Advertisement

ಪ್ರತಿದಿನ ಪಂಪಿಂಗ್‌ ವೇಳೆ 5- 6 ಎಂಎಲ್‌ಡಿ ನೀರು ವ್ಯರ್ಥ

11:39 PM May 21, 2019 | mahesh |

ಮಹಾನಗರ: ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ, ನಗರದ ಜನರಿಗೆ ನೀರಿಲ್ಲದ ಪರಿಸ್ಥಿತಿ ಕೆಲವು ದಿನಗಳಿಂದ ನಿರ್ಮಾಣವಾಗಿದೆ. ಆದರೆ ತುಂಬೆ ಡ್ಯಾಂನಿಂದ ಪಂಪಿಂಗ್‌ ಮಾಡಿ ಶುದ್ಧೀಕರಣಗೊಳ್ಳುವಾಗ, ಒಟ್ಟು 160 ಎಂಎಲ್‌ಡಿ ನೀರಿನ ಪೈಕಿ ಪ್ರತಿದಿನ ಸುಮಾರು 5ರಿಂದ 6 ಎಂಎಲ್‌ಡಿಯಷ್ಟು ಪ್ರಮಾಣದ ನೀರು ವ್ಯರ್ಥವಾಗಿ ಕಡಲು ಸೇರುತ್ತಿದೆ ಎನ್ನುವುದು ವಾಸ್ತವ!

Advertisement

“ನಗರದಲ್ಲಿ ನೀರಿಲ್ಲ’ ಎಂಬ ಗಂಭೀರ ಸ್ಥಿತಿ ಇರುವ ಈ ಕಾಲದಲ್ಲಿಯೂ ಪ್ರತೀ ದಿನ ಲಕ್ಷ-ಲಕ್ಷ ಲೀಟರ್‌ ನೀರು ನಗರದ ಜನರಿಗೆ ಸಿಗದೆ, ಮತ್ತೆ ನದಿ ಸೇರಿ  - ಕಡಲು ಪಾಲಾಗುತ್ತಿದೆ. ಶುದ್ಧೀಕರಣ ವೇಳೆ ವ್ಯರ್ಥವಾಗಿ ಹರಿದು ಹೋಗುವ ಈ ನೀರನ್ನು ಮರುಬಳಕೆ ಮಾಡುವ ನಿಟ್ಟಿನಲ್ಲಿ ಘಟಕವೊಂದು ನಿರ್ಮಾಣ ವಾಗಲಿದೆ ಎಂದು ಪಾಲಿಕೆ ಕೆಲವು ವರ್ಷದಿಂದ ಹೇಳುತ್ತಿದ್ದರೂ ಇನ್ನೂ ಕಾರ್ಯಗತಗೊಂಡಿಲ್ಲ. ಆಡಳಿತ ವ್ಯವಸ್ಥೆ ಈ ಬಗ್ಗೆ ಗಮನಹರಿಸಿದಂತಿಲ್ಲ.ಹಲವು ವರ್ಷ ಗಳಿಂದ ನೀರು ಅದೆಷ್ಟು ಪ್ರಮಾಣದಲ್ಲಿ ವ್ಯರ್ಥವಾಗಿದೆಯೋ ಎಂಬುದೇ ಸದ್ಯದ ಪ್ರಶ್ನೆ.

ವ್ಯರ್ಥವಾಗುವುದು ಹೇಗೆ?
ತುಂಬೆ ಡ್ಯಾಂನಿಂದ 160 ಎಂಎಲ್‌ಡಿ (ರೇಷನಿಂಗ್‌ ಇಲ್ಲದ ದಿನ) ನೀರನ್ನು ಪ್ರತೀ ದಿನ ಪಂಪಿಂಗ್‌ ಮಾಡಲಾಗುತ್ತದೆ. ಪಂಪಿಂಗ್‌ ಮಾಡಿದ ನೀರು ನೇರವಾಗಿ ಹತ್ತಿರದ ರಾಮಲ್‌ಕಟ್ಟೆಯ 2 ಶುದ್ಧೀಕರಣ ಘಟಕಕ್ಕೆ ಸರಬರಾಜಾಗುತ್ತದೆ. ಈ ಪೈಕಿ “ಹೊಸ ಘಟಕ’ವೊಂದರಲ್ಲಿ ನೀರು ಶುದ್ಧೀಕರಣ ಪ್ರಕ್ರಿಯೆ ಪೂರ್ಣ ಪ್ರಮಾಣದಲ್ಲಿ ನಡೆಯುತ್ತದೆ. ಇಲ್ಲಿ ಮೂರು ಹಂತದಲ್ಲಿ ನೀರನ್ನು ಶುದ್ಧೀಕರಿಸಲಾಗುತ್ತದೆ. ಬಳಿಕ ನೀರು ಪಡೀಲ್‌ನ ಟ್ಯಾಂಕ್‌ ಸೇರುತ್ತದೆ. ಶುದ್ಧೀಕರಣಗೊಳ್ಳದ, ಮಣ್ಣು ಮಿಶ್ರಿತವಾಗಿರುವ ಸುಮಾರು 5-6 ಎಂಎಲ್‌ಡಿಯಷ್ಟು ನೀರು ಮಾತ್ರ ವ್ಯರ್ಥವಾಗುತ್ತದೆ. ಇಂತಹ ನೀರನ್ನು ಶುದ್ಧೀಕರಣ ಘಟಕದಿಂದ ಹೊರಗೆ ಬಿಡಲಾಗುತ್ತದೆ. ಹೀಗೆ ತೋಡಿನಲ್ಲಿ ಸಾಗುವ ನೀರು ವಳವೂರು, ನಡಿಬೆಟ್ಟು, ಬ್ರಹ್ಮರಕೂಟ್ಲುವಿನಲ್ಲಿರುವ ಹಾಲ್‌ನ ಪಕ್ಕದಿಂದಾಗಿ ತುಂಬೆ ಡ್ಯಾಂನ ಸುಮಾರು 150 ಮೀಟರ್‌ ಮುಂಭಾಗದಲ್ಲಿ ನದಿಗೆ ಸೇರುತ್ತಿದೆ. ಅಲ್ಲಿಂದ ಕಡಲಿಗೆ ನೀರು ಹರಿಯುತ್ತಿದೆ. ಈ ಮಧ್ಯೆ ರಾಮಲ್‌ಕಟ್ಟೆಯಲ್ಲಿರುವ ಹಳೆಯ ಶುದ್ಧೀಕರಣ ಘಟಕದಿಂದ ನೀರು ನೇರವಾಗಿ ಬೆಂದೂರ್‌ವೆಲ್‌, ಪಣಂಬೂರು ಹೋಗಿ ಅಲ್ಲಿ ಶುದ್ಧೀಕರಣಗೊಳ್ಳುತ್ತದೆ. ಅಲ್ಲಿಯೂ ಇಷ್ಟೇ ಪ್ರಮಾಣದ ನೀರು ವ್ಯರ್ಥ ವಾಗುತ್ತದೆ. ರಾಮಲ್‌ಕಟ್ಟೆಯ ಹಳೆ ಘಟಕದಲ್ಲಿಯೂ ಸ್ವಲ್ಪ ಪ್ರಮಾಣದ ನೀರು ವ್ಯರ್ಥವಾಗಿ ನದಿ ಸೇರುತ್ತಿದೆ.

ವಳವೂರು-ನಡಿಬೆಟ್ಟುವಿನ ಗೋಳು ಕೇಳುವವರಾರು?
ಪಾಲಿಕೆಯ ಶುದ್ಧ ನೀರಿನ ಘಟಕದಿಂದ ಹೊರಬಿಡುವ ನೀರಿನ ಪ್ರಮಾಣ ಅಧಿಕವಿರುವ ಕಾರಣದಿಂದ ರಾಮಲ್‌ಕಟ್ಟೆ, ವಳವೂರು, ನಡಿಬೆಟ್ಟು ವ್ಯಾಪ್ತಿಯ ಸಾರ್ವಜನಿಕರಿಗೆ ನಿತ್ಯ ಸಮಸ್ಯೆ ಆಗುತ್ತಿದೆ. ಘಟಕದಿಂದ ಹೊರಬಂದ ನೀರು ರಭಸವಾಗಿ ಈ ವ್ಯಾಪ್ತಿಯ ಮನೆಯ ಬದಿಯಲ್ಲಿರುವ ಮಳೆ ನೀರು ಹರಿಯುವ ತೋಡು ಸೇರುವ ಕಾರಣ ಸ್ಥಳೀಯರ ಭೂಮಿ ಕೊರೆತ ಸಮಸ್ಯೆಯಾಗಿ, ತೋಟ- ಮನೆಗಳಿಗೂ ಹಾನಿಯಾಗಿದೆ. ತೋಡಿನ ಬದಿಯಲ್ಲಿದ್ದ ಒಂದು ಬಾವಿಗೆ ನೀರಿನ ಜತೆಗೆ ಮಣ್ಣು ಬಿದ್ದು, ಬಾವಿ, ಹತ್ತಿರದ ಎರಡು ಕೆರೆಗಳು ಕೂಡ ಮಣ್ಣಿನಲ್ಲಿ ಮುಚ್ಚಿಹೋಗಿವೆ. ಸ್ಥಳೀಯರು ಈ ಬಗ್ಗೆ ಸಚಿವ ಖಾದರ್‌, ಜಿಲ್ಲಾಡಳಿತ, ಮನಪಾದ ಜತೆಗೆ ಸುದೀರ್ಘ‌ ಕಾಲದಿಂದ ಮನವಿ ಮಾಡುತ್ತ ಬಂದಿದ್ದರೂ ಇನ್ನೂ ಪರಿಹಾರ ಅಥವಾ ಸಮಸ್ಯೆ ನಿವಾರಣೆ ಆಗಿಲ್ಲ.

ಸದ್ಯ ನೀರು ಸ್ವಲ್ಪ ಪ್ರಮಾಣದಲ್ಲಿ ನದಿಗೆ ಸೇರುತ್ತಿದ್ದರೆ, ಮಳೆಗಾಲದಲ್ಲಿ ಮಾತ್ರ ಇದರ ಪ್ರಮಾಣ ಯಥೇತ್ಛವಿದೆ. ಮಳೆ ನೀರು ಹರಿಯುವ ಜತೆಗೆ ತೋಡಿನಲ್ಲಿ ಘಟಕದ ವ್ಯರ್ಥ ನೀರು ಕೂಡ ಹರಿಯುವುದರಿಂದ ಇಲ್ಲಿನ ಮನೆಮಂದಿಗೆ ಸಮಸ್ಯೆ ಕಟ್ಟಿಟ್ಟಬುತ್ತಿ. ಕೆಲವು ಮನೆಗಳಿಗೆ ನೀರು ನುಗ್ಗುವ ಪ್ರಮೇಯವಿದೆ.

Advertisement

ಬ್ಯಾಕ್‌ ವಾಷ್‌ ಟ್ರೀಟ್‌ಮೆಂಟ್‌ ಫೆಸಿಲಿಟಿ ಪ್ಲ್ಯಾಂಟ್‌
ತುಂಬೆ ಸಮೀಪದ ರಾಮಲ್‌ಕಟ್ಟೆಯಲ್ಲಿ ಶುದ್ಧೀಕರಣ ಘಟಕದಿಂದ ವ್ಯರ್ಥವಾಗಿ ಹೊರಗೆ ಹೋಗುವ ನೀರನ್ನು ಮರು ಶುದ್ಧೀಕರಿಸಿ ಬಳಕೆ ಮಾಡುವ ಬಗ್ಗೆ ಪಾಲಿಕೆ ಈ ಹಿಂದೆಯೇ ನಿರ್ಧರಿಸಿದೆ. ಇದಕ್ಕಾಗಿ ಘಟಕದ ಸಮೀಪದಲ್ಲಿ ಭೂಮಿ ಖರೀದಿಗೆ ಮುಂದಾಗಿದೆ. “ಬ್ಯಾಕ್‌ ವಾಷ್‌ ಟ್ರೀಟ್‌ಮೆಂಟ್‌ ಫೆಸಿಲಿಟಿ ಪ್ಲ್ಯಾಂಟ್‌’ ಎಂಬ ನೂತನ ಘಟಕ ನಿರ್ಮಾಣವಾಗಲಿದೆ. ಶುದ್ಧೀಕರಣಗೊಂಡ ಬಳಿಕ ವ್ಯರ್ಥವಾಗುವ ನೀರನ್ನು ಇಲ್ಲಿ ಮರು ಶುದ್ಧೀಕರಿಸಲು ಉದ್ದೇಶಿಸಲಾಗಿದೆ. ಈ ಮೂಲಕ ವ್ಯರ್ಥವಾಗಿ ಹೋಗುವ ನೀರು ಮರುಬಳಕೆ ಸಾಧ್ಯ ಎಂಬುದು ಪಾಲಿಕೆಯ ವಾದ. ನೇತ್ರಾವತಿಯಲ್ಲಿ ಹರೇಕಳ ಡ್ಯಾಂ ನಿರ್ಮಾಣವಾಗುವ ಕಾಲಕ್ಕೆ ತುಂಬೆಯ ವ್ಯರ್ಥ ನೀರನ್ನು ನದಿಗೆ ಬಿಡುವಂತಿಲ್ಲವಾದ್ದರಿಂದ ಹೊಸ ಪ್ಲ್ಯಾಂಟ್‌ ನಿರ್ಮಾಣ ಬೇಗನೆ ಮಾಡಬೇಕಿದೆ. ಸದ್ಯ ಬೆಂಗಳೂರು ಸಹಿತ ವಿವಿಧ ನಗರಗಳಲ್ಲಿ ಇಂತಹ ಘಟಕ ಕಾರ್ಯಾಚರಿಸುತ್ತಿದೆ.

 ಪರಿಶೀಲಿಸಿ ಕ್ರಮ
ಶುದ್ಧೀಕರಣ ಘಟಕದಲ್ಲಿ ಸ್ವಲ್ಪ ಪ್ರಮಾಣದಷ್ಟು ನೀರು ವ್ಯರ್ಥವಾಗಿ ಹರಿದುಹೋಗುತ್ತಿದೆ ಎಂಬ ವಿಚಾರದ ಬಗ್ಗೆ ಪಾಲಿಕೆ ಅಧಿಕಾರಿಗಳ ಜತೆಗೆ ಮಾತುಕತೆ ಮಾಡಲಾಗುವುದು. ಸದ್ಯಕ್ಕೆ ಆ ನೀರನ್ನು ಮರುಬಳಕೆ ಮಾಡಲು ಅಥವಾ ಇತರ ಬಳಕೆಗೆ ಸಾಧ್ಯವಿದೆಯೇ ಎಂಬ ಬಗ್ಗೆ ಪರಿಶೀಲಿಸಲಾಗುವುದು.
-ನಾರಾಯಣಪ್ಪ , ಮನಪಾ ಆಯುಕ್ತರು

-  ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next