ಬೆಂಗಳೂರು: ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯ ಸುಧಾರಣೆಗೆ ಮಂತ್ರ ಜಪಿಸುತ್ತಲೇ ಪೊಲೀಸರಿಗೆ ಶಾಕ್ ನೀಡಿದ್ದು, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೇದೆಗಳಾಗಿ ನೇಮಕಗೊಂಡ 5 ವರ್ಷದೊಳಗೆ ಕೆಲಸ ಬಿಟ್ಟರೆ ದಂಡ ಕಟ್ಟಬೇಕು ಎಂದು ಆದೇಶ ಹೊರಡಿಸಿದೆ.
ಪೊಲೀಸ್ ಇಲಾಖೆಗೆ ಪೇದೆಗಳಾಗಿ ನೇಮಕವಾಗುವವರು ಬೇರೆ ಇಲಾಖೆಯಲ್ಲಿ ಕೆಲಸ ದೊರೆತ ತಕ್ಷಣ ಕೆಲಸಕ್ಕೆ ರಾಜೀನಾಮೆ ನೀಡಿ ಬೇರೆ ಇಲಾಖೆಗೆ ಸೇರಿಕೊಳ್ಳುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ಅದನ್ನು ತಡೆಯಲು ಗೃಹ ಇಲಾಖೆ ಹೊಸ ಅಸ್ತ್ರ ಪ್ರಯೋಗಿಸಿದ್ದು, ಪೇದೆಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ನೇಮಕಗೊಂಡವರು ತರಬೇತಿಗೆ ಹಾಜರಾಗುವಾಗಲೇ ತಾವು ಐದು ವರ್ಷಕ್ಕಿಂತ ಮುಂಚೆ ಕೆಲಸ ಬಿಡುವುದಾದರೆ 50 ಸಾವಿರ ದಂಡ ಕಟ್ಟುವುದಾಗಿ 100 ರೂಪಾಯಿ ಛಾಪಾ ಕಾಗದದ ಮೇಲೆ ಮುಚ್ಚಳಿಕೆ ಬರೆದುಕೊಡುವ ವ್ಯವಸ್ಥೆ ಜಾರಿಯಲ್ಲಿತ್ತು. ಈಗ ಅದನ್ನು 2 ಲಕ್ಷಕ್ಕೆ ಏರಿಸಿದ್ದು, 500 ರೂಪಾಯಿ ಬಾಂಡ್ ಪೇಪರ್‌ನಲ್ಲಿ ಮುಚ್ಚಳಿಕೆ ಬರೆದುಕೊಡಲು ಸೂಚಿಸಲಾಗಿದೆ. ಇದೇ ವ್ಯವಸ್ಥೆಯನ್ನು ಪೇದೆ ಹುದ್ದೆಗೆ ನೇಮಕವಾಗುವವರಿಗೂ ಅನ್ವಯಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಪೊಲೀಸ್ ಇಲಾಖೆಯ ಶೇ.80 ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವ ಪೇದೆಗಳ ಮೇಲೆ ನಿರ್ಬಂಧದ ಬರೆ ಎಳೆಯಲಾಗಿದೆ.
ಏನಿದು ಆದೇಶ: ಸರ್ಕಾರದ ಹೊಸ ಆದೇಶದ ಪ್ರಕಾರ ಪೇದೆ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿ ತರಬೇತಿಗೆ ಹಾಜರಾಗುವಾಗಲೇ ಮೊದಲು ಐದು ವರ್ಷಕ್ಕಿಂತ ಮೊದಲು ಹುದ್ದೆಗೆ ರಾಜೀನಾಮೆ ನೀಡಿದರೆ, 1 ಲಕ್ಷ ರೂ. ದಂಡ ಕೊಡುವುದಾಗಿ 500 ರೂಪಾಯಿ ಛಾಪಾ ಕಾಗದದಲ್ಲಿ ಮುಚ್ಚಳಿಕೆ ಬರೆದು ಕೊಡಬೇಕು ಎಂದು ಆದೇಶಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಪಾಸಾದವರು ಪೇದೆ ಹುದ್ದೆಗೆ ಸೇರಿಕೊಳ್ಳಲು ಅರ್ಹರಾಗಿರುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಪೇದೆ ಹುದ್ದೆಗೆ ಬಹುತೇಕ ಪದವಿ, ಸ್ನಾತಕೋತ್ತರ ಮಾಡಿದವರೇ ಹೆಚ್ಚಿದ್ದಾರೆ. ತಮ್ಮ ವಿದ್ಯಾರ್ಹತೆಗೆ ತಕ್ಕಂತೆ ಸರ್ಕಾರಿ ಹುದ್ದೆ ದೊರೆಯದ ಹಿನ್ನೆಲೆಯಲ್ಲಿ ಬಹುತೇಕರು ಸರ್ಕಾರಿ ಹುದ್ದೆಯಾಗಿರುವ ಪೇದೆಯಾದರೂ ಸಾಕೆಂದು ಸೇರಿಕೊಳ್ಳುತ್ತಾರೆ. ಅದೇ ಹುದ್ದೆಯಲ್ಲಿದ್ದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನೆದುರಿಸಿ ತಮ್ಮ ವಿದ್ಯಾರ್ಹತೆಗೆ ತಕ್ಕುದಾದ ಇತರ ಹುದ್ದೆಗಳಿಗೆ ಆಯ್ಕೆಯಾದರೆ, ಪೇದೆ ಹುದ್ದೆಗೆ ರಾಜೀನಾಮೆ ನೀಡುತ್ತಾರೆ.
ಗೃಹ ಇಲಾಖೆ ಪ್ರತಿ ವರ್ಷ ಪೊಲೀಸ್ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡರೂ, ತರಬೇತಿ ಮುಗಿಸಿ ವರ್ಷ ಕಳೆಯುವುದರಲ್ಲಿ ಬೇರೆ ಹುದ್ದೆಗಳಿಗೆ ಹೋಗುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದು ಗೃಹ ಇಲಾಖೆಗೆ ತಲೆನೋವಾಗಿದ್ದು, ಅದನ್ನು ತಪ್ಪಿಸಲು ದಂಡದ ಅಸ್ತ್ರ ಪ್ರಯೋಗಿಸಿದೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ 2004ರಲ್ಲಿ ಪೊಲೀಸ್ ಹುದ್ದೆಯನ್ನು ತೊರೆಯುವವರ ಸಂಖ್ಯೆ 0.88ರಷ್ಟಿತ್ತು. 2010ರಲ್ಲಿ ಪ್ರಮಾಣ 2.19ಕ್ಕೇರಿ, 2012ಕ್ಕೆ 27ರಷ್ಟಾಯಿತು. 2015ರಲ್ಲಿ ಪೊಲೀಸ್ ಹುದ್ದೆ ತೊರೆಯುವವರ ಸಂಖ್ಯೆ ಶೇಕಡಾ 39ಕ್ಕೇರಿತು. ಅಂದರೆ, ಒಂದು ಸಾವಿರ ಪೊಲೀಸರಲ್ಲಿ ಕನಿಷ್ಠ 400 ಜನರು ಹುದ್ದೆ ತೊರೆದು ಬೇರೊಂದು ಇಲಾಖೆಗೆ ಸೇರುತ್ತಿದ್ದಾರೆ.
ಹುದ್ದೆ ತೊರೆಯಲು ಕಾರಣವೇನು?
ಪೇದೆ ಹುದ್ದೆಗೆ ಆಯ್ಕೆಯಾದ ಪದವೀಧರರಿಗೆ ಮೇಲಧಿಕಾರಿಗಳ ಅಧಿಕಾರದ ದರ್ಪದ ನಡವಳಿಕೆ ಹಿಡಿಸುತ್ತಿಲ್ಲ. ಸ್ನಾತಕೋತ್ತರ ಪದವೀಧರ ಪೇದೆಯೊಬ್ಬ ಪದವಿ ಪಡೆದ ಐಪಿಎಸ್ ಅಧಿಕಾರಿಯ ಮುಂದೆ ಕೈ ಕಟ್ಟಿ ನಿಲ್ಲುವುದು. ಅವರ ಖಾಸಗಿ ಸೇವೆ ಮಾಡುವುದು ಇಂದಿನ ಯುವಕರ ಮನಸ್ಥಿತಿಗೆ ಒಪ್ಪಿತವಾಗದಿರುವುದು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ತೊರೆಯಲು ಕಾರಣ ಎಂದು ರಾಘವೇಂದ್ರ
ಔರಾದ್ಕರ್ ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ತಿಳಿಸಿದ್ದಾರೆ. ಆದರೆ, ರಾಜ್ಯ ಸರ್ಕಾರ ಗೃಹ ಇಲಾಖೆಯಲ್ಲಿ ಮೇಲಿಂದ ಮೇಲೆ ಹುದ್ದೆಗಳು ಖಾಲಿಯಾಗುತ್ತಿರುವುದನ್ನು ತಪ್ಪಿಸಲು ಪೊಲಿಸ್ ಪೇದೆಗಳ ಮೇಲೆ ನಿಯಂತ್ರಣ ತರಲು ಮುಂದಾಗಿದ್ದು, ಇದು ಇಲಾಖೆಯಲ್ಲಿ ಖಾಲಿ ಹುದ್ದೆಗಳನ್ನು ಕಡಿಮೆ ಮಾಡುತ್ತದೆ ಎಂಬ ಲೆಕ್ಕಾಚಾರ ಸರ್ಕಾರದ್ದು.