ಕಾಪು: ಕಾಪು ಪುರಸಭಾ ವ್ಯಾಪ್ತಿಯ ಉಳಿಯಾರಗೋಳಿ ಗ್ರಾಮದ ಕೋತಲಕಟ್ಟೆಯಲ್ಲಿ ಭೂಗರ್ಭದೊಳಗೆ ಸೇರಿ ಹೋಗಿದ್ದು, ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಪುನರುಜ್ಜೀವನಗೊಳಿಸಲಾದ ಐತಿಹಾಸಿಕ ನಡಿಕೆರೆಯನ್ನು ಶಾಸಕ ವಿನಯ ಕುಮಾರ್ ಸೊರಕೆ ಅವರು ಮಾ. 12ರಂದು ಉದ್ಘಾಟಿಸಿ, ಬಾಗಿನ ಸಮರ್ಪಿಸಿದರು.
ಬಳಿಕ ಮಾತನಾಡಿದ ಅವರು ಕಾಪು ಪುರಸಭಾ ವ್ಯಾಪ್ತಿಯ ವಿವಿಧ ಕೆರೆ, ಗಾರ್ಡ್‌ನ್ ಮತ್ತು ಪಾರ್ಕ್ ಅಭಿವೃದ್ಧಿಗಾಗಿ 5 ಕೋ. ರೂ. ಅನುದಾನವನ್ನು ಮೀಸಲಿರಿಸಲಾಗಿದ್ದು, ಹಂತ-ಹಂತವಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುವುದು. ಈಗಾಗಲೇ 7-8 ಕೆರೆಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿದ್ದು, ನಡಿಕೆರೆಯನ್ನು ಮಾದರಿಯಾಗಿಟ್ಟುಕೊಂಡು ಎಲ್ಲಾ ಕೆರೆಗಳನ್ನು ಆಭಿವೃದ್ಧಿ ಪಡಿಸುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡುವುದಾಗಿ ಹೇಳಿದರು.
ನಾವು ಪರಿಸರವನ್ನು ರಕ್ಷಿಸಿದರೆ, ಪರಿಸರ ನಮ್ಮನ್ನು ರಕ್ಷಿಸುತ್ತದೆ. ಮಾರ್ಚ್ ಪ್ರಥಮಾರ್ಧದಲ್ಲೇ ಕೆಲವು ಕಡೆಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗುತ್ತಿದ್ದು, ಈ ಕಾರಣದಿಂದಾಗಿ ನೀರಿನ ಒರತೆಗಳನ್ನು ಹುಡುಕಿ ಪುನುರುಜ್ಜೀವನ ಗೊಳಿಸುವುದು ಇಂದಿನ ಅನಿ ವಾರ್ಯತೆಯಾಗಿದೆ.
ನಡಿಕೆರೆಯ ಪುನರುಜೀjವನದ ಮೂಲಕವಾಗಿ ಹತ್ತಾರು ಕೀ. ಮೀ. ವ್ಯಾಪ್ತಿಯಲ್ಲಿ ನೀರಿನ ಒರತೆ ವೃದ್ಧಿಯಾಗಲಿದೆ ಎಂದರು.ಕಾಪು ಪುರಸಭಾಧ್ಯಕ್ಷೆ ಕು| ಸೌಮ್ಯಾ ಎಸ್., ಉಪಾಧ್ಯಕ್ಷ ಎಚ್. ಉಸ್ಮಾನ್, ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಉದ್ಯಮಿ ಮನೋಹರ್ ಎಸ್. ಶೆಟ್ಟಿ, ಗೌರವ್ ಶೇಣವ, ಎಂಜಿನಿಯರ್ ಎಸ್. ಟಿ. ಗೌಡ, ಗುತ್ತಿಗೆದಾರ ನಾಗರಾಜ್, ಪುರಸಭಾ ಸದಸ್ಯೆ ರಮಾ ವೈ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕೆರೆ ನಿರ್ಮಾಣಕ್ಕೆ ಅನುದಾನ ಒದಗಿಸಿಕೊಟ್ಟ ಕಾಪು ಶಾಸಕ ವಿನಯ ಕುಮಾರ್ ಸೊರಕೆ, ಅಧಿಕಾರಿ ಎಸ್. ಟಿ. ಗೌಡ, ಗುತ್ತಿಗೆದಾರ ನಾಗರಾಜ್, ಕಲ್ಲಿನ ಕೆಲಸದ ಹುಸೇನ್ ಸಾಹೇಬ್, ಪ್ರಗತಿಪರ ಕೃಷಿಕ ರಾಮ ಪೂಜಾರಿ ಇವನ್ನು ಸಮ್ಮಾನಿಸಲಾಯಿತು. ಇಂಜಿನಿಯರ್ ಗೌತಮ್, ಮ್ಯಾನೇಜರ್ ನಾರಾಯಣ ದೇವಾಡಿಗ ಅವರನ್ನು ಅಭಿನಂದಿಸಲಾಯಿತು.
ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ನಡಿಕೆರೆ ರತ್ನಾಕರ ಶೆಟ್ಟಿ ಸ್ವಾಗತಿಸಿದರು. ವಂದನಾ ಶೆಟ್ಟಿ ವಂದಿಸಿದರು. ಕರಂದಾಡಿ ಶಾಲಾ ಮುಖ್ಯ ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.