ಮಣಿಪಾಲ: ಇದು ದೇಶಾದ್ಯಂತ ಉಚಿತ ಹೆಲ್ಮೆಟ್ ವಿತರಿಸುವ ಅಭಿಯಾನ ನಡೆಸುತ್ತಿರುವ ಬಿಹಾರದ ‘ಹೆಲ್ಮೆಟ್ ಮ್ಯಾನ್’ ರಾಘವೇಂದ್ರ ಕುಮಾರ್ ಅವರ ಕಥೆ. ರಸ್ತೆ ಅಪಘಾತದಲ್ಲಿ ಗೆಳೆಯನ್ನು ಕಳೆದುಕೊಂಡ ಒಂದು ಕಹಿ ಘಟನೆಯಿಂದ ರಾಘವೇಂದ್ರ ಕುಮಾರ್ ಅವರ ಜೀವನ ಬದಲಾಯಿತು.
ಹೌದು. ಹಾಲಿವುಡ್ ಚಲನಚಿತ್ರ ಪಾತ್ರಗಳಾದ ಸೂಪರ್‌ಮ್ಯಾನ್, ಐರನ್‌ಮ್ಯಾನ್ ಮತ್ತು ಸ್ಪೈಡರ್‌ಮ್ಯಾನ್ ಬಗ್ಗೆ ನೀವು ಕೇಳಿರಬೇಕು. ಆದರೆ ಇಂದು ನಾವು ನೈಜ ಜೀವನದ ಭಾರತೀಯ ಸೂಪರ್ ಹೀರೋ ‘ಹೆಲ್ಮೆಟ್ ಮ್ಯಾನ್’ ಬಗೆಗೆ ಒಂದಷ್ಟು ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ. ಬಿಹಾರದ ಕೈಮೂರ್ ಜಿಲ್ಲೆಯ ಬಾಗಡಿ ಎಂಬ ಸಣ್ಣ ಹಳ್ಳಿಯ ನಿವಾಸಿ ರಾಘವೇಂದ್ರ ಕುಮಾರ್ ಅವರು ತಮ್ಮ ಸೇವೆಯ ಮೂಲಕ ಹೆಸರು ಮತ್ತು ಕೀರ್ತಿಯನ್ನು ಸಂಪಾದಿಸಿಕೊಂಡವರು. ಇವರು ಈ ವರೆಗೆ ದೇಶಾದ್ಯಂತ ಸುಮಾರು 48 ಸಾವಿರಕ್ಕೂ ಹೆಚ್ಚು ಹೆಲ್ಮೆಟ್‌ಗಳನ್ನು ಉಚಿತವಾಗಿ ವಿತರಿಸಿದ್ದಾರೆ.
2014 ರಲ್ಲಿ ಬೈಕು ಅಪಘಾತಕ್ಕೀಡಾಗಿ ಅತ್ಯುತ್ತಮ ಸ್ನೇಹಿತನನ್ನು ಕಳೆದುಕೊಂಡ ರಾಘವೇಂದ್ರ ಅವರು ಈ ಘಟನೆಯಿಂದ ತುಂಬಾ ನೊಂದಿದ್ದರು. ಹೆಲ್ಮೆಟ್ ಧರಿಸಿದೇ ಬೈಕ್ ಚಲಾಯಿಸಿದ ಗೆಳೆಯ ರಸ್ತೆ ಮಧ್ಯೆ ನಡೆದ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದ. ಈ ಘಟನೆಯಿಂದ ನೊಂದ ಅವರು ಸಮಾಜದಲ್ಲಿ ಜಾಗೃತಿ ಮೂಡಿಸಲು ಭಿನ್ಮವಾಗಿ ಮುಂದಾಗುತ್ತಾರೆ. ಅಂದಿನಿಂದ ಅವರು ಉಚಿತವಾಗಿ ಹೆಲ್ಮೆಟ್ ವಿತರಿಸಲು ಪ್ರಾರಂಭಿಸುತ್ತಾರೆ. ನನ್ನ ಗೆಳೆಯನಂತೆ ಹೆಲ್ಮೆಟ್ ಇಲ್ಲದೇ ಬೇರೆ ಯಾರೂ ಸಾಯಬಾರದು ಎಂಬುದು ರಾಘವೇಂದ್ರ ಅವರ ಈ ಕಾರ್ಯದ ಉದ್ದೇಶವಾಗಿದೆ.
ಬಡ ಕುಟುಂಬಕ್ಕೆ ಸೇರಿದ ರಾಘವೇಂದ್ರ ಅವರು 4 ಸಹೋದರರಲ್ಲಿ ಕಿರಿಯವ. ತಂದೆ ಕೃಷಿಕರಾಗಿದ್ದು ಮನೆಯನ್ನು ನೋಡಿಕೊಳ್ಳುತ್ತಿದ್ದಾರೆ. ಕೃಷಿ ಇದ್ದ ಕಾರಣ ಜೀವನ ಸಾಗುತ್ತಿದೆ. ಕುಟುಂಬದ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ. ಆದರೂ ಅವರ ಹೆತ್ತವರು ಶಾಲೆಗೆ ಕಳುಹಿಸಿದ್ದರು. ಆದರೆ 12ನೇ ತರಗತಿ ಬಳಿಕ ಕಾಲೇಜಿಗೆ ಕಳುಹಿಸಲಾಗಲಿಲ್ಲ. ಹೀಗಾಗಿ ಕುಟುಂಬದಲ್ಲಿ ದುಡಿಯುವ ಕೈಗಳು ಒಂದು ಹೆಚ್ಚಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಕಲಿಯುವ ಆಸಕ್ತಿ, ದುಡಿಯುವ ಇಚ್ಚಾಶಕ್ತಿ ರಾಘವೇಂದ್ರ ಅವರಲ್ಲಿತ್ತು. ಇಂತಹ ಪರಿಸ್ಥಿತಿಯಲ್ಲಿ ವಾರಣಸಿಗೆ ತೆರಳಿದ ರಾಘವೇಂದ್ರ ಅವರು ಅಲ್ಲೇ ಸುಮಾರು 5 ವರ್ಷಗಳ ಕಾಲ ಸಣ್ಣ ಕೆಲಸಗಳನ್ನು ಮಾಡಿ ಅಧ್ಯಯನಕ್ಕಾಗಿ ಹಣವನ್ನು ಹೊಂದಿಸಲು ಆರಂಭಿಸಿದರು.
2009ರಲ್ಲಿ ಕಾನೂನು ಅಧ್ಯಯನಕ್ಕಾಗಿ ದೆಹಲಿಗೆ ತೆರಳಿದ್ದರು. ಅಲ್ಲಿ ಅವರಿಗೆ ಕೆಲವು ಸ್ನೇಹಿತರು ಪರಿಚಿತರಾದರು. ಅವರಲ್ಲಿ ಒಬ್ಬ ಕೃಷ್ಣ ಕುಮಾರ್ ಠಾಕೂರ್. ಕೃಷ್ಣ ಕುಮಾರ್ ಅದೇ ಕ್ಯಾಂಪಸ್‌ನಲ್ಲಿ ಎಂಜಿನಿಯರಿಂಗ್ ಮಾಡುತ್ತಿದ್ದ. ಹೀಗಾಗಿ ಇವರಿಬ್ಬರು ಸಹಪಾಠಿಗಳಲ್ಲ.
ಆದರೆ ಹಾಸ್ಟೆಲ್‌ಗಳಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಇವರಿಬ್ಬರು ಅತ್ಯುತ್ತಮ ಗೆಳೆಯರಾಗಿದ್ದಾರೆ. 2014 ರಲ್ಲಿ ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇಯಲ್ಲಿ ಹೆಲ್ಮೆಟ್ ಇಲ್ಲದೆ ಬೈಕು ಸವಾರಿ ಮಾಡುತ್ತಿದ್ದಾಗ ಅಪಘಾತದಲ್ಲಿ ತಲೆಗೆ ಪೆಟ್ಟಾಗಿ ಸಾವನ್ನಪ್ಪಿದ್ದ. ತನ್ನ ಗೆಳೆಯನನ್ನು ಕಳೆದುಕೊಂಡ ನೋವು ಇವರನ್ನು ಗಾಢವಾಗಿ ಕಾಡಲಾರಂಭಿಸಿತು.
ಆಸ್ಪತ್ರೆಯಲ್ಲಿ ಗೆಳೆಯ ಕೃಷ್ಣನ ಮರಣದ ಬಳಿಕ ವೈದ್ಯರು “ನಿಮ್ಮ ಸ್ನೇಹಿತ ಹೆಲ್ಮೆಟ್ ಧರಿಸಿದ್ದರೆ, ಬದುಕುಳಿದಿರುವ ಸಾಧ್ಯತೆ ಹೆಚ್ಚು ಇತ್ತುʼ ಎಂದು ಹೇಳಿದರು. ಇದು ರಾಘವೇಂದ್ರ ಅವರನ್ನು ಯೋಚಿಸುವಂತೆ ಮಾಡಿತು. ʼನನ್ನ ಸ್ನೇಹಿತನಂತೆ ಬೇರೆ ಯಾರೂ ಮಾರ್ಗ ಮಧ್ಯೆ ಸಾವನ್ನಪ್ಪ ಬಾರದುʼ ಎಂದು ನಿರ್ಧರಿಸಿದ ರಾಘವೇಂದ್ರ ಅವರು ಈ ಘಟನೆ ನಡೆದ ಬಳಿಕ ಹೆಲ್ಮೆಟ್ ಕುರಿತು ಅಭಿಯಾನ ಆರಂಭಿಸಿದರು. ಹೆಲ್ಮೆಟ್ ಇಲ್ಲದೇ ಪ್ರಯಾಣಿಸುವವರಿಗೆ ಉಚಿತ ಹೆಲ್ಮೆಟ್‌ಗಳನ್ನು ವಿತರಿಸಲು ಆರಂಭ ಮಾಡಿದರು. ಇದು ದೇಶಾದ್ಯಂತ ಮುಂದುವರಿಯಿತು. ಇದರಿಂದಾಗಿ ಹಲವು ಜೀವಗಳು ಉಳಿದು ಕುಟುಂಬಗಳು ಬೆಳಗಿದವು.
ರಾಘವೇಂದ್ರ ಅವರು ಹೇಳುವಂತೆ “ಈ ಕಾರ್ಯ ಅಷ್ಟು ಸುಲಭವಲ್ಲ. ಇದಕ್ಕಾಗಿ ತನ್ನ ಕೆಲಸವನ್ನು ಬಿಡಬೇಕಾಗಿತ್ತು. ಸ್ವಲ್ಪ ಸಮಯದ ಅನಂತರ ಹೆಲ್ಮೆಟ್ ಖರೀದಿಸಲು ಹೆಚ್ಚಿನ ಹಣ ಬೇಕಾದಾಗ, ಹೆಂಡತಿಯ ಆಭರಣಗಳನ್ನು ಮತ್ತು ಅನಂತರ ಅವನ ಮನೆಯನ್ನೂ ಮಾರಾಟ ಮಾಡಬೇಕಾಗಿ ಬಂತು.
ಹೆಲ್ಮೆಟ್ ಧರಿಸಿದ ಯಾವುದೇ ವ್ಯಕ್ತಿ ಟೋಲ್ ಪ್ಲಾಜಾವನ್ನು ದಾಟದಂತೆ ನಿಯಮವನ್ನು ಜಾರಿಗೆ ತರಬೇಕು ಎನ್ನುತ್ತಾರೆ ರಾಘವೇಂದ್ರ ಅವರು. ಇಡೀ ದೇಶದಲ್ಲಿ ಇದನ್ನು ಮಾಡಲು ಸಾಧ್ಯವಾದರೆ ಜನರ ಮನಸ್ಥಿತಿ ಖಂಡಿತವಾಗಿಯೂ ಬದಲಾಗುತ್ತದೆ. ನನ್ನ ವಿನಂತಿಯೆಂದರೆ ನೀವು 50 ಮೀಟರ್ ಅಥವಾ 50 ಕಿಲೋ ಮೀಟರ್ ಹೋಗುತ್ತಿದ್ದರೂ ಹೆಲ್ಮೆಟ್ ಧರಿಸಿ ಬೈಕ್ ಸವಾರಿ ಮಾಡಿ ಎನ್ನುತ್ತಾರೆ. ಇವರ ಈ ಕಾರ್ಯಕ್ಕೆ ವಿವಿಧ ಭಾಗಗಳ ಸುಮಾರು 200 ಮಂದಿ ಸಾಥ್ ನೀಡುತ್ತಿದ್ದಾರೆ.
ಈಗ, ತಮ್ಮ ಅಭಿಯಾನವನ್ನು ಇನ್ನೂ ಒಂದು ಹೆಜ್ಜೆ ಮುಂದೆ ತೆಗೆದುಕೊಂಡು ಹೋಗಿರುವ ರಾಘವೇಂದ್ರ ಅವರು ಹೆಲ್ಮೆಟ್‌ನೊಂದಿಗೆ 5 ಲಕ್ಷ ರೂ.ಗಳ ಉಚಿತ ಅಪಘಾತ ವಿಮೆಯನ್ನು ಸಹ ನೀಡಲು ಪ್ರಾರಂಭಿಸಿದ್ದಾರೆ. ಅವರಿಗೆ ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಶುರೆನ್ಸ್ ಕಂಪೆನಿ ಸಹಾಯ ಮಾಡುತ್ತವೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ರಾಘವೇಂದ್ರ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಬಿಹಾರ ಸರಕಾರ ರಾಘವೇಂದ್ರ ಅವರಿಗೆ
ಹೆಲ್ಮೆಟ್ ಮ್ಯಾನ್ ಎಂಬ ಹೆಸರನ್ನು ನೀಡಿದೆ.
ಇಷ್ಟಲ್ಲದೇ ರಾಘವೇಂದ್ರ ಅವರು ಆರಂಭದಲ್ಲಿ ಕೆಲವು ಮನೆಗಳಿಗೆ ಭೇಟಿ ನೀಡಿ ಇವರ ಹಳೆಯ ಪಠ್ಯ ಪುಸ್ತಕಗಳನ್ನು ಬಡ ಮಕ್ಕಳಿಗೆ ನೀಡುತ್ತಿದ್ದರು. ಇದರಿಂದ ಪ್ರೇರಣೆಗೊಂಡ ಹಲವು ಇವರ ಜತೆ ಕೈ ಜೋಡಿಸಿದ್ದು ಬಡ ಕುಟುಂಬಗಳಿಗೆ ನೆರವಾಗುತ್ತಿದ್ದಾರೆ. ಇವರ ಕಾರ್ಯಗಳು ಈ ತಲೆಮಾರಿಗೆ ಮಾದರಿಯೇ ಸರಿ.