ಶಿರಸಿ: ಕದಂಬರ ಆಳ್ವಿಕೆಯ ಬನವಾಸಿಯ ಪುರಾಣ, ಐತಿಹಾಸಿಕ ಪ್ರಸಿದ್ಧ ಮಧು ಬಣ್ಣದ ಮಧುಕೇಶ್ವರ ದೇವರ ಉತ್ಸವ ಮೂರ್ತಿಯನ್ನು ಹೊತ್ತು ಸರ್ವಾಲಂಕಾರ ಭೂಷಿತನಾಗಿ ರಾಜ ಗಾಂಭೀರ್ಯದಲ್ಲಿ ನಡೆಯುತ್ತಿದ್ದ ರಥಕ್ಕೆ 413 ವರ್ಷ!.
ಪಾರ್ವತಿ ಸಹಿತ ಮಧುಕೇಶ್ವರ ದೇವರಿಗೆ ಈ ರಥ ನಡೆಸುವ ಸೇವೆ ಕೊನೇಯದಾಗಲಿದೆ. ಮುಂದಿನ ವರ್ಷ ಹೊಸ ರಥ ನಿರ್ಮಾಣದ ಕಾರ್ಯಕ್ಕೆ ಸಂಕಲ್ಪ ಮಾಡಲಾಗಿದೆ.
ಬನವಾಸಿಯಲ್ಲಿ ಏ.12ರಂದು ಶ್ರೀದೇವರ ರಥೋತ್ಸವ ನಡೆಯಲಿದೆ. ಸುತ್ತಲಿನ ಹತ್ತಾರು ಸೀಮೆಯ ಭಕ್ತರು, ಅಕ್ಕಪಕ್ಕದ ಜಿಲ್ಲೆಯ ಭಜಕರು ರಥಾರೂಢ ದೇವರಿಗೆ ಹರಕೆ ಸಲ್ಲಿಸಿ ಕೃತಾರ್ಥರಾಗುವುದು ವಾಡಿಕೆ. ಭಕ್ತರು ರಥ ಬೀದಿಯ ತನಕ ರಥೋತ್ಸವ ನಡೆಸಿ ಮಧುಕೇಶ್ವರನಿಗೆ ಉಘೆ ಎನ್ನುತ್ತಾರೆ. ಮೊದಲೆಲ್ಲ ರಥ ತಿರುಗಿಸುವಾಗ ಹುಗಿದು ದಿನಗಟ್ಟಲೆ ಕಾಯುವುದೂ ಇತ್ತು. ಈಗ ಹಾಗಿಲ್ಲ. ಸಿಮೆಂಟ್ ರಸ್ತೆ ಆಗಿದ್ದು, ಆದರೆ, ರಥ 413 ವರ್ಷ ಹಿಂದಿನದ್ದಾಗಿದ್ದರಿಂದ ಹೊಸ ರಥ ನಿರ್ಮಾಣಕ್ಕೆ ಸಂಕಲ್ಪ ಮಾಡಲಾಗಿದೆ.
ದಕ್ಷಿಣ ಭಾರತದ ಅತ್ಯಂತ ದೊಡ್ಡ ರಥ ಎಂದೇ ಕರೆಯಲಾಗುವ ಈ ಮಹಾ ರಥವನ್ನು ಮಧುಕೇಶ್ವರ ದೇವರ ರಥೋತ್ಸವಕ್ಕೆ ಸೋದೆ ಅರಸ ರಾಮಚಂದ್ರ ನಾಯಕ ನೂರಾರು ಕುಶಲಕರ್ಮಿಗಳ ಸಹಕಾರದಲ್ಲಿ
4-5 ವರ್ಷಗಳ ಸತತ ಶ್ರಮ ವಹಿಸಿ ಜಂಬೆ, ಹೊನಲು, ಮತ್ತಿ,ತಾರೆ ಸೇರಿದಂತೆ ಅನೇಕ ಜಾತಿ ಮರ ಬಳಸಿ ನಿರ್ಮಾಣ ಮಾಡಲಾಗಿದೆ. ಎಣ್ಣೆ ಚೆಲ್ಲಿ ರಥವನ್ನು ಉಳಿಸಿಕೊಳ್ಳಲಾಗಿದೆ.
ಹೊಸ ರಥ ನಿರ್ಮಾಣ ಕಾರ್ಯ ಕೂಡ ಆರಂಭವಾಗಿದ್ದು, ಈಗಿನ ರಥ ಸಂರಕ್ಷಣೆ ಮಾಡುವ ಚಿಂತನೆ ನಡೆದಿದೆ. ಏ.12 ರ ರಥೋತ್ಸವಕ್ಕೆ ಭಕ್ತರೂ ರಥಾರೂಢ ದೇವರನ್ನು ಶತಮಾನಗಳಾಚೆಯ ರಥದ ಮೇಲೆ ಕಾಣಲು, ಹರಕೆ ಒಪ್ಪಿಸಲು ಕಾಯುತ್ತಿದ್ದಾರೆ.