ಮಡಿಕೇರಿ: ರಾಜ್ಯದಾದ್ಯಂತ ಏಡೆಬಿಡದೇ ಸುರಿಯುತ್ತಿರುವ ಮಹಾಮಳೆಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಮನೆಗೆ ಹಾನಿಯಾಗಿದ್ದರೆ 50 ಸಾವಿರ ರೂ. ವಿತರಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಘೋಷಿಸಿದ್ದಾರೆ.
ಸರಣಿ ಭೂಕಂಪನದ ಕೇಂದ್ರ ಬಿಂದು ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮಕ್ಕೆ ಭೇಟಿ ನೀಡಿ ಮಳೆಹಾನಿ ಸಂತ್ರಸ್ತರೊಂದಿಗೆ ಚರ್ಚಿಸಿದ ಸಚಿವರು ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಧಾರಾಕಾರ ಮಳೆಯಿಂದ ಮನೆ ಸಂಪೂರ್ಣವಾಗಿ ಬಿದ್ದು ನಷ್ಟವಾಗಿದ್ದರೆ 5 ಲಕ್ಷ ರೂ. ಮತ್ತು ಮನೆಗೆ ಹಾನಿಯಾಗಿದ್ದರೆ 50 ಸಾವಿರ ರೂ. ಪರಿಹಾರ ವಿತರಿಸಲು ಬೆಂಗಳೂರಿಗೆ ತಲುಪಿದ ತಕ್ಷಣ ಅಧಿಕೃತ ಆದೇಶ ಹೊರಡಿಸಲಾಗುವುದು. ಮಳೆಹಾನಿ ಪರಿಹಾರ ನೀಡಲು ಹಣದ ಕೊರತೆ ಇಲ್ಲ ಎಂದು ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪಗಳು ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ತಜ್ಞರ ಸಲಹೆಯಂತೆಯೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಸೂಕ್ತ. ನಿಯಮ ಬಾಹಿರ ರೆಸಾರ್ಟ್ ಮತ್ತು ಹೋಂಸ್ಟೇಗಳ ನಿರ್ಮಾಣದ ಕುರಿತು ನಿಗಾ ವಹಿಸುವ ಅಗತ್ಯವಿದೆ. ಯಾವುದೇ ಕಟ್ಟಡಗಳು ನಿರ್ಮಾಣಗೊಂಡರೂ ಅದು ಪರಿಸರಕ್ಕೆ ಪೂರಕವಾಗಿರಬೇಕು ಎಂದರು.
ಕಳೆದ ಬಾರಿ ಭೂಕುಸಿತವಾದಾಗ ಮುಂದಿನ ಕ್ರಮಗಳ ಬಗ್ಗೆ ತಜ್ಞರು ಸುರಕ್ಷತೆಯ ಕುರಿತು ಸಲಹೆಗಳನ್ನು ನೀಡಿದ್ದಾರೆ. ತಜ್ಞರ ವರದಿ ಆಧರಿಸಿಯೇ ಕೊಡಗಿನಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು, ಪ್ರಕೃತಿಗೆ ವಿರುದ್ಧವಾಗಿ ಯಾರೂ ಕೂಡ ಹೋಗಬಾರದು, ಹೋದರೆ ಅನಾಹುತ ತಪ್ಪಿದ್ದಲ್ಲ ಎಂದು ಹೇಳಿದರು.
ಬರೆ ಕುಸಿದು ಮನೆಗೆ ಹಾನಿಯಾಗಿರುವ ಅಕ್ಕಮ್ಮ ಅವರನ್ನು ಭೇಟಿಯಾದ ಸಚಿವರು ಸಾಂತ್ವನ ಹೇಳಿದರು. ಇದೇ ಸಂದರ್ಭ ಮಳೆಹಾನಿ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಿಸಿದರು.
ಈ ಸಂದರ್ಭ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.