ಪಾಟ್ನಾ: ಒಬ್ಬ ವ್ಯಕ್ತಿಗೆ ಎಷ್ಟು ಮಂದಿ ಪತ್ನಿಯರು ಇರಬಹುದು? ಇಬ್ಬರು, ನಾಲ್ವರು, ಹತ್ತು ಮಂದಿ? ಬಿಹಾರದ ಒಬ್ಬ ವ್ಯಕ್ತಿಗೆ ಬರೋಬ್ಬರಿ 40 ಪತ್ನಿಯರಿದ್ದಾರೆ. ಆ ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಜನಗಣತಿಯಿಂದ ಈ ಮಾಹಿತಿ ಹೊರಬಿದ್ದಿದೆ.
ರೂಪಚಂದ್ ಎಂಬಾತನೇ ಈ ಭೂಪ. ಬಿಹಾರದ ಅರ್ವಾಲ್ ಜಿಲ್ಲೆಯ ವೇಶ್ಯಾವಾಟಿಕೆ ಅಡ್ಡೆಯಲ್ಲಿ ಜಾತಿ ಜನಗಣತಿ ನಡೆಸುವಾಗ, 40 ಮಂದಿ ಮಹಿಳೆಯರು, ತಮ್ಮ ಪತಿಯ ಹೆಸರಿನ ಸ್ಥಳದಲ್ಲಿ ರೂಪಚಂದ್ ಹೆಸರು ಬರೆದಿದ್ದಾರೆ. ಈ ಬಗ್ಗೆ ಜನಗಣತಿ ಸಿಬ್ಬಂದಿ ಮಹಿಳೆಯರ ಮಕ್ಕಳನ್ನು ಪ್ರಶ್ನಿಸಿದರೆ, ಅವರು ಕೂಡ ರೂಪಚಂದ್ ತಮ್ಮ ತಂದೆ ಎಂದು ಹೇಳಿದ್ದಾರೆ.
ಅರ್ವಾಲ್ ನಗರದ ವಾರ್ಡ್ ಸಂಖ್ಯೆ 7ರಲ್ಲಿರುವ ವೇಶ್ಯಾವಾಟಿಕೆಯ ಅಡ್ಡೆಯಲ್ಲಿ ಈ ಮಹಿಳೆಯರು ಹಾಡು ಮತ್ತು ನೃತ್ಯ ಮಾಡುವ ಮೂಲಕ ತಮ್ಮ ಜೀವನ ಸಾಗಿಸುತ್ತಾರೆ. ಇವರಿಗೆ ನಿಗದಿತ ವಿಳಾಸವಿಲ್ಲ. ಹೀಗಾಗಿ, ಇವರೆಲ್ಲರೂ “ರೂಪಚಂದ್’ನನ್ನು ತಮ್ಮ ಪತಿ ಎಂದು ಹೆಸರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಸಿಎಂ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಜ.7ರಿಂದ ಜಾತಿ ಜನಗಣತಿ ಆರಂಭಿಸಿದೆ. ಇದಕ್ಕಾಗಿ 500 ಕೋಟಿ ರೂ. ಮೀಸಲಿರಿಸಲಾಗಿದೆ. ಎರಡು ಹಂತದಲ್ಲಿ ಈ ಗಣತಿ ನಡೆಸಲಾಗುತ್ತದೆ.
ಮೊದಲ ಹಂತದಲ್ಲಿ ಮನೆಗಳ ಗಣತಿ ನಡೆಸಲಾಗುತ್ತದೆ. ಎರಡನೇ ಹಂತದಲ್ಲಿ, ಧರ್ಮ, ಜಾತಿ, ಉಪ ಜಾತಿ, ಹಣಕಾಸು ಪರಿಸ್ಥಿತಿ ಕುರಿತು ಗಣತಿ ನಡೆಸಲಾಗುತ್ತಿದೆ.