Advertisement

ಮುಂಬಯಿಯಲಿ 46 ಐಷಾರಾಮಿ ವಾಹನಗಳ ಜಪ್ತಿ

05:40 PM Jun 29, 2020 | Suhan S |

ಮುಂಬಯಿ, ಜೂ. 28 : ಕಳೆದ ಎರಡುತಿಂಗಳ ಲಾಕ್‌ಡೌನ್‌ ಅವಧಿಯಲ್ಲಿ ಮಿತಿ ಮೀರಿದ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಗಾಗಿ ಮುಂಬಯಿಯ ಮರೀನ್‌ ಡ್ರೈವ್‌ ಪೊಲೀಸರು 46 ಐಷಾರಾಮಿ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ ಮತ್ತು ಈ ಸಂಬಂಧ 47 ಜನರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ರವಿವಾರ ತಿಳಿಸಿದ್ದಾರೆ.

Advertisement

33 ಕಾರುಗಳು ಮತ್ತು 13 ಬೈಕ್‌ ಗಳನ್ನು ಒಳಗೊಂಡ ಈ ವಾಹನಗಳು ದಕ್ಷಿಣ ಮುಂಬಯಿಯ ಕಫ್ ಪೆರೇಡ್‌, ಬಾಂದ್ರಾ ಮತ್ತು ನಗರದ ಇತರ ಪಶ್ಚಿಮ ಉಪನಗರಗಳಲ್ಲಿನ ಕೆಲವು ಉದ್ಯಮಿಗಳು, ರಾಜಕಾರಣಿಗಳು ಮತ್ತು ಶ್ರೀಮಂತ ಕುಟುಂಬಗಳಿಗೆ ಸಂಬಂಧಪಟ್ಟವು ಆಗಿವೆ ಎಂದು ಅಧಿಕಾರಿ ಹೇಳಿದ್ದಾರೆ. ಮಿತಿ ಮೀರಿದ ವೇಗ ಮತ್ತು ನಿರ್ಲಕ್ಷ್ಯದ ವಾಹನ ಚಾಲನೆಗಾಗಿ ಮರೀನ್‌ ಡ್ರೈವ್‌ ಪೊಲೀಸರು 21 ಪ್ರಕರಣಗಳನ್ನು ದಾಖಲಿಸಿ, 47 ಅಪರಾಧಿಗಳನ್ನು ಬಂಧಿಸಿದ್ದಾರೆ. ಈ ಆರೋಪಿಗಳಿಗೆ ಪೊಲೀಸ್‌ ಠಾಣೆಯಲ್ಲಿ ಜಾಮೀನು ಸಿಕ್ಕಿದೆ, ಆದರೆ ತಮ್ಮ ವಾಹನಗಳ  ಬಿಡುಗಡೆಗಾಗಿ ಅವರು ನ್ಯಾಯಾಲಯವನ್ನು ಸಂಪರ್ಕಿಸಬೇಕಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ವಾಹನ ಚಾಲಕರು ದುಡುಕಿನಿಂದ ಮತ್ತು ನಿರ್ಲಕ್ಷ್ಯದಿಂದ ಚಾಲನೆ ಮಾಡುತ್ತಿದ್ದ ಕಾರಣ ನಾವು ಈ ವಾಹನಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಮರೀನ್‌ ಡ್ರೈವ್‌ ಪೊಲೀಸ್‌ ಠಾಣೆಯ ಹಿರಿಯ ಇನ್ಸ್ ಪೆಕ್ಟರ್‌ ಮೃತ್ಯುಂಜಯ್‌ ಹಿರೇಮಠ್ ಹೇಳಿದ್ದಾರೆ. ಆರಂಭದಲ್ಲಿ ಅವರು ಬಾಂದ್ರಾ-ವರ್ಲಿ ಸೀ ಲಿಂಕ್‌ನಲ್ಲಿ ವಾಹನಗಳ ರೇಸ್‌ ಮಾಡುತ್ತಿದ್ದರು. ಅನಂತರ ಅವರು ಖಾಲಿ ಪೆಡ್ಡರ್‌ ರಸ್ತೆಯನ್ನು ಬಳಸುತ್ತ ಮರೀನ್‌ ಡ್ರೈವ್‌ನಲ್ಲಿ ಮುಂಜಾನೆ ಮತ್ತು ಮಧ್ಯಾಹ್ನ ರೇಸ್‌ ಕೈಗೊಳ್ಳಲು ಪ್ರಾರಂಭಿಸಿದರು. ಮಾಫ‌ತ್‌ಲಾಲ್‌ ಕ್ಲಬ್‌ ಮತ್ತು ಏರ್‌ ಇಂಡಿಯಾ ಕಟ್ಟಡದ ನಡುವೆ ಅವರು ವಾಹನಗಳ ರೇಸ್‌ ಕೈಗೊಳ್ಳುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. ಅಪರಾಧಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next