ಕನ್ನಡ ಸಾಹಿತ್ಯ ಪರಂಪರೆಯ ಬೆಳವಣಿಗೆಗೆ ಅಸಂಖ್ಯ ಕವಿಗಳು, ಸಾಹಿತಿಗಳು ಕೊಡುಗೆ ನೀಡಿದ್ದು, ಅವುಗಳನ್ನು ನೆನೆಯುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸಂತ ಶಿಶುನಾಳ ಶರೀಫರ ಸಮಾಧಿಯಿರುವ ಹಾವೇರಿ ಜಿಲ್ಲೆಯ ಶಿಶುನಾಳ ಗ್ರಾಮದಲ್ಲಿ 5 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. ಆ ಮೂಲಕ ಶಿಶುನಾಳ ಶರೀಫರ ಸಾಹಿತ್ಯ ಸಿರಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ಕೆ ಮುಂದಾಗಿದೆ. ಅಲ್ಲದೆ, ಮಾಜಿ ಮುಖ್ಯಮಂತ್ರಿ ದಿ.ಎಸ್.ನಿಜಲಿಂಗಪ್ಪ ಅವರ ಚಿತ್ರದುರ್ಗದ ನಿವಾಸವನ್ನು ಸಂರಕ್ಷಿಸಲು ಹಾಗೂ ಅಭಿವೃದ್ಧಿಗೊಳಿಸಲು ಕ್ರಮ ಕೈಗೊಂಡಿದ್ದು, ಇದಕ್ಕಾಗಿ 5 ಕೋಟಿ ರೂ.ಮೀಸಲಿಡಲಾಗಿದೆ.
ಬೆಂಗಳೂರಿನ ನಾಲ್ಕೂ ದಿಕ್ಕುಗಳಲ್ಲೂ ಕಲಾಕ್ಷೇತ್ರ: ನಾಡು-ನುಡಿ ಹಾಗೂ ಸಂಸ್ಕೃತಿಯ ಬೆಳವಣಿಗೆ ದೃಷ್ಟಿಯಿಂದ ಬೆಂಗಳೂರು ನಗರದ ನಾಲ್ಕೂ ದಿಕ್ಕಿನಲ್ಲಿ ಈಗಿರುವ ರವೀಂದ್ರ ಕಲಾ ಕ್ಷೇತ್ರದ ಮಾದರಿಯಲ್ಲೇ ಕಲಾ ಕ್ಷೇತ್ರಗಳನ್ನು 60 ಕೋಟಿ.ರೂ.ವೆತ್ಛದಲ್ಲಿ ನಿರ್ಮಿಸಲಾಗುವುದು. ಜತೆಗೆ, ಕರ್ನಾಟಕ ಚಿತ್ರಕಲಾ ಪರಿಷತ್ತು ಪ್ರತಿವರ್ಷ ಹಮ್ಮಿಕೊಳ್ಳುವ “ಚಿತ್ರಸಂತೆ’ ಕಾರ್ಯಕ್ರಮವನ್ನು ಸರ್ಕಾರದ ಸಾಂಸ್ಕೃತಿಕ ಕಾರ್ಯಕ್ರಮ ಎಂದು ಪರಿಗಣಿಸಲಾಗಿದೆ. ಇದಕ್ಕಾಗಿ 2020-21ನೇ ಸಾಲಿನಲ್ಲಿ 1 ಕೋಟಿ ರೂ.ನೀಡಲಾಗುವುದು. ಹಾಗೆಯೇ, ವಿವೇಕಾನಂದ ಯುವ ಕೇಂದ್ರವನ್ನು ಬೆಂಗಳೂರಿನಲ್ಲಿ 2 ಕೋಟಿ ರೂ.ವೆಚ್ಚದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ.
ಕೋಟಿ-ಕೋಟಿ ಅನುದಾನ: ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಹಾಗೂ ವಿವಿಧ ನಿಗಮಗಳಿಗೆ 125 ಕೋಟಿ ರೂ.ಅನುದಾನ ಮೀಸಲಿಡಲಾ ಗಿದೆ. ಅದರಂತೆ, ಉಪ್ಪಾರ ಅಭಿವೃದ್ಧಿ ನಿಗಮಕ್ಕೆ 10 ಕೋಟಿ, ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 25 ಕೋಟಿ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮಕ್ಕೆ 50 ಕೋಟಿ, ಆರ್ಯ ವೈಶ್ಯ ಅಭಿವೃದ್ದಿ ನಿಗಮಕ್ಕೆ 10 ಕೋಟಿ, ಕುಂಬಾರ ಸಮು ದಾಯದ ಅಭಿವೃದ್ದಿಗೆ 20 ಕೋಟಿ, ಗೊಲ್ಲ ಸಮುದಾಯದ ಅಭಿವೃದ್ಧಿಗೆ 10 ಕೋಟಿ ರೂ.ಅನುದಾನ ನೀಡಲಾಗಿದೆ.
ಫಸ್ಟ್ ಬಂದ ಮಕ್ಕಳಿಗೆ ಲಕ್ಷ ರೂ: ಸ್ವಾತಂತ್ರ್ಯ ಹೋರಾಟದ ಭಾಗವಾದ “ಹಲಗಲಿ ಬೇಡರ ಬಂಡಾಯ’ದಲ್ಲಿ ಹುತಾತ್ಮರಾದ ಜಡಗ ಮತ್ತು ಬಾಲ ಇವರ ಹೆಸರಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂ.ನಗದು ಪ್ರಶಸ್ತಿ ನೀಡಲು ಕ್ರಮ. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 60 ಲಕ್ಷ ರೂ.ಅನುದಾನ ಮೀಸಲಿಡಲಾಗಿದೆ.