Advertisement
ಹೌದು, ಜಿಲ್ಲೆಯಲ್ಲಿನ ನಗರ, ಪಟ್ಟಣಗಳ ವ್ಯಾಪ್ತಿಯಲ್ಲಿ ಓದುಗರಿಗೆ ಜ್ಞಾನ ದೇಗುಲಗಳಾಗಿ ಕಾರ್ಯನಿರ್ವಹಿಸುವ ಸಾರ್ವಜನಿಕ ಗ್ರಂಥಾಲಯಗಳ ನಿರ್ವಹಣೆ ಸಂಪೂರ್ಣ ಸ್ಥಳೀಯ ಸಂಸ್ಥೆಗಳು ಪಾವತಿಸುವ ಕರ ಪಾವತಿ ಮೇಲೆ ನಿಂತಿದ್ದರೂ ಜಿಲ್ಲೆಯಲ್ಲಿ ಮಾತ್ರ ಬರೋಬ್ಬರಿ 43.64 ಲಕ್ಷ ರೂ. ಸೆಸ್‌ನ್ನು ನಗರಸಭೆ, ಪುರಸಭೆ, ಪಪಂಗಳು ಬಾಕಿ ಉಳಿಸಿಕೊಂಡಿರುವುದು ಕಂಡು ಬಂದಿದೆ.
Related Articles
Advertisement
ಗ್ರಂಥಾಲಯಗಳಿಗೆ ಕೊಡಬೇಕು ಶೇ.6 ರಷ್ಟು ಸೆಸ್: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ತನ್ನ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ವಸೂಲಿ ಮಾಡುವ ಆಸ್ತಿ, ವಾಣಿಜ್ಯ, ಕುಡಿಯುವ ನೀರು ತೆರಿಗೆ ಸೇರಿದಂತೆ ವಿವಿಧ ತೆರಿಗೆಗಳ ವಸೂಲಿಯಲ್ಲಿ ಶೇ.6 ರಷ್ಟು ಕರವನ್ನು ಗ್ರಂಥಾಲಯಗಳಿಗೆಂದು ಕಡ್ಡಾಯವಾಗಿ ಪಾವತಿಸಬೇಕೆಂದು ಸರ್ಕಾರದ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಆದರೆ, ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಮಾತ್ರ ಸಾರ್ವಜನಿಕರಿಂದ ಕರ ವಸೂಲಿ ಮಾಡಿದರೂ ಗ್ರಂಥಾಲಯಗಳಿಗೆ ಪಾವತಿಸಬೇಕಾದ ಕರದ ವಿಚಾರದಲ್ಲಿ ಮೀನಾಮೇಷ ಎಣಿಸುತ್ತಿವೆ. ಚಿಕ್ಕಬಳ್ಳಾಪುರ ನಗರಸಭೆ ಒಂದೇ ಬರೋಬ್ಬರಿ 12.81 ಲಕ್ಷ ಕರವನ್ನು ಗ್ರಂಥಾಲಯಕ್ಕೆ ಪಾವತಿಸುವುದು ಬಾಕಿ ಉಳಿಸಿಕೊಂಡಿದ್ದರೆ, ಗೌರಿಬಿದನೂರು ನಗರಸಭೆ ಒಟ್ಟು 10.21 ಲಕ್ಷ ರೂ. ಸೆಸ್ ಬಾಕಿ ಉಳಿಸಿಕೊಂಡಿದೆ.
ಹಲವು ಗ್ರಂಥಾಲಯಗಳಲ್ಲಿ ಮೂಲ ಸೌಕರ್ಯ ಕೊರತೆ!: ಹಲವು ಗ್ರಂಥಾಲಯಗಳಲ್ಲಿ ಓದುಗರಿಗೆ ಮೂಲ ಸೌಕರ್ಯ ಕೊರತೆ ಎದುರಾಗಿದೆ. ಓದುಗರಿಗೆ ಸೂಕ್ತ ಕುರ್ಚಿ, ಟೇಬಲ್‌ಗಳ ವ್ಯವಸ್ಥೆ ಆಗಬೇಕು, ಇರುವ ಕೆಲವು ಈಗಾಗಲೇ ಶಿಥಿಲಗೊಂಡಿ ರಿಪೇರಿಗೆ ಎದುರು ನೋಡುತ್ತಿವೆ. ಮತ್ತೆ ಕೆಲವು ಮುರಿದು ಮೂಲೆ ಸೇರಿವೆ. ಕನಿಷ್ಠ ಓದುಗರಿಗೆ ಬೇಕಾದ ಅಗತ್ಯ ಮೂಲ ಸೌಕರ್ಯ ಒದಗಿಸಬೇಕಾದರೆ ನಗರ ಸ್ಥಳೀಯ ಸಂಸ್ಥೆಗಳು ನೀಡುವ ಸೆಸ್‌ನಿಂದ ಅಷ್ಟೇ ಒದಗಿಸಲು ಸಾಧ್ಯ. ಕೆಲವು ಗ್ರಂಥಾಲಯಗಳಲ್ಲಿ ಕನಿಷ್ಠ ಕುಡಿಯುವ ನೀರು ಇಲ್ಲ ಎಂಬ ಆರೋಪ ಗ್ರಂಥಾಲಯ ಓದುಗರಿಂದ ಕೇಳಿ ಬರುತ್ತಿದೆ.
ನಗರ ಸ್ಥಳೀಯ ಸಂಸ್ಥೆಗಳು ನೀಡುವ ಸೆಸ್‌ನಿಂದ ಜಿಲ್ಲೆಯಲ್ಲಿನ ಸಾರ್ವಜನಿಕ ಗ್ರಂಥಾಲಯಗಳನ್ನು ಸಂಪೂರ್ಣವಾಗಿ ನಿರ್ವಹಿಸಬೇಕಿದೆ. ಜಿಲ್ಲೆಯಲ್ಲಿ ಒಟ್ಟು 43.61 ಲಕ್ಷ ರೂ. ಸೆಸ್ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಂದ ಗ್ರಂಥಾಲಯ ಇಲಾಖೆಗೆ ಬರಬೇಕಿದೆ. ನಗರ ಸ್ಥಳೀಯ ಸಂಸ್ಥೆಗಳು ವಸೂಲಾತಿ ಮಾಡುವ ಕರದಲ್ಲಿ ಶೇ.6 ರಷ್ಟು ಗ್ರಂಥಾಲಯಗಳಿಗೆ ನೀಡಬೇಕು. ಹಲವು ನಗರಸಭೆಗಳಿಗೆ ಬಾಕಿ ಸೆಸ್ ಪಾವತಿಸುವಂತೆ ಪತ್ರ ಬರೆಯಲಾಗಿದೆ. ● ಶಂಕರಪ್ಪ, ಜಿಲ್ಲಾ ಗ್ರಂಥಾಲಯ ಅಧಿಕಾರಿ, ಚಿಕ್ಕಬಳ್ಳಾಪುರ
– ಕಾಗತಿ ನಾಗರಾಜಪ್ಪ