ‌ಂಡ್ಸ್‌ ವಿಷಯದಲ್ಲಿ ಹಾಗನ್ನಲು ಸಾಧ್ಯವೇ ಇಲ್ಲ. ಸಾಮಾನ್ಯವಾಗಿ ಹೊಸ ಹೂಡಿಕೆದಾರರು ಈ ತಪ್ಪನ್ನು ಮಾಡುತ್ತಾರೆ. ಅವರು ಮ್ಯೂಚುವಲ್ ಫ‌ಂಡ್‌ನ‌ ನಿವ್ವಳ ಆಸ್ತಿ ಮೌಲ್ಯ (NAV- Net Asset Value)ಕ್ಕೆ ತಕ್ಕಂತೆ ಬಂಡವಾಳ ಹಾಕುತ್ತಾರೆ. ಅದು ತಪ್ಪು. ಮ್ಯೂಚುವಲ್ ಫ‌ಂಡ್ಸ್‌ಗಳನ್ನು ಯೂನಿಟ್ ಲೆಕ್ಕದಲ್ಲಿ ಖರೀದಿಸಲಾಗುತ್ತದೆ. ಪ್ರತಿ ಯೂನಿಟ್ ಬೆಲೆ ಎಷ್ಟಿದೆ ಎಂಬುದನ್ನು ಹೂಡಿಕೆದಾರರು ತಿಳಿದಿರಬೇಕು.
ಹಲವು ಹೂಡಿಕೆ
ವಿವಿಧ ಮ್ಯೂಚುವಲ್ ಫ‌ಂಡ್‌ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ಲಾಭ ಹೆಚ್ಚು ಎನ್ನುವುದು ತಪ್ಪು ಕಲ್ಪನೆ. ಈ ರೀತಿ ಹೂಡಿಕೆ ಮಾಡುವುದರಿಂದ ನಷ್ಟವಾಗುವ ಸಾಧ್ಯತೆ ಹೆಚ್ಚು. ಕೆಲ ಯೋಜನೆಗಳು ನಮ್ಮ ಹೂಡಿಕೆಗೆ ತಕ್ಕಂತೆ ಲಾಭ ತಂದುಕೊಡದೇ ಇರಬಹುದು. ಅಲ್ಲದೆ, ಹಲವು ಯೋಜನೆಗಳಲ್ಲಿ ಹೂಡಿಕೆ ಮಾಡಿದಾಗ ವಿವಿಧ ದಿನಾಂಕಗಳಲ್ಲಿ ಹಣ ಕಡಿತಗೊಳ್ಳುವ ಕಾರಣ ಹೂಡಿಕೆದಾರನ ಖಾತೆಯೂ ಖಾಲಿಯಾಗುತ್ತದೆ. ಅದೇ ರೀತಿ, ಎಲ್ಲ ಹಣವನ್ನೂ ಒಂದೇ ಯೋಜನೆಯಲ್ಲಿ ಹೂಡಿಕೆ ಮಾಡುವುದೂ ಆರೋಗ್ಯಕರವಲ್ಲ.
ನಷ್ಟದ ನಿರ್ಲಕ್ಷ್ಯ
ಹೂಡಿಕೆ ಏರಿಳಿತಗಳ ಗೂಳಿ ಆಟವಿದ್ದಂತೆ. ಮೂಲ ಬಂಡವಾಳವೇ ಕೈತಪ್ಪಿ ಹೋಗುವ ಅಪಾಯವೂ ಇರುತ್ತದೆ. ಈ ವೇಳೆ ನಿರ್ಲಕ್ಷ್ಯ ವಹಿಸಬಾರದು. ನಷ್ಟವಾಗುವ ಸಾಧ್ಯತೆಗಳಿದ್ದರೆ ಅದನ್ನು ಖಾತರಿ ಪಡಿಸಿಕೊಂಡು ಇನ್ನಿತರ ಯೋಜನೆಗಳಿಂದ ಹೂಡಿಕೆ ವಾಪಸ್‌ ಪಡೆಯುವ ಬಗ್ಗೆ ಚಿಂತಿಸಬೇಕು. ಇಲ್ಲವೇ, ಸದ್ಯಕ್ಕೆ ನಷ್ಟ ಅನುಭವಿಸಿದರೂ ಮುಂದಿನ ಆರು ತಿಂಗಳಿಗೆ ನಿಮ್ಮ ಖಾತೆಯಲ್ಲಿ ಹಣ ಇರುವಂತೆ ನೋಡಿಕೊಳ್ಳಿ.

•ಮಲ್ಲಪ್ಪ ಪಾರೆಗಾಂವ

Advertisement

Udayavani is now on Telegram. Click here to join our channel and stay updated with the latest news.

Next