Advertisement

ಉಗ್ರ ದಾಳಿ: 42 ಯೋಧರು ಹುತಾತ್ಮ

12:30 AM Feb 15, 2019 | |

ಶ್ರೀನಗರ: ರಜೆ ಮುಗಿಸಿ ದೇಶ ಸೇವೆಯ ಕಾರ್ಯಕ್ಕೆ ತೆರಳುತ್ತಿದ್ದ ಸಿಆರ್‌ಪಿಎಫ್ ಯೋಧರ ಮೇಲೆ ಜಮ್ಮು- ಕಾಶ್ಮೀರದ ಅವಂತಿಪೋರಾದಲ್ಲಿ ಜೈಶ್‌-ಎ-ಮೊಹಮ್ಮದ್‌ ಉಗ್ರರು ಗುರುವಾರ ನಡೆಸಿದ ಪೈಶಾಚಿಕ ಕೃತ್ಯದಲ್ಲಿ 42 ಸೈನಿಕರು ಹುತಾತ್ಮರಾಗಿದ್ದಾರೆ. 

Advertisement

ಆತ್ಮಹತ್ಯಾ ಬಾಂಬರ್‌ ಒಬ್ಬ ಸ್ಕಾರ್ಪಿಯೋ ಕಾರಿನಲ್ಲಿ 350 ಕೆ.ಜಿ. ಸ್ಫೋಟಕಗಳನ್ನು ತುಂಬಿಸಿಕೊಂಡು ಸಿಆರ್‌ಪಿಎಫ್ ಯೋಧರು ತೆರಳು ತ್ತಿದ್ದ ಬಸ್‌ಗೆ ಢಿಕ್ಕಿ ಹೊಡೆಸಿ ಬಾಂಬ್‌ ಸ್ಫೋಟಿಸಿದ್ದಾನೆ. 2001ರ ಬಳಿಕದ ಅತ್ಯಂತ ಘೋರ ಘಟನೆಗೆ ಶ್ರೀನಗರ ಸಾಕ್ಷಿಯಾಗಿದೆ. ತತ್‌ಕ್ಷಣವೇ ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, ಯಾವುದೇ ಕಾರಣಕ್ಕೂ ಯೋಧರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದು ನೇರ ಎಚ್ಚರಿಕೆ ನೀಡಿದ್ದಾರೆ. ಜತೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸೇರಿದಂತೆ ದೇಶದ ಎಲ್ಲ ರಾಜಕಾರಣಿಗಳು ಘಟನೆ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಘಟನೆಯಲ್ಲಿ ಇನ್ನೂ 25 ಯೋಧರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದಾರೆ. ಈ ಎಲ್ಲ ಯೋಧರೂ ರಜೆ ಮುಗಿಸಿ ಜಮ್ಮುವಿನಿಂದ ಶ್ರೀನಗರಕ್ಕೆ ಕರ್ತವ್ಯಕ್ಕೆ ವಾಪಸಾಗುತ್ತಿದ್ದರು. 

ಇನ್ನೊಂದು ಮೂಲಗಳ ಪ್ರಕಾರ ಬಸ್‌ ಸಾಗುತ್ತಿದ್ದ ದಾರಿಯಲ್ಲಿ ಸ್ಫೋಟಕ ತುಂಬಿದ ಕಾರನ್ನು ನಿಲ್ಲಿಸಲಾಗಿತ್ತು. ಅಲ್ಲಿ ಉಗ್ರರೂ ಇದ್ದರು. ಬಸ್‌ ಆಗಮಿ ಸುತ್ತಿದ್ದಂತೆಯೇ ಕಾರ್‌ ಬಾಂಬ್‌ ಸ್ಫೋಟಗೊಂಡಿದ್ದು, ಅವಿತಿದ್ದ ಉಗ್ರರು ಬಸ್‌ ಮೇಲೆ ಯದ್ವಾತದ್ವ ಗುಂಡಿನ ದಾಳಿ ನಡೆಸಿದರು. ಸ್ಫೋಟದ ರಭಸಕ್ಕೆ ಎರಡು ಬಸ್‌ಗಳಿಗೆ ಹಾನಿಯಾಗಿದ್ದು, ಒಂದು ಬಸ್‌ನ ಅವಶೇಷವಾಗಿ ಕೇವಲ ಕೆಲವು ಕಬ್ಬಿಣದ ಪಟ್ಟಿಗಳು ಮಾತ್ರವೇ ಉಳಿದಿವೆ.

ದಶಕದಲ್ಲೇ ಅತೀ ಭೀಕರ 
ಪುಲ್ವಾಮಾದಲ್ಲಿನ ಉಗ್ರ ದಾಳಿ ಈ ದಶಕದಲ್ಲೇ ಅತ್ಯಂತ ಹೇಯ ಕೃತ್ಯ. 2001ರ ಅ.1ರಂದು ಜಮ್ಮು- ಕಾಶ್ಮೀರ ವಿಧಾನಸೌಧಕ್ಕೆ ಜೈಶ್‌ -ಎ -ಮೊಹಮ್ಮದ್‌ ಉಗ್ರ ಸಂಘಟನೆ ದಾಳಿ ನಡೆಸಿತ್ತು. ಸ್ಫೋಟಕ ತುಂಬಿದ ಕಾರನ್ನು ಮೂವರು ಉಗ್ರರು ವಿಧಾನ ಸೌಧದ ಮುಖ್ಯ ದ್ವಾರದಿಂದಲೇ ನುಗ್ಗಿಸಿದ್ದರು. ದಾಳಿಯಲ್ಲಿ 38 ಜನರು ಸಾವನ್ನಪ್ಪಿದ್ದರು. ಓರ್ವ ಉಗ್ರ ಕಾರನ್ನು ನುಗ್ಗಿಸಿದರೆ, ಇಬ್ಬರು ಉಗ್ರರು ಕಟ್ಟಡಕ್ಕೆ ಪ್ರವೇಶಿಸಿ ಇಡೀ ಕಟ್ಟಡವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ಗುಂಡಿನ ದಾಳಿ ನಡೆದ ಬಳಿಕ ಉಗ್ರರನ್ನು ಹತ್ಯೆಗೈಯಲಾಗಿತ್ತು.

ದಾಳಿ ನಡೆಸಿದ್ದು ಯಾರು? 
ಆತ್ಮಹತ್ಯಾ ದಾಳಿಕೋರನನ್ನು ಜೈಶ್‌- ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಆದಿಲ್‌ ಅಹಮದ್‌ ಎಂದು ಗುರು ತಿಸಲಾಗಿದೆ. ಈತನನ್ನು ಆದಿಲ್‌ ಅಹಮದ್‌ ಗಾಡಿ ಟಕ್ರಾನೆವಾಲಾ ಎಂದು ಕರೆಯಲಾಗುತ್ತಿತ್ತು. ಅಷ್ಟೇ ಅಲ್ಲ, ಈತನನ್ನು ಗುಂಡಿಬಾಗ್‌ನ ವಖಾಸ್‌ ಕಮಾಂಡೋ ಎಂದೂ ಗುರುತಿಸಲಾಗುತ್ತಿತ್ತು. ಈತ ಪುಲ್ವಾಮಾದ ಕಾಕಾಪೋರ ನಿವಾಸಿ. ಕಳೆದ ವರ್ಷ ವಷ್ಟೇ ಈತ ಉಗ್ರ ಸಂಘಟನೆಗೆ ಸೇರಿದ್ದ ಎನ್ನಲಾಗಿದೆ. ಘಟನೆ ನಡೆಯುತ್ತಿ ದ್ದಂತೆಯೇ ಈತನ ಫೋಟೋ ಹಾಗೂ ವೀಡಿಯೋಗಳು ಬೆಳಕಿಗೆ ಬಂದಿವೆ.

Advertisement

ವೀಡಿಯೋ ಸಂದೇಶ
ನನ್ನ ಹೆಸರು  ಆದಿಲ್‌. ನಾನು ವರ್ಷದ ಹಿಂದೆ ಜೈಶ್‌ ಸೇರಿದ್ದೆ. ಒಂದು ವರ್ಷ ಕಾದ ಬಳಿಕ ನನಗೆ ನನ್ನ ಉದ್ದೇಶ ಈಡೇರಿಸುವ ಅವ ಕಾಶ ಬಂದಿದೆ. ಈ ವೀಡಿಯೋ ನಿಮ್ಮನ್ನು ತಲುಪುವ ವರೆಗೆ ನಾನು ಸ್ವರ್ಗದಲ್ಲಿರುತ್ತೇನೆ. ಇದು ಕಾಶ್ಮೀರದ ಜನರಿಗೆ ನನ್ನ ಕೊನೆಯ ಸಂದೇಶ’ ಎಂದು ವೀಡಿಯೋದಲ್ಲಿ ಹೇಳಿದ್ದಾನೆ. 

ಸಮಯ: ಅಪರಾಹ್ನ 2.03
ಎಲ್ಲಿ?: ಲೆಥ್‌ಪೋರಾ, ಅವಂತಿಪೋರಾ, ಶ್ರೀನಗರ- ಜಮ್ಮು ರಾಷ್ಟ್ರೀಯ ಹೆದ್ದಾರಿ
42 ಒಂದು ಬಸ್‌ನಲ್ಲಿ  ಸಾಗುತ್ತಿದ್ದ ಯೋಧರು
78 ಸಾಗುತ್ತಿದ್ದ ಬಸ್‌ಗಳ ಸಂಖ್ಯೆ
2500 ಬಸ್‌ಗಳಲ್ಲಿ  ಇದ್ದ ಒಟ್ಟು  ಯೋಧರ ಸಂಖ್ಯೆ

ರಜೆ ಮುಗಿಸಿ ದೇಶ ಸೇವೆಗೆ ಮರಳುತ್ತಿದ್ದರು
ಸುಮಾರು 2547 ಸಿಆರ್‌ಪಿಎಫ್ ಸಿಬಂದಿ ರಜೆ ಮುಗಿಸಿ ಜಮ್ಮುವಿನಿಂದ ಶ್ರೀನಗರಕ್ಕೆ ತೆರಳುತ್ತಿದ್ದರು. 78 ಬಸ್‌ಗಳು ಭದ್ರತೆಯೊಂದಿಗೆ ಸಾಗುತ್ತಿದ್ದವು. ಇವುಗಳಲ್ಲಿ  2,500 ಯೋಧರು ಇದ್ದರು. ದಾಳಿಯ ತೀವ್ರತೆಗೆ ಒಂದು ಬಸ್‌ ಸಂಪೂರ್ಣ ನಾಮಾವಶೇಷವಾಗಿದ್ದು, ಕಬ್ಬಿಣದ ತುಂಡುಗಳು ಮಾತ್ರ ಸ್ಥಳದಲ್ಲಿ ಕಾಣಸಿಗುತ್ತಿವೆ. ಜಮ್ಮುವಿನಿಂದ ಮುಂಜಾವ 3 ಗಂಟೆಗೆ ಪ್ರಯಾಣ ಆರಂಭಿಸಿದ್ದ ಪಡೆ, ಸಂಜೆ ವೇಳೆಗೆ ಶ್ರೀನಗರ ತಲುಪುವುದರಲ್ಲಿತ್ತು. 

ಹುತಾತ್ಮರ ತ್ಯಾಗಕ್ಕೆ ಪ್ರತೀಕಾರ
ಅವಂತಿಪೋರಾದಲ್ಲಿ  ಸಿಆರ್‌ಪಿಎಫ್ ಸಿಬಂದಿ ಮೇಲಿನ ದಾಳಿ ಅತ್ಯಂತ ಹೇಯ ಕೃತ್ಯ. ಈ ಭೀಕರ ಕೃತ್ಯವನ್ನು  ಖಂಡಿಸುತ್ತೇನೆ. ನಮ್ಮ ಹುತಾತ್ಮ ಭದ್ರತಾ ಸಿಬಂದಿಯ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ. ಹುತಾತ್ಮರ ಕುಟುಂಬದೊಂದಿಗೆ ಇಡೀ ದೇಶ ಇರುತ್ತದೆ. ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಘಟನೆಯ ಕುರಿತಂತೆ ಗೃಹ ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. 
– ನರೇಂದ್ರ ಮೋದಿ, ಪ್ರಧಾನಿ

ಪುಲ್ವಾಮಾದಲ್ಲಿನ ಉಗ್ರ ದಾಳಿಯನ್ನು ಭಾರತ ಬಲವಾಗಿ ಖಂಡಿಸುತ್ತದೆ. ಭಯೋತ್ಪಾದನೆಯ ವಿರುದ್ಧ ಹೋರಾಡಲು ನಮ್ಮ ದೇಶ ಒಗ್ಗಟ್ಟಾಗಿ ಎದ್ದು ನಿಲ್ಲುತ್ತದೆ. 
 ರಾಮನಾಥ ಕೋವಿಂದ್‌, ರಾಷ್ಟ್ರಪತಿ

ಸಿಆರ್‌ಪಿಎಫ್ ಯೋಧರ ಮೇಲಿನ ದಾಳಿ ನೋವು ತಂದಿದೆ. ಘಟನೆಯಲ್ಲಿ ಹಲವಾರು ಯೋಧರು ಹುತಾತ್ಮರಾಗಿದ್ದಾರೆ. ಅವರಿಗೆ ನನ್ನ ಶ್ರದ್ಧಾಂಜಲಿ. 
 ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ

ಯೋಧರ ಮೇಲಿನ ದಾಳಿ ನನ್ನಲ್ಲಿ  ತೀವ್ರ ದುಃಖ ತಂದಿದೆ. ಘಟನೆಯಲ್ಲಿ  ಅಧಿಕ ಸಂಖ್ಯೆಯಲ್ಲಿ ಯೋಧರು ಸಾವನ್ನಪ್ಪಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹುತಾತ್ಮರಾದ ಯೋಧರಿಗೆ ನನ್ನ ಶ್ರದ್ಧಾಂಜಲಿ. 
 ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ 

ಪುಲ್ವಾಮಾ ದಾಳಿ ಪದಗಳಲ್ಲಿ ಹೇಳಿಕೊಳ್ಳ ಲಾಗದಷ್ಟು  ನೋವು ತಂದಿದೆ. ಇಂಥ ದಾಳಿಗಳಿಂದ ನಮ್ಮ ಸೇನೆ ಧೈರ್ಯಗುಂದುವುದಿಲ್ಲ. ಉಗ್ರವಾದವನ್ನು ಖಂಡಿತವಾಗಿಯೂ ದಮನ ಮಾಡುತ್ತೇವೆ. 
 ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next