ಬೆಳ್ತಂಗಡಿ: ಬಂದಾರು ಗ್ರಾಮದಲ್ಲಿ ಮರಳು ಅಕ್ರಮವಾಗಿ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಲಾಗಿದ್ದು ಧರ್ಮಸ್ಥಳ ಫೂಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂದಾರು ಗ್ರಾ. ಪಂ. ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ದೂರು ನೀಡಿದ್ದು ಮಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ 48 ಟನ್‌ನಷ್ಟು ಮರಳನ್ನು ಮುಟ್ಟುಗೋಲು ಹಾಕಿದ್ದಾರೆ.
ಸಂದೇಶ್ ಎಂಬಾತ ಉರುವಾಲು ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಿಂದ ನೇತ್ರಾವತಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ದಾಸ್ತಾನು ಮಾಡಿಟ್ಟಿದ್ದರು. ಕಳೆದ ಬಾರಿ ಭೂ ವಿಜ್ಞಾನ ಹಾಗೂ ಪೊಲೀಸ್ ಇಲಾಖೆ ದಾಳಿ ನಡೆಸಿ 30 ಲಕ್ಷ ರೂ. ಸೊತ್ತುಗಳನ್ನು ವಶಕ್ಕೆ ಪಡೆದಿತ್ತು. ಆದರೆ ಸಂದೇಶ್ ಮತ್ತೆ ಅಕ್ರಮ ಮರಳು ದಂದೆಯಲ್ಲಿ ತೊಡಗಿರುವ ಬಗ್ಗೆ ಗ್ರಾಮಸ್ಥರು ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಮತ್ತೆ ದಾಳಿ ನಡೆಸಿದ ಗಣಿ ಇಲಾಖೆ ಹಾಗೂ ಪೊಲೀಸರು ಅಕ್ರಮವಾಗಿ ಮರಳು ದಾಸ್ತಾನು ಮಾಡಿರುವ ಬಗ್ಗೆ ಸಂದೇಶ್ ಎಂಬವರ ವಿರುದ್ದ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
ಇಲಾಖೆ ನಿರ್ಲಕ್ಷ್ಯ
ತಾಲೂಕಿನಲ್ಲಿ ಈ ಹಿಂದೆಯೂ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎನ್ನಲಾಗಿದೆ. ಈ ಕುರಿತು ಸ್ಥಳೀಯರು ದೂರು ನೀಡಿದರೂ ಇಲಾಖೆ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೆಸರಿಗೆ ಮಾತ್ರ ದಾಳಿ ನಡೆದಿದೆಯಾದರೂ ಪ್ರಕರಣ ದಾಖಲಾಗಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.