Advertisement

ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ವಿತರಣೆ

02:10 PM Feb 17, 2020 | Suhan S |

ಬೆಳಗಾವಿ: ಕಳೆದ ವಾರ ಖಾನಾಪುರ ತಾಲೂಕಿನ ತಟ್ಟಿಹಳ್ಳ ಸೇತುವೆ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದ ಖಾನಾಪುರ ತಾಲೂಕಿನ ಬೋಗೂರ ಗ್ರಾಮದ ಆರು ಜನರ ಕುಟುಂಬದ ಸದಸ್ಯರಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರು ಸರ್ಕಾರದ ವತಿಯಿಂದ ಮಂಜೂರಾಗಿದ್ದ ತಲಾ ಐದು ಲಕ್ಷ ರೂಪಾಯಿ ಪರಿಹಾರ ಧನವನ್ನು ರವಿವಾರ ವಿತರಿಸಿದರು.

Advertisement

ಬೋಗೂರ ಗ್ರಾಮದ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಚಿವರು ಅಪಘಾತದಲ್ಲಿ ಮೃತಪಟ್ಟಿರುವ ಅಶೋಕ ಫಕ್ಕೀರಪ್ಪ ಕೇದಾರಿ, ಶಾಂತವ್ವ ಹನಮಂತ ಅಳಗೋಡಿ, ಸಾವಿತ್ರಿ ಹುಣಶೀಕಟ್ಟಿ, ನಾಗವ್ವ ಮಾಟೊಳ್ಳೆ, ಚಂದ್ರಮ್ಮ ಹುಣಶೀಕಟ್ಟಿ ಹಾಗೂ ಶಾಂತವ್ವ ಜುಂಜೂರಿ ಅವರ ಕುಟುಂಬದ ಸದಸ್ಯರಿಗೆ ಐದು ಲಕ್ಷ ರೂ. ಪರಿಹಾರ ಧನದ ಚೆಕ್‌ಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಜಗದೀಶ್‌ ಶೆಟ್ಟರ, ಬೋಗೂರ ಗ್ರಾಮದ ತಟ್ಟಿಹಳ್ಳಕ್ಕೆ 49 ವರ್ಷಗಳ ಹಿಂದೆ ನಿರ್ಮಿಸಲಾದ ಹಳೆಯ ಬಾಂದಾರ ಮತ್ತು ಸೇತುವೆಯನ್ನು ತೆರವುಗೊಳಿಸಿ ಹೊಸ ಸೇತುವೆ ನಿರ್ಮಾಣಕ್ಕೆ 4 ಕೋಟಿ ರೂಪಾಯಿ ಅಂದಾಜು ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ. ಲೋಕೋಪಯೋಗಿ ಇಲಾಖೆ ಮತ್ತು ನೀರಾವರಿ ಇಲಾಖೆಯ ಸಚಿವರ ಜತೆ ಚರ್ಚಿಸಿ ಆದಷ್ಟು ಬೇಗನೇ ಹೊಸ ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕೂಲಿಗೆ ತೆರಳುತ್ತಿರುವವರು ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದು ಬಹಳ ನೋವಿನ ಸಂಗತಿ. ಈ ಅಪಘಾತದಲ್ಲಿ ಗಾಯಗೊಂಡ 18 ಜನರಿಗೆ ಸೂಕ್ತ ಚಿಕಿತ್ಸೆ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಅವರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರ ನೋಡಿಕೊಳ್ಳಲಿದೆ. ಗಾಯಾಳುಗಳಿಗೆ ಸಹ ಸೂಕ್ತ ಪರಿಹಾರ ನೀಡಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅವರಿಗೂ ನೆರವು ನೀಡುತ್ತೇವೆ ಎಂದು ಹೇಳಿದರು.

ಎಲ್ಲರೂ ಕೂಲಿಕಾರ ಕುಟುಂಬ ದವರಾಗಿರುವುದರಿಂದ ಪ್ರತಿ ಕುಟುಂಬಕ್ಕೂ ಐದು ಲಕ್ಷ ಪರಿಹಾರ ನೀಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದಾಗ ಅವರು ತಕ್ಷಣವೇ ಸ್ಪಂದಿಸಿ ಪರಿಹಾರ ಬಿಡುಗಡೆಗೆ ಆದೇಶ ನೀಡಿದ್ದಾರೆ. ವಾಹನ ಸವಾರರು ಜಾಗೃತಿ ವಹಿಸಿದರೆ ಅಪಘಾತಗಳನ್ನು ತಪ್ಪಿಸಲು ಸಾಧ್ಯ. ಆದ್ದರಿಂದ ಚಾಲಕರು ಮತ್ತು ಮಾಲೀಕರು ಎಚ್ಚರಿಕೆ ವಹಿಸಬೇಕು ಎಂದರು.

Advertisement

ಜಿಲ್ಲಾಧಿಕಾರಿ ಡಾ| ಎಸ್‌.ಬಿ.ಬೊಮ್ಮನಹಳ್ಳಿ ಮಾತನಾಡಿ, ಅಪಘಾತದ ಸಂದರ್ಭದಲ್ಲಿ ನಾಲ್ವರು ಸ್ಥಳದಲ್ಲಿ ಸಾವನ್ನಪ್ಪಿದರೆ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟರು. 18 ಜನರು ಗಾಯಗೊಂಡಿದ್ದಾರೆ. ಸುದ್ದಿ ತಿಳಿದ ತಕ್ಷಣ ಮುಖ್ಯಮಂತ್ರಿಗಳು ಮೃತರ ಪ್ರತಿ ಕುಟುಂಬಕ್ಕೂ ಐದು ಲಕ್ಷ ರೂ. ಪರಿಹಾರ ಪ್ರಕಟಿಸಿದ್ದಾರೆ.ಆಸ್ಪತ್ರೆಯಲ್ಲಿ ಇರುವ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಹಲಗೇಕರ ಸಂಸ್ಥೆಯ ವತಿಯಿಂದ ಪ್ರತಿ ಕುಟುಂಬಕ್ಕೂ ತಲಾ ಹತ್ತು ಸಾವಿರ ರೂ. ನೆರವು ನೀಡಲಾಯಿತು. ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರು ಬೋಗೂರ ಗ್ರಾಮದ ಸಮೀಪ ಅಪಘಾತ ಸಂಭವಿಸಿದ ತಟ್ಟಿಹಳ್ಳ ಬ್ರಿಡ್ಜ್ ಕಂ ಬಾಂದಾರವನ್ನು ಪರಿಶೀಲಿಸಿದರು. ಮಾಜಿ ಶಾಸಕ ಸಂಜಯ ಪಾಟೀಲ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next