Advertisement

ವಿದ್ಯಾವಂತರ ಜಿಲ್ಲೆಯಲ್ಲಿ 4,300 ಅಕ್ಷರ ವಂಚಿತರು!

01:00 AM Feb 20, 2019 | Harsha Rao |

ಮಂಗಳೂರು: ವಿದ್ಯಾವಂತರ ಜಿಲ್ಲೆ ಎಂದು ಗುರುತಿಸಿ ಕೊಂಡ ದಕ್ಷಿಣ ಕನ್ನಡದಲ್ಲಿ ಒಟ್ಟು 4,300 ಮಂದಿ ಅನಕ್ಷರಸ್ಥರನ್ನು ಗುರುತಿಸಲಾಗಿದೆ. 2009ರಿಂದ ಸ್ಥಗಿತಗೊಂಡಿದ್ದ ಸಾಕ್ಷರತಾ ಚಟು ವಟಿಕೆಗಳಿಗೆ ಸರಕಾರ ಮತ್ತೆ 
ಚಾಲನೆ ನೀಡಿದೆ.

Advertisement

ಜಿಲ್ಲೆಯನ್ನು ಈ ಹಿಂದೆ ಸಾಕ್ಷರತಾ ಜಿಲ್ಲೆ ಎಂದು ಘೋಷಿಸಲಾಗಿತ್ತು. ಆದರೆ ಇನ್ನೂ ಅಕ್ಷರ ಜ್ಞಾನ ವಂಚಿತರಿದ್ದಾರೆ ಎಂಬ ಅನುಮಾನದ ಮೇರೆಗೆ ಅಂಗನವಾಡಿ ಕಾರ್ಯಕರ್ತೆಯರ ಮೂಲಕ 15ರಿಂದ 50 ವರ್ಷ ದೊಳಗಿನವರನ್ನು ಗುರಿಯಾಗಿಸಿ ಕೊಂಡು ಸಮೀಕ್ಷೆ ನಡೆಸಲಾಗಿತ್ತು.

ಅದರ ಪ್ರಕಾರ ಮಂಗಳೂರಿನಲ್ಲಿ 1,791, ಬೆಳ್ತಂಗಡಿಯಲ್ಲಿ 943, ಸುಳ್ಯದಲ್ಲಿ 591, ಪುತ್ತೂರಿನಲ್ಲಿ 633 ಹಾಗೂ ಬಂಟ್ವಾಳದಲ್ಲಿ 342 ಮಂದಿ ಅನಕ್ಷರಸ್ಥರನ್ನು ಗುರುತಿಸಲಾಗಿದೆ. ಅವರಿಗೆ ಅಕ್ಷರಾಭ್ಯಾಸ ಆರಂಭಿಸಲು ತಾಲೂಕು ಮಟ್ಟದಲ್ಲಿ ಗ್ರಾ.ಪಂ. ಗಳ ಪಿಡಿಒ ಹಾಗೂ ಪ್ರೇರಕರ ಸಭೆಗಳನ್ನು ನಡೆಸಲಾಗುತ್ತಿದೆ. ಸಮೀಕ್ಷೆಯಲ್ಲಿ ಗುರುತಿಸಲ್ಪಟ್ಟವರಿಗೆ ಬೋಧನೆ, ಮೌಲ್ಯಮಾಪನ ಕಾರ್ಯ ನಡೆಯಲಿದೆ.

ಅಕ್ಷರ ಕಲಿಕೆ ಪ್ರಕ್ರಿಯೆಯನ್ನು ಸೇವಾ ಸಂಸ್ಥೆಗಳ ಮೂಲಕ ನಡೆಸಲು ತೀರ್ಮಾನಿಸಲಾಗಿತ್ತಾದರೂ ಈಗ ಗ್ರಾ.ಪಂ.ಗಳೇ ಕೈಗೊಳ್ಳಲಿವೆ. ಅನುಷ್ಠಾನದ ಹೊಣೆಯನ್ನು ಪಿಡಿಒಗಳಿಗೆ ವಹಿಸಲಾಗುತ್ತಿದೆ. ಗ್ರಾ.ಪಂ. ಮಟ್ಟದಲ್ಲಿ ಈಗಾಗಲೇ ಪ್ರೇರಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಸಾಕ್ಷರತಾ ಕಾರ್ಯ ಕ್ರಮದಡಿ ಚಾಲನೆಯಲ್ಲಿದ್ದ ಮುಂದು ವರಿಕಾ ಶಿಕ್ಷಣವನ್ನು 2009ರ ಮಾರ್ಚ್‌ನಲ್ಲಿ ನಿಲ್ಲಿಸಲಾಗಿತ್ತು. 

Advertisement

ಆರು ತಿಂಗಳ ಕಲಿಕೆ
ಅಕ್ಷರ ವಂಚಿತರಿಗೆ ಅಕ್ಷರಾಭ್ಯಾಸ ಕಲಿಸಲು ಲೋಕ ಶಿಕ್ಷಣ ನಿರ್ದೇಶನಾಲಯದ ರಾಜ್ಯ ಸಾಕ್ಷರತಾ ಮಿಷನ್‌ ಪ್ರಾಧಿಕಾರ “ಬಾಳಿಗೆ ಬೆಳಕು’ ಪಠ್ಯಪುಸ್ತಕ ಸಿದ್ಧಪಡಿಸಿದೆ. ಸಾಮಾನ್ಯವಾಗಿ ಶಾಲೆಗಳಲ್ಲಿ “ಅಕ್ಷರ- ಅಕ್ಷರದಿಂದ ಶಬ್ದ- ಶಬ್ದದಿಂದ ವಾಕ್ಯ’ ರಚನೆ ಕಲಿಕಾ ಕ್ರಮವಾಗಿರುತ್ತದೆ. ಆದರೆ ಈ ಯೋಜನೆಯಲ್ಲಿ “ವಾಕ್ಯ-ವಾಕ್ಯದಿಂದ ಶಬ್ದ- ಶಬ್ದದಿಂದ ಅಕ್ಷರ’ ಮಾದರಿಯ ಕಲಿಕೆ. ಕಲಿಕೆ ಅವಧಿ ಆರು ತಿಂಗಳು. ದಿನಕ್ಕೆ ಎರಡು ಗಂಟೆ ಕಲಿಕೆ. ಓದುವುದು, ಬರೆಯುವುದು ಹಾಗೂ ಲೆಕ್ಕವೆಂದು ವಿಂಗಡಿಸಲಾಗಿದ್ದು ಪ್ರತಿಯೊಂದಕ್ಕೂ 50 ಅಂಕಗಳಂತೆ ಒಟ್ಟು 150 ಅಂಕಗಳಿರುತ್ತವೆ. ಶೇ. 40 ಅಂಕ ಗಳಿಸಿದರೆ ಉತ್ತೀರ್ಣ ಎಂದು ಪರಿಗಣಿಸಲಾಗುವುದು.

ಸರಕಾರದ ಆದೇಶದಂತೆ 
15ರಿಂದ 50 ವಯೋಮಾನದವರ ಸಮೀಕ್ಷೆ ನಡೆಸಿ ಅಕ್ಷರ ವಂಚಿತರ ಮಾಹಿತಿ ಕಲೆಹಾಕಿದ್ದು, ಅವರನ್ನು ಸಾಕ್ಷರರನ್ನಾಗಿಸಲು ಜಿಲ್ಲೆಯಲ್ಲಿ ಸಾಕ್ಷರತಾ ಚಟುವಟಿಕೆ ಮತ್ತೆ ಆರಂಭಗೊಂಡಿದೆ. ಪ್ರತಿ ತಾಲೂಕು ಮಟ್ಟದಲ್ಲಿ ಸಭೆ ನಡೆಸಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.
– ಸುಧಾಕರ್‌ ಕೆ., ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ

– ಕೇಶವ ಕುಂದರ್

Advertisement

Udayavani is now on Telegram. Click here to join our channel and stay updated with the latest news.

Next