ಬೆಂಗಳೂರು: ಆಗ್ನೇಯ ವಿಭಾಗದ ನಾಲ್ಕು ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಬೈಕ್ ವೀಲಿØಂಗ್, ದ್ವಿಚಕ್ರ ವಾಹನ ಕಳವು ಮತ್ತು ದರೋಡೆ ಪ್ರಕರಣಗಳ ಸಂಬಂಧ 14 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಇವರಿಂದ 21.43 ಲಕ್ಷ ರೂ. ಮೌಲ್ಯದ 48 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಬಿಟಿಎಂ ಲೇಔಟ್‌ನ 1ನೇ ಹಂತದ ಸಾಯಿಬಾಬಾ ದೇವಾಲಯದ ಬಳಿಯ ಪಾರ್ಕ್‌ವೊಂದರ ಸಮೀಪ ಬೈಕ್‌ಗಳಲ್ಲಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ದರೋಡೆಗೆ ಹೊಂಚು ಹಾಕುತ್ತಿದ್ದ ಐವರನ್ನು ಸುದ್ದುಗುಂಟೆ ಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸೈಯದ್ ಅಮೀರ್, ಇಮ್ರಾನ್ ಪಾಷಾ, ಮೊಹಮ್ಮದ್ ಆರೀಫ್, ಸುಹೇಲ್ ಪಾಷಾ, ಸೈಯದ್ ಮುಜಾಹಿದ್ ಬಂಧಿತರು.
ಇವರಿಂದ 4 ಲಕ್ಷ ಮೌಲ್ಯದ 12 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತ್ತೀಚೆಗೆ ಜೆ.ಪಿ.ನಗರ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣದಲ್ಲಿ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಚಾಕು ತೋರಿಸಿ ಬೆದರಿಸಿ ಬೈಕ್ ಹಾಗೂ ಮೊಬೈಲ್,500 ರೂ. ನಗದು ಕಸಿದುಕೊಂಡಿದ್ದರು.
ಬೇಗೂರು ಠಾಣೆ: ಹೊಸೂರು ರಸ್ತೆಯ ಎಇಸಿಎಸ್ ಲೇಔಟ್ ಬಳಿಯ ನೀಲಗಿರಿ ತೋಪಿನಲ್ಲಿ ಬೈಕ್ ನಿಲ್ಲಿಸಿಕೊಂಡು ದರೋಡೆಗೆ ಹೊಂಚು ಹಾಕಿದ್ದ ಐದು ಮಂದಿಯನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಶೋಕ್, ನವೀನ್, ಯಶ್ವಂತ್, ಚೆಲುವರಾಜು, ಅರುಣ್ ಬಂಧಿತರು. ಇವರಿಂದ 2.43 ಲಕ್ಷ ರೂ. ಮೌಲ್ಯದ 7 ಬೈಕ್‌ಗಳು ಹಾಗೂ 78 ಸಾವಿರ ಮೌಲ್ಯದ 28.8 ಗ್ರಾಂ ತೂಕದ ಚಿನ್ನಾಭರಣ ಸೇರಿ 3.21 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಮೈಕೋ ಲೇಔಟ್ ಠಾಣೆ: ಬೈಕ್‌ಗಳನ್ನು ಕಳವು ಮಾಡಿ ಜಾಲಿರೈಡ್ ಹಾಗೂ ವೀಲ್ಹಿಂಗ್ ಮಾಡುತ್ತಿದ್ದ ಇಬ್ಬರನ್ನು ಮೈಕೋ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಲ್ಮಾನ್ ಖಾನ್ ಮತ್ತು ಸಯ್ಯದ್ ಬಂಧಿತರು. ಇವರಿಂದ 4 ಲಕ್ಷ ಮೌಲ್ಯದ 8 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಬಂಧನದಿಂದ ಮೈಕೋ ಲೇಔಟ್ ಠಾಣೆಯ 2ಪ್ರಕರಣ, ಜಯನಗರ, ಜೆಪಿನಗರ, ಪುಟ್ಟೇನಹಳ್ಳಿ ಸೇರಿದಂತೆ ವಿವಿಧ ಠಾಣೆಯಲ್ಲಿ ದಾಖಲಾಗಿದ್ದ 7 ಪ್ರಕರಣಗಳು ಪತ್ತೆಯಾಗಿವೆ.
ಎಲೆಕ್ಟ್ರಾನಿಕ್ ಸಿಟಿ ಠಾಣೆ: ಬೈಕ್ ಕಳವು ಮಾಡುತ್ತಿದ್ದ ಇಬ್ಬರನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಮಂಜುನಾಥ್, ಬೇಗೂರಿನ ತೌಸಿಫ್ ಬಂಧಿತರು. ಆರೋಪಿಗಳಿಂದ 11 ಲಕ್ಷ ಮೌಲ್ಯದ 21 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಸಿಪಿ ಬೋರಲಿಂಗಯ್ಯ ತಿಳಿಸಿದ್ದಾರೆ.