ಬೀದರ: ಮಹಾರಾಷ್ಟ್ರ ಕಂಟಕದಿಂದ ಕೋವಿಡ್ ಆಘಾತ ಹೆಚ್ಚಿರುವ ಗಡಿನಾಡು ಬೀದರನಲ್ಲಿ ಈಗ ಸೋಂಕಿತರು ಗುಣಮುಖರಾಗುತ್ತಿರುವ ಸಂಖ್ಯೆ ಹೆಚ್ಚುತ್ತಿದ್ದು, ಚೇತರಿಕೆಯ ಆಶಾಭಾವ ಮೂಡುತ್ತಿದೆ.
ಕಳೆದೆರಡು ದಿನದಲ್ಲಿ 49 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಇನ್ನೊಂದೆಡೆ ಗುರುವಾರ ಜಿಲ್ಲೆಯಲ್ಲಿ ಮತ್ತೆ 14 ಪಾಸಿಟಿವ್ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 298ಕ್ಕೆ ತಲುಪಿದೆ. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಕೋವಿಡ್ ಸೋಂಕಿತರ ಸಂಖ್ಯೆಗಿಂತ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗಿರುವುದು ಹೊಸ ಆಶಾಕಿರಣ ಮೂಡಿಸಿದೆ. ಎರಡು ದಿನದಲ್ಲಿ 19 ಹೊಸ ಕೇಸ್ ಪತ್ತೆಯಾಗಿದ್ದರೆ 49 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಈವರೆಗೆ ಒಟ್ಟು 181 ಮಂದಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.
ಗುರುವಾರ ಪತ್ತೆಯಾಗಿರುವ ಹೊಸ ಸೋಂಕಿತರೆಲ್ಲರೂ ಮಹಾರಾಷ್ಟ್ರ ಸಂಪರ್ಕ ಹೊಂದಿದ್ದಾರೆ, ಅವರಲ್ಲಿ 5 ಜನ 14 ವರ್ಷದೊಳಗಿನ ಮಕ್ಕಳು ಸೇರಿದ್ದರೆ, ತಲಾ 7 ಮಂದಿ ಮಹಿಳೆ, ಪುರುಷರು ಇದ್ದಾರೆ. ಜಿಲ್ಲೆಯಲ್ಲಿ ಈಗ ಪಾಸಿಟಿವ್ ಸಂಖ್ಯೆ 298 ಆದಂತಾಗಿದೆ. ಇದರಲ್ಲಿ 6 ಸಾವು, 181 ಮಂದಿ ಬಿಡುಗಡೆ ಆಗಿದ್ದರೆ, 111 ಸಕ್ರೀಯ ಪ್ರಕರಣಗಳಿವೆ. (ಪಿ- 5915) ಮತ್ತು (ಪಿ-5916) ಸಂಖ್ಯೆ ರೋಗಿಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ದೃಢಪಡಿಸಿದೆ.
ಮತ್ತೆ ಜಿಲ್ಲೆಯ ಬಸವಕಲ್ಯಾಣ ತಾಲೂಕಿಗೆ ಕೋವಿಡ್ ವೈರಸ್ ಬಾಧಿ ಸಿದ್ದು, ಒಟ್ಟು ಸೋಂಕಿತರಲ್ಲಿ 13 ಜನ ಇದೇ ತಾಲೂಕಿಗೆ ಸೇರಿದ್ದಾರೆ. ಬಸವಕಲ್ಯಾಣ ನಗರದ ಕೈಗಾಡಗಲ್ಲಿ, ಹೊಸಪೇಟ್ ಗಲ್ಲಿಯಲ್ಲಿ ತಲಾ 1, ಘಾಟಹಿಪ್ಪರ್ಗಾ ಗ್ರಾಮದಲ್ಲಿ 4, ಕಿಟ್ಟಾ ಮತ್ತು ರಾಜೇಶ್ವರ ಗ್ರಾಮಗಳಲ್ಲಿ ತಲಾ 3, ಧನ್ನೂರವಾಡಿಯಲ್ಲಿ 1 ಸೇರಿ ಒಟ್ಟು 13 ಕೇಸ್‌ಗಳು ಹಾಗೂ ಹುಮನಾಬಾದ ತಾಲೂಕಿನ ಗಡವಂತಿ ಗ್ರಾಮದಲ್ಲಿ ಒಂದು ಕೇಸ್ ಪತ್ತೆಯಾಗಿದೆ.
5109 ಮಂದಿ ವರದಿ ಬಾಕಿ: ಜಿಲ್ಲೆಯಲ್ಲಿ ಕೋವಿಡ್ ಶಂಕಿತ 5109 ಮಂದಿಯ ಗಂಟಲು ದ್ರವ ಪರೀಕ್ಷಾ ವರದಿ ಬರುವುದು ಬಾಕಿದೆ. ಈವರೆಗೆ 31,433 ಜನರ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 26,026 ಜನರ ವರದಿ ನೆಗೆಟಿವ್ ಬಂದಿದೆ. ಸೋಂಕಿತರ ಪ್ರಥಮ ಸಂಪರ್ಕಿತ 2272 ಮತ್ತು ದ್ವಿತೀಯ ಸಂಪರ್ಕಿತ 4100 ಜನರನ್ನು ಗುರುತಿಸಲಾಗಿದೆ. ಕೋವಿಡ್ ಶಂಕಿತ 129 ಜನರು ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.