ಹೊಸದಿಲ್ಲಿ: ನಾಸಾ ತನ್ನ ಜೇಮ್ಸ್ ವೆಬ್ ಟೆಲಿಸ್ಕೋಪ್ ಮೂಲಕ ಆಕಾಶಕಾಯಗಳತ್ತ ದೃಷ್ಟಿ ನೆಟ್ಟ ನಂತರ ಅಸಾಮಾನ್ಯ ಚಿತ್ರಗಳು ಹೊರಬರುತ್ತಿವೆ. ಆಕಾಶದ ವಿಸ್ಮಯಗಳನ್ನೇ ಅವು ತೆರೆದಿಟ್ಟಿವೆ. ಇದೀಗ ಜೇಮ್ಸ್ ವೆಬ್ ಅಪೂರ್ವ ಚಿತ್ರವೊಂದನ್ನು ನಮ್ಮೆದುರಿಗಿಟ್ಟಿದೆ. 45,000 ತಾರಾಪುಂಜಗಳ ಒಂದು ಸಮೂಹವನ್ನು ಒಂದೇ ಚಿತ್ರದಲ್ಲಿ ಸೆರೆಹಿಡಿಯಲಾಗಿದೆ. ಒಂದು ತಾರಾಪುಂಜದಲ್ಲಿ ಎಣಿಸಿ ಮುಗಿಸಲಾರದಷ್ಟು ನಕ್ಷತ್ರಗಳಿರುತ್ತವೆ.
ಜೇಮ್ಸ್ ವೆಬ್ ಅಂತಹ 45,000 ತಾರಾಪುಂಜಗಳನ್ನು ಸೆರೆ ಹಿಡಿದಿದೆ. ಈ ರೀತಿಯ ದೃಶ್ಯವನ್ನು ಈ ಹಿಂದೆ ಹಬಲ್ ಎಂಬ ಟೆಲಿಸ್ಕೋಪ್‌ನಲ್ಲೂ ನೋಡಲಾಗಿತ್ತು. ಆಗದು ಈ ಮಟ್ಟದ ಅಪೂರ್ವತೆಯನ್ನು ಪಡೆದುಕೊಂಡಿರಲಿಲ್ಲ. ಆಕಾಶದಲ್ಲಿನ ಗೂಡ್ಸ್ -ಸೌಥ್ ಎಂಬ ಭಾಗದಲ್ಲಿ ಬರುವ ಭಾಗವನ್ನೇ ಜೇಮ್ಸ್ ವೆಬ್ ಸೆರೆ ಹಿಡಿದಿರುವುದು. ಈ ಚಿತ್ರದ ವಿಶೇಷವನ್ನು ಪತ್ತೆಹಚ್ಚಲು 32 ಟೆಲಿಸ್ಕೋಪ್ ದಿನಗಳನ್ನು ವಿಜ್ಞಾನಿಗಳು ಬಳಸಿಕೊಳ್ಳಲಿದ್ದಾರೆ. ಸದ್ಯ ವಿಜ್ಞಾನಿಗಳ ಮುಂದಿರುವ ಗುರಿ ಮೊದಲ ನಕ್ಷತ್ರಗಳು, ನಕ್ಷತ್ರಪುಂಜಗಳು ರಚನೆಯಾಗಿದ್ದು ಹೇಗೆ ಎನ್ನುವುದು.