Advertisement
ಅಲ್ಲದೆ, ಎಚ್1ಎನ್1 ಪ್ರಕರಣಗಳು ದಾಖಲಾದ ಕೂಡಲೇ, ಪ್ರತಿ ದಿನ ಸಂಜೆ 4 ಗಂಟೆಗೆ ದೈನಂದಿನ ವರದಿಯನ್ನು ಇ-ಮೇಲ್ ಮೂಲಕ ಜಿಲ್ಲಾ ಸರ್ವೇಕ್ಷಣಾ ಘಟಕಕ್ಕೆ ಕಳುಹಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಸದರಿ ಪ್ರಕರಣಗಳ ಸಮೀಕ್ಷೆ ಸಂಬಂಧ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು, ಕಚೇರಿಯ ಮೇಲ್ವಿಚಾರಕರು, ಆಶಾ ಕಾರ್ಯಕರ್ತೆಯರು ಹಾಗೂ ಕಿರಿಯ ಮಹಿಳಾ ಆರೋಗ್ಯ ಸಹಾಯಕರನ್ನು ಒಳಗೊಂಡ 5 ತಂಡ ರಚಿಸಿದ್ದು, ಈ ತಂಡ ಜ್ವರ ಸಮೀಕ್ಷೆ ನಡೆಸಿ ಆರೋಗ್ಯದ ಬಗ್ಗೆ ಅರಿವು ಮೂಡಿಸಿದೆ ಎಂದರು.
Related Articles
Advertisement
ಕೇರಳಕ್ಕೆ ಹೋಗಿ ಬಂದವರಿಂದ ವೈರಾಣು: ಕೆ.ಆರ್.ಪುರ ಭಾಗದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಎಚ್1ಎನ್1 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ ಒಂದೇರಡು ಮಂದಿ ಕೇರಳಕ್ಕೆ ಹೋಗಿ ಬಂದವರಿದ್ದಾರೆ ಎಂಬುವುದು ಆರೋಗ್ಯ ಇಲಾಖೆ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ. ಜಲ ಪ್ರಳಯದ ಬಳಿಕ ಕೇರಳದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿವೆ. ಸ್ಥಳೀಯರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ವೈರಾಣು ಹರಡದಂತೆ ನೋಡಿಕೊಳ್ಳಬೇಕು ಎಂದು ಹಿರಿಯ ವೈದ್ಯಾಧಿಕಾರಿ ಡಾ.ಟಿ.ಕೆ.ಸುನಂದಾ ಹೇಳಿದರು.
2ರಿಂದ 8 ಗಂಟೆ ಜೀವಂತ: ಎಚ್1 ಎನ್1 ವೈರಾಣುಗಳು 2ರಿಂದ 8 ಗಂಟೆಗಳ ಕಾಲ ಜೀವಂತವಾಗಿರುತ್ತವೆ. ಹೀಗಾಗಿ ಜನರು ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಬಳಸಿದ ಮಾಸ್ಕ್ ಅನ್ನು ಪದೇ ಪದೆ ಬಳಸದೇ ಬದಲಾವಣೆ ಮಾಡುತ್ತಿರಬೇಕು. ಪ್ರತಿ ದಿನ ಒಂದು ಕಪ್ ಬಿಸಿ ನೀರಿನಲ್ಲಿ ಉಪ್ಪು ಹಾಕಿ, ಆ ನೀರನ್ನು ಬಾಯಿಯೊಳಗೆ ಹಾಕಿಕೊಂಡು ಮುಕ್ಕರಿಸಬೇಕು. ಕೆಮ್ಮು, ಜ್ವರ ಕಾಣಿಸಿಕೊಂಡರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಮತಾ ತಿಳಿಸಿದರು.
ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ: ಹೆರಿಗೆ ವೇಳೆ ಅನಗತ್ಯ ಚಿಕಿತ್ಸೆ ನೀಡುವ ಜತೆಗೆ ನವಜಾತ ಶಿಶುವಿಗೆ ಕಿರುಕುಳ ನೀಡಲಾಗಿದೆ ಎಂದು ಐಎಎಸ್ ಪಲ್ಲವಿ ಅಕುರಾತಿ ಅವರು, ಖಾಸಗಿ ನರ್ಸಿಂಗ್ ಹೋಮ್ ಮೇಲೆ ಮಾಡಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಸಂಬಂಧ ರಚಿಸಲಾಗಿದ್ದ ತನಿಖಾ ತಂಡ ಕೂಡ ವರದಿ ನೀಡಿದೆ. ಈ ವರದಿ ಜಿಲ್ಲಾಧಿಕಾರಿಗಳ ಕೈ ಸೇರಿದ್ದು, ಈ ಸಂಬಂಧ ಅವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜಿ.ಎ.ಶ್ರೀನಿವಾಸ ಇದೇ ವೇಳೆ ಸ್ಪಷ್ಟಪಡಿಸಿದರು.