Advertisement

ನಗರದಲ್ಲಿ 5 ಲೋಡ್‌ ಪ್ಲಾಸ್ಟಿಕ್‌ ವಸ್ತು ವಶ

12:19 PM May 19, 2017 | Team Udayavani |

ಮೈಸೂರು: ದೇಶದ ನಂಬರ್‌ ಒನ್‌ ಸ್ವತ್ಛ ನಗರಿ ಎಂಬ ಪಟ್ಟ ಕಳಚಿಕೊಂಡ ನಂತರ ಎಚ್ಚೆತ್ತಿರುವ ನಗರಪಾಲಿಕೆ ಆಡಳಿತ ಮೈಸೂರನ್ನು ಪ್ಲಾಸ್ಟಿಕ್‌ ಮುಕ್ತ ನಗರವನ್ನಾಗಿಸಲು ದಾಳಿ ಮುಂದುವರಿಸಿದ್ದು ಅಂದಾಜು 5 ಲೋಡ್‌ಗಳಷ್ಟು ಪ್ಲಾಸ್ಟಿಕ್‌ ವಸ್ತುಗಳನ್ನು ವಶಪಡಿಸಿಕೊಂಡಿದೆ.

Advertisement

ಬೆಳಗ್ಗೆ 8 ಗಂಟೆಯಿಂದಲೇ ಪಾಲಿಕೆ ಆಯುಕ್ತ ಜಿ.ಜಗದೀಶ್‌ ನೇತೃತ್ವದಲ್ಲಿ ಮಹಾ ನಗರಪಾಲಿಕೆ ಅಧಿಕಾರಿಗಳು ಗುರುವಾರ ನಗರದ ಬಂಡೀಪಾಳ್ಯದಲ್ಲಿ ರುವ ಎಪಿಎಂಸಿ ಯಾರ್ಡ್‌ನ ಮಳಿಗೆಗಳ ಮೇಲೆ ದಾಳಿ ಮಾಡಿ ಸುಮಾರು 5 ಲೋಡ್‌ ಪ್ಲಾಸ್ಟಿಕ್‌ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮೊದಲಿಗೆ ಎಪಿಎಂಸಿ ಯಾರ್ಡ್‌ನ ಮೀನಾಕ್ಷಿ ಟ್ರೇಡರ್ ಮಳಿಗೆ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಪ್ಲಾಸ್ಟಿಕ್‌ ಲೋಟ, ಟೇಬಲ್‌ ರೋಲ್‌, ಸ್ಪೂನ್‌, ಪ್ಲೇಟ್‌ ಹಾಗೂ ಇನ್ನಿತರೆ ಸುಮಾರು ಮೂರು ಲೋಡ್‌ ಪ್ಲಾಸ್ಟಿಕ್‌ ವಸ್ತುಗಳನ್ನು ವಶಕ್ಕೆ ಪಡೆದುಕೊಂಡರು.

ಮಧು ಮಾರ್ಕೆಟಿಂಗ್‌, ಸೂಪರ್‌ ಟ್ರೇಡರ್ ಮಳಿಗೆಗೆ ದಾಳಿ ನಡೆೆಸಿ ಒಂದು ಲೋಡ್‌ನ‌ಷ್ಟು ಪ್ಲಾಸ್ಟಿಕ್‌ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಲ್ಲದೆ ಏಳಕ್ಕೂ ಅಧಿಕ ಮಳಿಗೆಗಳಿಗೆ ದಾಳಿ ಮಾಡಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಲಕ್ಷಾಂತರ ರೂ.ಮೌಲ್ಯದ ಪ್ಲಾಸ್ಟಿಕ್‌ ವಸ್ತುಗಳನ್ನು ವಶಪಡಿಸಿಕೊಂಡರು.

ಮೈಸೂರನ್ನು ಪ್ಲಾಸ್ಟಿಕ್‌ ಮುಕ್ತ ನಗರ ಎಂದು ಘೋಷಣೆ ಮಾಡಿದ್ದರೂ ಪ್ಲಾಸ್ಟಿಕ್‌ ಬಳಕೆ ನಡೆಯುತ್ತಿರುಮದರ ವಿರುದ್ಧ ದಾಳಿ ಮುಂದುವರಿಸಿರುವ ವಿಷಯ ತಿಳಿದ ಜಿಲ್ಲಾಧಿಕಾರಿ ಡಿ.ರಂದೀಪ್‌ ಎಪಿಎಂಸಿ ಯಾರ್ಡ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಈ ವೇಳೆ ಮಾತನಾಡಿದ ಅವರು, ಮೈಸೂರು ಎರಡು ಬಾರಿ ಸ್ವತ್ಛ ನಗರಿ ಪ್ರಶಸ್ತಿ ಪಡೆದಿರುವ ಹಿನ್ನೆಲೆ ನಗರದ ಸ್ವತ್ಛತೆ ಕಾಪಾಡುವ ಸಲುವಾಗಿ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಲಾಗಿದೆ. ಆದರೂ ಕೆಲ ಅಂಗಡಿಗಳ ಮಾಲೀಕರು ಆದೇಶವನ್ನು ಧಿಕ್ಕರಿಸಿ ಪ್ಲಾಸ್ಟಿಕ್‌ ಬಳಕೆ ಮಾಡುತ್ತಿದ್ದಾರೆ.

ಅಂತಹವರಿಗೆ ಎಚ್ಚರಿಕೆ ನೀಡುವ ಸಲುವಾಗಿ ದಾಳಿ ಮಾಡಲಾಗಿದೆ. ಇನ್ನು ಮುಂದೆ ಇಂತಹ ಪ್ರಕರಣ ಮರುಕಳಿಸಿದರೆ ಅಂತಹವರ ಪರವಾನಗಿಯನ್ನು ರದ್ದು ಮಾಡುವುದಲ್ಲದೆ ಜಿಲ್ಲೆಯಲ್ಲಿ ಯಾವುದೇ ವ್ಯಾಪಾರ ವಹಿವಾಟು ನಡೆಸದಂತೆ ನಿರ್ಬಂಧ ಹೇರಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಾಲಿಕೆ ಆಯುಕ್ತ ಜಿ.ಜಗದೀಶ್‌ ಮಾತನಾಡಿ, ನಗರದಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿದ್ದರೂ ಕೆಲ ಅಂಗಡಿಗಳ ಮಾಲೀಕರು ನಿಯಮ ಉಲ್ಲಂ ಸಿ ಬಳಕೆ ಮಾಡುತ್ತಿದ್ದಾರೆ. ಈ ಸಂಬಂಧ ಕಳೆದ ಮೂರು ದಿನಗಳಿಂದ ನಗರದ ಸಂತೇಪೇಟೆ ಸೇರಿದಂತೆ ಅನೇಕ ಕಡೆ ದಾಳಿ ನಡೆಸಲಾಗಿದೆ.

ಸಂತೇಪೇಟೆ ಮೂಲಕ ಪ್ಲಾಸ್ಟಿಕ್‌ ವಸ್ತುಗಳು ಸರಬರಾಜಾಗುವ ವಿಷಯ ತಿಳಿದು ದಾಳಿ ಮಾಡಲಾಗಿದೆ. ಮೈಸೂರನ್ನು ಮತ್ತೆ ಸ್ವತ್ಛನಗರಿಯಾಗಿಸಲು ಪ್ಲಾಸ್ಟಿಕ್‌ ಮುಕ್ತ ಮಾಡುವ ಪಣ ತೊಟ್ಟಿದ್ದು, ದಾಳಿ ಮುಂದುವರಿಯುತ್ತದೆ. ಅಲ್ಲದೆ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಸಹ ದಾಖಲು ಮಾಡಲಾಗುತ್ತದೆ ಎಂದು ತಿಳಿಸಿದರು.

ಪಾಲಿಕೆ ಸಹಾಯಕ ಆಯುಕ್ತ ಜವರೇಗೌಡ, ಪಾಲಿಕೆ ಆರೋಗ್ಯಾಧಿಕಾರಿ ಡಾ.ರಾಮಚಂದ್ರ, ಪರಿಸರ ನಿಯಂತ್ರಣ ಮಂಡಳಿಯ ನೂಬಿಯಾ, ಶ್ರುತಿ ಇತರ ಅಧಿಕಾರಿಗಳು ದಾಳಿಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next