Advertisement

ಕೊರೊನಾ ಅವಧಿ : ದ.ಕ.ದಲ್ಲಿ 48 ಪೋಕ್ಸೋ ಪ್ರಕರಣ

10:54 PM Nov 20, 2021 | Team Udayavani |

ಮಂಗಳೂರು: ಕೊರೊನಾ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ 48 ಪೋಕ್ಸೋ (ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ) ಪ್ರಕರಣಗಳು ಮತ್ತು 4 ಮಕ್ಕಳ ನ್ಯಾಯ ಸಂಬಂಧಿತ ಪ್ರಕರಣಗಳು ವರದಿಯಾಗಿವೆ ಎಂದು ಜಿಲ್ಲಾ ಪೊಲೀಸ್‌ನ ಹಿರಿಯ ಮಕ್ಕಳ ಕಲ್ಯಾಣ ಅಧಿಕಾರಿ ಡಾ| ಗಾನ ಪಿ. ಕುಮಾರ್‌ ಹೇಳಿದರು.

Advertisement

ಕೊರೊನಾ ಅವಧಿಯಲ್ಲಿ ಮಕ್ಕಳ ಮೇಲಾಗಿರುವ ದುಷ್ಪರಿಣಾಮಗಳ ಕುರಿತು ನಗರದ ಜಿ.ಪಂ. ಸಭಾಂಗಣದಲ್ಲಿ ಶನಿವಾರ ನಡೆದ ಸಾರ್ವಜನಿಕ ಅಹವಾಲು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಯುನಿಸೆಫ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಕಲಾಖೆ ಮತ್ತು ರಾಜ್ಯ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಹಕ್ಕುಗಳ ಮಾಸಾಚರಣೆ ಅಂಗವಾಗಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಟಿ. ಪಾಪ ಭೋವಿ ಕಾರ್ಯಕ್ರಮ ಉದ್ಘಾಟಿಸಿದರು.

ಸೈಬರ್‌ ಅಪರಾಧಗಳಿಗೆ ಮಕ್ಕಳು ಬಲಿಯಾಗುತ್ತಿರುವುದೂ ಕಂಡು ಬಂದಿದೆ. ಮುಖ್ಯವಾಗಿ ಆನ್‌ಲೈನ್‌ ತರಗತಿ ಸಂದರ್ಭ ಮಕ್ಕಳ ಕೈಗೆ ಮೊಬೈಲ್‌ ಫೋನ್‌ ಲಭಿಸಿದ ಪರಿಣಾಮ ಚಾಟಿಂಗ್‌ ಮೂಲಕ ಬಾಹ್ಯ ವ್ಯಕ್ತಿಗಳು ಸಂಪರ್ಕಕ್ಕೆ ಬಂದು ದುಶ್ಚಟಗಳು ಅಂಟಿಕೊಳ್ಳುತ್ತವೆ. ಫೋನ್‌ ರಿಚಾರ್ಜ್‌ ಮಾಡಲು ಅಂಗಡಿಗಳಿಗೆ ತೆರಳಿದ ಸಂದರ್ಭದಲ್ಲಿ ಈ ಮೊಬೈಲ್‌ನಿಂದ ಮಾಹಿತಿಗಳನ್ನು ಬೇರೆಯವರು ಪಡೆದು ದುರ್ಬಳಕೆ ಮಾಡುವಂತಹ ವಿದ್ಯಮಾನಗಳು ನಡೆಯುತ್ತವೆ. ಹಾಗಾಗಿ ಹೆತ್ತವರು ಜಾಗ್ರತೆ ವಹಿಸುವುದರ ಜತೆಗೆ ಮಕ್ಕಳು ಕೂಡ ಎಚ್ಚರಿಕೆಯಿಂದ ಇರಬೇಕು ಎಂದು ಡಾ| ಗಾನ ಪಿ. ಕುಮಾರ್‌ ವಿವರಿಸಿದರು.

Advertisement

ದೇಶದಲ್ಲಿಯೇ ಹೊಸ ಪ್ರಯೋಗ:  ಡಿ. ಶಂಕರಪ್ಪಕೊರೊನಾ ಸಂದರ್ಭ ಮಕ್ಕಳು ಅನುಭವಿಸಿದ ನೋವುಗಳನ್ನು ಸಾರ್ವಜನಿಕವಾಗಿ ಆಲಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವ ಸಲುವಾಗಿ ರಾಜ್ಯದಲ್ಲಿ ಹಮ್ಮಿಕೊಂಡಿರುವ ಈ ಸಾರ್ವಜನಿಕ ಅಹವಾಲು ವಿಚಾರಣೆ ಕಾರ್ಯಕ್ರಮ ದೇಶದಲ್ಲಿಯೇ ಒಂದು ಹೊಸ ಪ್ರಯೋಗ ಎಂದು ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಿ. ಶಂಕರಪ್ಪ ಹೇಳಿದರು.

ಮಕ್ಕಳು ಕೌಟುಂಬಿಕವಾಗಿ, ಸಮುದಾಯ ಹಂತದಲ್ಲಿ ಹಾಗೂ ಶೈಕ್ಷಣಿಕವಾಗಿ ಅನುಭವಿಸಿದ ಸಮಸ್ಯೆ ಗಳನ್ನು ಆಲಿಸಿ ಅವುಗಳ ಬಗ್ಗೆ ಚರ್ಚಿಸಿ, ಜಿಲ್ಲಾ ಮಟ್ಟದಲ್ಲಿ ಪರಿಹಾರ ಸೂಚಿಸಲು ಪ್ರಯತ್ನಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಪರಿಹಾರವಾಗದಿದ್ದರೆ ವಲಯ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿಯೂ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಡಿಡಿಪಿಐ ಮಲ್ಲೇಸ್ವಾಮಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ಕಿಶೋರ್‌ ಕುಮಾರ್‌ ಎಂ., ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿ’ಸೋಜಾ ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ಜಿ. ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next