ಮಾಲ್ಡಾ, ಪಶ್ಚಿಮ ಬಂಗಾಲ : ಮಾಲ್ಡಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 34ರಲ್ಲಿ ಇಂದು ನಸುಕಿನ ವೇಳೆ ಕಾರು ಮತ್ತು ಡಂಪರ್ ನಡುವೆ ಸಂಭವಿಸಿದ ಢಿಕ್ಕಿಯಲ್ಲಿ ಐವರು ಮೃತಪಟ್ಟರು.
ಚಾಲಕ ಸಹಿತ ಎಲ್ಲ ಐವರು ಗಾಯಾಳುಗಳು ಗಂಭೀರ ಸ್ಥಿತಿಯಲ್ಲಿ ಮಾಲ್ಡಾ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಒಯ್ಯಲ್ಪಡುವಾಗಲೇ ಕೊನೆಯುಸಿರೆಳೆದರು ಎಂದು ಪೊಲೀಸ್ ಸುಪರಿಂಟೆಂಡೆಂಟ್ ಅರ್ನಾಬ್ ಘೋಷ್ ತಿಳಿಸಿದರು.
ಇಲ್ಲಿಂದ ಸುಮಾರು 35 ಕಿ.ಮೀ. ದೂರದ ಸ್ಥಳದಲ್ಲಿ ನಸುಕಿನ 3.10ರ ವೇಳೆಗೆ ಈ ಭೀಕರ ಅಪಘಾತ ನಡೆಯಿತು. ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಡಂಪರ್‌ಗೆ ಕಾರು ಢಿಕ್ಕಿಯಾಯಿತು. ಡಂಪರ್ ಫರ್ಕಾ ಕಡೆಗೆ ಹೋಗುತ್ತಿತ್ತು.
ಕಾರಿನಲ್ಲಿದ್ದವರು ರಾಮ್‌ಪುರ್ಹತ್‌ನಲ್ಲಿ ಮದುವೆ ಕಾರ್ಯಕ್ರಮ ಮುಗಿಸಿ ಮಾಲ್ಡಾಕ್ಕೆ ಮರಳುತ್ತಿದ್ದರು. ಅವರಲ್ಲಿ ನಾಲ್ವರು ಒಂದೇ ಕುಟುಂಬಕ್ಕೆ ಸೇರಿದವರು.
ಅಪಘಾತದ ಬಳಿಕ ಡಂಪರ್ ಚಾಲಕ ಪರಾರಿಯಾಗಿದ್ದಾನೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.