Advertisement

ಮಲೆ ಮಹದೇಶ್ವರ ಬೆಟ್ಟದಲ್ಲಿ 48 ಜೋಡಿಗಳ ಸಾಮೂಹಿಕ ವಿವಾಹ

04:20 PM Jun 23, 2022 | Team Udayavani |

ಹನೂರು: ರಾಜ್ಯದ ಪವಿತ್ರ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಮುಜರಾಯಿ ಇಲಾಖೆವತಿಯಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಾಮೂಹಿಕ ವಿವಾಹದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ವಧು-ವರರು ಸೇರಿದಂತೆ ನೆರೆಯ ತಮಿಳುನಾಡು ರಾಜ್ಯದಿಂದಲೂ ವಧು-ವರರ ಆಗಮಿಸಿ ನೋಂದಣಿ ಮಾಡಿಸಿ 48 ದಂಪತಿಗಳು ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

Advertisement

ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳಿಗೆ ಪ್ರಾಧಿಕಾರದ ವತಿಯಿಂದ ಮಾಂಗಲ್ಯ, ಕಾಲುಂಗುರ, ಸೀರೆ-ಕುಪ್ಪಸ ಮತ್ತು ಪಂಚೆ-ಶರ್ಟು, ಶಲ್ಯಗಳನ್ನು ನೀಡಲಾಯಿತು.ಸಾಮೂಹಿಕ ವಿವಾಹ ಕಾರ್ಯಕ್ರಮವು ಬೆಳಗ್ಗೆ 8:40ರಲ್ಲಿ ಶುಭ ಕಟಕ ಲಗ್ನದಲ್ಲಿ ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಶಾಸಕ ಆರ್.ನರೇಂದ್ರ ಮಾತನಾಡಿ, ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ 1989ರಿಂದ ನಿರಂತರವಾಗಿ ಸಾಮೂಹಿಕ ವಿವಾಕ ಕಾರ್ಯಕ್ರಮವನ್ನು ಏರ್ಪಡಿಸುತ್ತಾ ಬರಲಾಗುತ್ತಿದೆ. ಇಲ್ಲಿಯವರೆಗೂ 1700ಕ್ಕೂ ಹೆಚ್ಚು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಲ್ಲಿ ವಿವಾಹವಾದ ಯಾವ ದಂಪತಿಗಳು ಸಾಂಸಾರಿ ಜೀವನದಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆಯಿಲ್ಲದೆ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ವಿವಾಹವಾಗುತ್ತಿರುವ ನೀವೆಲ್ಲಾ ಸೌಭಾಗ್ಯವಂತರು. ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ದಂಪತಿಗಳು ದುಶ್ಚಟದಿಂದ ದೂರವಿದ್ದು ಉತ್ತಮ ಜೀವನ ಸಾಗಿಸುವಂತೆ ಕಿವಿಮಾತು ಹೇಳಿದರು.

ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನಶ್ರೀಗಳು ಮಾತನಾಡಿ, ಮದುವೆ ಎಂಬುದು ಇತ್ತೀಚಿನ ದಿನಗಳಲ್ಲಿ ಆಡಂಬರದ ಸಮಾರಂಭವಾಗುತ್ತಿದ್ದು ಇದರ ಸುಳಿಗೆ ಸಿಲುಕಿದ ಹಲವರು ಸಾಲದ ಶೂಲಕ್ಕೆ ಸಿಲುಕುತ್ತಿದ್ದಾರೆ. ಆಡಂಬರದ ಹೆಸರಿನಲ್ಲಿ ದುಂದುವೆಚ್ಚಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರ, ಮುಜರಾಯಿ ಇಲಾಖೆ ಮತ್ತು ಮಠ-ಮಾನ್ಯಗಳು ಸಾಮೂಹಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

Advertisement

ಸಚಿವ ಸೋಮಣ್ಣರ ಪತ್ನಿ ಭಾಗಿ

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ವಸತಿ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರು ಆಗಮಿಸಬೇಕಿತ್ತು. ಆದರೆ ಅನ್ಯಕಾರ್ಯ ನಿಮಿತ್ತ ಅವರು ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗದ ಹಿನ್ನೆಲೆ ಅವರ ಪತ್ನಿ ಶೈಲಜಾ ಅವರನ್ನು ಕಳುಹಿಸಿಕೊಟ್ಟಿದ್ದರು. ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಸಚಿವರ ಪತ್ನಿ ಮಲೆ ಮಾದಪ್ಪನ ದರ್ಶನ ಪಡೆದು ಸಾಲೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಬಳಿಕ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ವಧು-ವರರಿಗೆ ವೈಯಕ್ತಿಕವಾಗಿ ನೆನಪಿನ ಕಾಣಿಕೆಗಳನ್ನು ನೀಡಿ, ಹಣದ ಕೊಡುಗೆಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಅಪರ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ, ಉಪಕಾರ್ಯದರ್ಶಿ ಬಸವರಾಜು, ಪ್ರಾಧಿಕಾರದ ಅಧಿಕಾರಿ ಮತ್ತು ಸಿಬ್ಬಂದಿವರ್ಗ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next