Advertisement

35ಕ್ಕೆ 40; ಬಿಹಾರದ ಎಡವಟ್ಟು

06:00 AM Jun 10, 2018 | |

ಪಾಟ್ನಾ: ಕನಿಷ್ಠ ಪಕ್ಷ 100ಕ್ಕೆ 35 ಅಂಕ ಸಿಕ್ಕರೂ ಸಾಕು, ಹೇಗಾದರೂ ಪಾಸ್‌ ಮಾಡಿ ಬಿಡಪ್ಪಾ… ಅಂತ ಹರಕೆ ಹೇಳುವ ವಿದ್ಯಾರ್ಥಿಗಳನ್ನು ನೋಡಿದ್ದೇವೆ. ಕೆಲವರು 35 ಅಂಕ ಗಳಿಸಿ “ಜಸ್ಟ್‌’ ಪಾಸ್‌ ಆಗಿದ್ದನ್ನೂ ಕಂಡಿದ್ದೇವೆ. ಆದರೆ 100ಕ್ಕೆ 120 ಅಂಕ ಬಂದದ್ದು ಎಲ್ಲಾದರೂ, ಎಂದಾದರೂ ನೋಡಿದ್ದೀರಾ? ಬಿಹಾರದಲ್ಲಿ ಇಂಥದ್ದೊಂದು “ಅದ್ಭುತ’ ನಡೆದಿದೆ! ಇಲ್ಲಿನ 10 ಮತ್ತು 12ನೇ ತರಗತಿಯ ಫ‌ಲಿತಾಂಶ ಹೊರಬಿದ್ದಿದ್ದು, ಹಲವು ವಿದ್ಯಾರ್ಥಿಗಳು 35ಕ್ಕೆ 40, ಇನ್ನು ಕೆಲವರು 38 ಅಂಕ ಪಡೆದಿದ್ದಾರೆ. ಹಲವರು ತಮಗೆ ನಿಗದಿತ ಅಂಕಗಳಿಗಿಂತ ಹೆಚ್ಚು ದೊರೆತಿವೆ ಎಂದರೆ, ಇನ್ನು ಕೆಲವರು ಬರೆಯದ ಪತ್ರಿಕೆಗೂ ಅಂಕ ನೀಡಲಾಗಿದೆ ಎನ್ನುತ್ತಿದ್ದಾರೆ. ಇದೆಲ್ಲವೂ ಮೌಲ್ಯ ಮಾಪಕರ ಎಡವಟ್ಟುಗಳೇ ವಿನಾ ದೇವರ ವರ ಅಲ್ಲ.

Advertisement

ಪ್ರತಿ ವರ್ಷವೂ ಬಿಹಾರ ರಾಜ್ಯ ಪರೀಕ್ಷಾ ಮಂಡಳಿ ನಡೆಸುವ ಪರೀಕ್ಷೆ ವೇಳೆ ಒಂದಷ್ಟು ಅಕ್ರಮ, ಅವ್ಯವಹಾರಗಳು ಬಯಲಿಗೆ ಬರುತ್ತವೆ. ಅಕ್ರಮರಹಿತ ಬೋರ್ಡ್‌ ಪರೀಕ್ಷೆ ಬಿಹಾರದ ಮಟ್ಟಿಗೆ ಮರೀಚಿಕೆ. ಅದು ಈ ವರ್ಷವೂ ಮರುಕಳಿಸಿದ್ದು, ಮೌಲ್ಯಮಾಪನ ನಡೆವ ವೇಳೆ ಉಂಟಾದ ಅಕ್ರಮದಿಂದ ಹೀಗಾಗಿದೆಯೊ ಅಥವಾ ಮೌಲ್ಯಮಾಪಕರ ಕಣ್ತಪ್ಪಿನಿಂದ ಇಂಥ ಪ್ರಮಾದಗಳು ನಡೆದಿವೆಯೋ ಎಂಬುದು ತಿಳಿದುಬಂದಿಲ್ಲ.

ಭೀಮ ಕುಮಾರ್‌ ಎಂಬ ವಿದ್ಯಾರ್ಥಿಗೆ ಗಣಿತ ಥಿಯರಿ ಪತ್ರಿಕೆಗೆ 35ಕ್ಕೆ 38 ಅಂಕ ಬಂದಿದೆ. ಬಹು ಆಯ್ಕೆ ಉತ್ತರ ಪ್ರಶ್ನೆಪತ್ರಿಕೆಗೆ 35ಕ್ಕೆ 37 ಅಂಕಗಳು ದೊರಕಿವೆ. ಈ ಕುರಿತು ಮಾತನಾಡಿರುವ ಭೀಮ್‌, ನಿಗದಿತ ಅಂಕಗಳಿಗಿಂತ ಹೆಚ್ಚು ಅಂಕ ಬಂದಿದೆ ಎಂದು ನನಗೆ ತಿಳಿದಿರಲಿಲ್ಲ. ಸ್ನೇಹಿತರು ಹೇಳಿದ ಮೇಲೆಯೇ ಗೊತ್ತಾಯಿತು. ಆದರೆ ಆಶ್ಚರ್ಯವಾಗಲಿಲ್ಲ. ಬಿಹಾರದಲ್ಲಿ ಇಂಥ ಎಡವಟ್ಟು ಸಾಮಾನ್ಯ ಎಂದಿದ್ದಾನೆ. ಇದೇ ರೀತಿ ಮತ್ತಿಬ್ಬರು ವಿದ್ಯಾರ್ಥಿಗಳಿಗೂ ಕ್ರಮವಾಗಿ ಭೌತಶಾಸ್ತ್ರ ಮತ್ತು ಗಣಿತ ವಿಷಯಗಳಲ್ಲಿ ಹೆಚ್ಚು ಅಂಕ ಗಳಿಸಿದ್ದಾರೆ. ವೈಶಾಲಿ ಜಿಲ್ಲೆಯ ವಿದ್ಯಾರ್ಥಿನಿಯೊಬ್ಬಳು, ನಾನು ಜೀವಶಾಸ್ತ್ರ ಪರೀಕ್ಷೆ ಬರೆದೇ ಇಲ್ಲ. ಆದರೂ ನನಗೆ 18 ಅಂಕಗಳು ಬಂದಿವೆ ಎಂದಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next