ಕೋಲ್ಕತಾ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶಿಸ್ತುಕ್ರಮದ ಎಚ್ಚರಿಕೆಗೂ ಹೆದರದೆ ಪಶ್ಚಿಮಬಂಗಾಳದಲ್ಲಿ ವೈದ್ಯರು ನಡೆಸುತ್ತಿರುವ ಮುಷ್ಕರ ಶುಕ್ರವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಪಶ್ಚಿಮಬಂಗಾಳದಲ್ಲಿ ಇತ್ತೀಚೆಗೆ ವೈದ್ಯರ ಮೇಲೆ ನಡೆದ ಹಲ್ಲೆ ಖಂಡಿಸಿ ರಾಜ್ಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಇದರಿಂದಾಗಿ ಚಿಕಿತ್ಸೆ ಸಿಗದೆ ರೋಗಿಗಳು ಪರದಾಡುವಂತಾಗಿದೆ.
ಮತ್ತೊಂದೆಡೆ ಬಂಗಾಳದ ಎರಡು ಸರ್ಕಾರಿ ಆಸ್ಪತ್ರೆಯ 43 ವೈದ್ಯರು ರಾಜೀನಾಮೆ ನೀಡುವ ಮೂಲಕ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಆರ್ ಜಿ ಕಾರ್ ಮೆಡಿಕಲ್ ಕಾಲೇಜಿನ 16 ವೈದ್ಯರು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿ ತಿಳಿಸಿದೆ.
ರಾಜೀನಾಮೆ ಪತ್ರಕ್ಕೆ ಸಹಿ ಹಾಕಿರುವ 16 ವೈದ್ಯರು, ರಾಜ್ಯದಲ್ಲಿನ ಪ್ರಸಕ್ತ ಪರಿಸ್ಥಿತಿಯಲ್ಲಿ ತಮಗೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಸೇವೆಗೆ ರಾಜೀನಾಮೆ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಉತ್ತರ ಬಂಗಾಳ ಮೆಡಿಕಲ್ ಕಾಲೇಜು ಮತ್ತು ಡಾರ್ಜಿಲಿಂಗ್ ಸರ್ಕಾರಿ ಆಸ್ಪತ್ರೆಯ ಒಟ್ಟು 27 ವೈದ್ಯರು ಶುಕ್ರವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಗುರುವಾರ ರಾತ್ರಿ ಎನ್ ಆರ್ ಎಸ್ ಮೆಡಿಕಲ್ ಕಾಲೇಜಿನ ಪ್ರಿನ್ಸಿಪಾಲ್ ಮತ್ತು ಮೆಡಿಕಲ್ ಸೂಪರಿಟೆಂಡೆಂಟ್ ರಾಜೀನಾಮೆ ನೀಡಿದ್ದರು.
ಕೆಲವು ದಿನಗಳ ಹಿಂದೆ ಕೋಲ್ಕತಾದ ಎನ್ ಆರ್ ಎಸ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ವೈದ್ಯರ ಮೇಲೆ ಹಲ್ಲೆ ನಡೆದು, ಕೆಲವು ವೈದ್ಯರಿಗೆ ಗಂಭೀರ ಗಾಯಗಳಾಗಿದ್ದವು. ಇದನ್ನು ಪ್ರತಿಭಟಿಸಿ ವೈದ್ಯರು ಮಂಗಳವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಗುರುವಾರ ಎಸ್ ಕೆಎಂ ಆಸ್ಪತ್ರೆ ಆವರಣಕ್ಕೆ ಭೇಟಿ ನೀಡಿದ ಮಮತಾ ಬ್ಯಾನರ್ಜಿ 2ಗಂಟೆಯೊಳಗೆ ಮುಷ್ಕರ ಸ್ಥಗಿತಗೊಳಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವ ಬೆದರಿಕೆ ಒಡ್ಡಿದ್ದರು. ಆದರೆ ವೈದ್ಯರು ಇದಕ್ಕೆ ಬೆದರದೇ ಮುಷ್ಕರ ಮುಂದುವರಿಸಿದ್ದಾರೆ.