ಮದ್ದೂರು: ಅಕ್ರಮ ಖಾತೆ ಮಾಡಿಕೊಟ್ಟಿರುವ ಅಧಿಕಾರಿಗಳ ಕ್ರಮ ಖಂಡಿಸಿ ಮಾನವ ಹಕ್ಕುಗಳ ಮಿಷನ್ ಸಂಘಟನೆಯ ಪದಾಧಿಕಾರಿಗಳು ನಡೆಸುತ್ತಿದ್ದ ಅಹೋರಾತ್ರಿ ಧರಣಿ ನಾಲ್ಕನೇ ದಿನ ಗುರುವಾರವೂ ಮುಂದುವರಿದಿದೆ.
ತಾಲೂಕಿನ ಗೆಜ್ಜಲಗೆರೆ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ನಿರಂತರ ಧರಣಿ ವೇಳೆ ಪ್ರತಿಭಟನಾನಿರತರು ಮಾನವ ಸರಪಳಿ ರಚಿಸಿ ಮೈಸೂರು-ಬೆಂಗಳೂರು ಹೆದ್ದಾರಿ ತಡೆದರಲ್ಲದೇ ತಾಪಂ ಇಒ ಮಣಿಕಂಠ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಸಂಚಾರ ಅಸ್ತವ್ಯಸ್ತ: ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ರಸ್ತೆತಡೆಯಿಂದ ಮೈಸೂರು-ಬೆಂಗಳೂರು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿತು. ಕಳೆದ ನಾಲ್ಕು ದಿನಗಳಿಂದಲೂ ಅಹೋರಾತ್ರಿ ಧರಣಿ ಕೈಗೊಂಡಿದ್ದರೂ ಜಿಲ್ಲಾಧಿಕಾರಿಗಳೂ ಸೇರಿದಂತೆ ತಹಶೀಲ್ದಾರ್ ಕೂಡ ಘಟನಾ ಸ್ಥಳಕ್ಕೆ ಆಗಮಿಸದೆ ನಿರ್ಲಕ್ಷ್ಯ ವಹಿಸಿರುವ ಕ್ರಮ ಖಂಡಿಸಿದರು.
ತಾಲೂಕು ಆಡಳಿತವೇ ಹೊಣೆ: ಕಳೆದ ಆರು ತಿಂಗಳಿಂದಲೂ ಅಕ್ರಮ ಖಾತೆ ಮಾಡಿಕೊಟ್ಟಿರುವುದನ್ನು ರದ್ಧುಪಡಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯ ವಹಿಸಿದ್ದು ಇದಕ್ಕೆ ಸಂಪೂರ್ಣ ತಾಲೂಕು ಆಡಳಿತವೇ ಹೊಣೆಯಾಗಲಿದೆ. ಕೂಡಲೇ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಯನ್ನು ಪರಿಹರಿಸುವಂತೆ ಆಗ್ರಹಿಸಿದರು.
ತಾಪಂ ಇಒಗೆ ತರಾಟೆ: ಸ್ಥಳಕ್ಕಾಗಮಿಸಿದ ತಾಲೂಕು ಪಂಚಾಯಿತಿ ಇಒ ಮಣಿಕಂಠ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಮುಂದಿನ 15 ದಿನದೊಳಗಾಗಿ ಅಕ್ರಮ ಖಾತೆ ಮಾಡಿಕೊಟ್ಟಿರುವ ಸಂಬಂಧ ದಾಖಲಾತಿಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ವಹಿಸುವ ಭರವಸೆ ನೀಡಿದ ಮಣಿಕಂಠ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು, ಕೂಡಲೇ ನಿವೇಶನಕ್ಕೆ ಖಾತೆ ಮಾಡಿಕೊಡುವವರೆಗೂ ಧರಣಿ ಕೈಬಿಡುವುದಿಲ್ಲವೆಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದರು.
ಗೆಜ್ಜಲಗೆರೆ ಗ್ರಾಮದ ಸರ್ವೆ.ನಂ.267ರ ಜಮೀನನ್ನು ಪಿಡಿಒ ಹಾಗೂ ಹಿಂದಿನ ಗ್ರಾಪಂ ಅಧ್ಯಕ್ಷೆ ನಾಗಮ್ಮ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದು ಇದನ್ನು ಸರಿಪಡಿಸುವಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ ವಹಿಸಿದ್ದಾರೆಂದು ದೂರಿದರು. ಪ್ರತಿಭಟನೆಯಲ್ಲಿ ಸಂಘಟನೆ ಅಧ್ಯಕ್ಷ ಚಂದ್ರಕುಮಾರ್, ಪದಾಧಿಕಾರಿಗಳಾದ ಅಂಬುಜೀ, ರಮೇಶ್, ಆಕಾಶ್, ಜ್ಯೋತಿ, ಹನುಮ, ಕೃಷ್ಣ, ಬೋರಮ್ಮ, ಕೆಂಪಯ್ಯ ಭಾಗವಹಿಸಿದ್ದರು.