ಕಾರವಾರ: ನೆರೆ ಸಂದರ್ಭದಲ್ಲಿ ಸಂತ್ರಸ್ತರ ಕಾಳಜಿ ಕೇಂದ್ರದಲ್ಲಿ ಅತ್ಯಂತ ಶ್ರದ್ಧೆಯಿಂದ ಕಾರ್ಯನಿರ್ವಹಿಸಿ, ಸ್ವಂತ ಆರೋಗ್ಯ ನಿರ್ಲಕ್ಷಿಸಿ, ಕಾರವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಅಂಗನವಾಡಿ ಕಾರ್ಯಕರ್ತೆ ಸುಗಂಧಾ ಲಕ್ಷ್ಮಣ ಹರಿಕಾಂತರ ಮಗಳಾದ ಶ್ರಾವ್ಯ ಎಲ್. ಗೆ ಸಿಎಂ ನಿಧಿಯಿಂದ 5 ಲಕ್ಷ ರೂ.ಪರಿಹಾರ ನೀಡಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಡಾ| ಹರೀಶ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಕಾರವಾರಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಉದಯವಾಣಿ ಸುಗಂಧಾ ಹರಿಕಾಂತ ಅವರ ಸಾವಿನ ಬಗ್ಗೆ ಗಮನ ಸೆಳೆದಿತ್ತು. ಪತ್ರಿಕೆಯ ಕಾಳಜಿಗೆ ಸ್ಪಂದಿಸಿದ ಸಚಿವೆ ಶಶಿಕಲಾ ಅವರು, ಅ.3 ರಂದು ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಸುಗಂಧಾ ಅವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಿಸಲು ಯಶಸ್ವಿಯಾಗಿದ್ದರು.
ಅಂಗನವಾಡಿ ಕಾರ್ಯಕರ್ತೆ ಜ್ವರ ಹಾಗೂ ನಿಮೂನಿಯಾದಿಂದ ಕಾರವಾರ ಕಿಮ್ಸ್ ಅಧೀನದ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಆ.29ರಂದು ಮೃತಪಟ್ಟಿದ್ದರು. ಅದಕ್ಕೂ ಮುನ್ನ ಅವರು ಆ.5 ರಿಂದ 12 ರವರೆಗೆ ಅಂಕೋಲಾದ ಗಂಗಾವಳಿ ನದಿ ದಂಡೆಯ ನೆರೆಯ ಗ್ರಾಮಗಳ ಕಾಳಜಿ ಕೇಂದ್ರಗಳಲ್ಲಿ ಕೆಲಸ ಮಾಡಿದ್ದರು. ಬಿಳಿಹೊಂಯಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯಾಗಿದ್ದ ಇವರು ಸ್ವಂತ ಆರೋಗ್ಯ ನಿರ್ಲಕ್ಷಿಸಿದ ಪರಿಣಾಮ ಮೃತಪಟ್ಟಿದ್ದರು.
ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ರೂ. ಕೊಡಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಯಶಸ್ವಿಯಾಗಿದ್ದು, ಈ ಪರಿಹಾರ ಹಣವನ್ನು ತುರ್ತಾಗಿ ಪಿಡಿ ಖಾತೆಯಿಂದ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳ ಆದೇಶ ಅನುಸರಿಸಿ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣವನ್ನು ಮರುಭರಣ ಮಾಡಿಕೊಳ್ಳುವ ಶರತ್ತಿಗೆ ಒಳಪಟ್ಟು ಪಿ.ಡಿ. ಖಾತೆಯಿಂದ 5 ಲಕ್ಷ ರೂ.ವನ್ನು ಸುಗಂಧಾ ಹರಿಕಾಂತ ಅವರ ಮಗಳು ಶ್ರಾವ್ಯ ಅವರ ಖಾತೆಗೆ ಹಣ ಬಿಡುಗಡೆ ಮಾಡಲು ಆದೇಶಿಸಿದ್ದಾರೆ. ಈ ಸಂಬಂಧ ಘಟನೆ ಪ್ರಸ್ತಾವನೆಯನ್ನು ಮಹಿಳಾ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜೇಂದ್ರ ಬೇಕಲ್ ಅವರಿಂದ ಬಂದಿತ್ತು. ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅವರ ಸೂಚನೆಯ ಮೇರೆಗೆ ಇಡೀ ಘಟನೆ ಹಾಗೂ ಪರಿಹಾರದ ಪ್ರಸ್ತಾವನೆಯನ್ನು ಜಿಲ್ಲಾಡಳಿತ ತರಿಸಿಕೊಂಡಿತ್ತು. ಅಂಗನವಾಡಿ ಕಾರ್ಯಕರ್ತೆ ಅಕಾಲಿಕ ಮರಣದಿಂದ ನೊಂದಿದ್ದ ಕುಟುಂಬಕ್ಕೆ ಈ ಪರಿಹಾರದಿಂದ ಕೊಂಚ ಸಾಂತ್ವನ ಸಿಕ್ಕಂತಾಗಿದೆ.