Advertisement

4 ವರ್ಷಗಳ ಪದವಿ ಕೋರ್ಸ್‌: ಆತುರ ಬೇಡ

03:36 AM Jul 03, 2021 | Team Udayavani |

ಅತ್ಯಂತ ಮಹತ್ವಾಕಾಂಕ್ಷೆಯ ಹೊಸ ಶಿಕ್ಷಣ ನೀತಿಯನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿಗೊಳಿಸಲು ರಾಜ್ಯ ಸರಕಾರ ಮುಂದಾಗಿದೆ. ಕೇಂದ್ರ ಸರಕಾರ ಈ ಶಿಕ್ಷಣ ನೀತಿಯನ್ನು ಪ್ರಕಟಿಸಿದಾಗ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಆದರೆ ಕಳೆದೊಂದೂವರೆ ವರ್ಷದಿಂದ ಕೊರೊನಾ ಸಾಂಕ್ರಾಮಿಕದಿಂದಾಗಿ ದೇಶಾದ್ಯಂತ ಶಿಕ್ಷಣ ಕ್ಷೇತ್ರ ಸಂಪೂರ್ಣ ಗೋಜಲುಮಯವಾಗಿದ್ದು ಇಡೀ ವ್ಯವಸ್ಥೆಯೇ ಅತಂತ್ರವಾಗಿದೆ. ಕಳೆದ ಶೈಕ್ಷಣಿಕ ಸಾಲಿನಂತೆ ಈ ಬಾರಿಯೂ ಶಾಲಾಕಾಲೇಜುಗಳ ಆರಂಭದ ಬಗೆಗಿನ ಗೊಂದಲಗಳು ಮುಂದುವರಿದಿವೆ. ಇಂಥ ಸಂದಿಗ್ಧ ಕಾಲಘಟ್ಟದಲ್ಲಿ ರಾಜ್ಯ ಸರಕಾರದ ಈ ನಿರ್ಧಾರ ವಿವಾದಕ್ಕೆಡೆ ಮಾಡಿಕೊಟ್ಟಿದೆ. ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಉದ್ದೇಶದಿಂದ ರೂಪಿಸಲಾಗಿರುವ ಹೊಸ ಶಿಕ್ಷಣ ನೀತಿಯನ್ನು ಹೀಗೆ ಯಾವುದೇ ಪೂರ್ವತಯಾರಿ ಇಲ್ಲದೆ ಅನುಷ್ಠಾನಗೊಳಿಸಿದ್ದೇ ಆದಲ್ಲಿ ಆರಂಭಿಕ ಹಂತದಲ್ಲಿಯೇ ವಿಫ‌ಲವಾಗುವ ಸಾಧ್ಯತೆ ಇದೆ. ಈ ಬಗ್ಗೆ ಶಿಕ್ಷಣ ವಲಯದ ತಜ್ಞರು ಸರಕಾರಕ್ಕೆ ಒಂದಿಷ್ಟು ತಿಳಿಹೇಳುವ ಅಗತ್ಯವಿದೆ.

Advertisement

ಪದವಿ ಇನ್ನು ಮುಂದೆ ಮೂರಲ್ಲ ನಾಲ್ಕು ವರ್ಷವಂತೆ ಹೌದೇ? ರಾಜ್ಯದ ಉನ್ನತ ಶಿಕ್ಷಣ ಸಚಿವರು ರಾಜ್ಯದ ಎಲ್ಲ ವಿ.ವಿ.ಗಳ ಕುಲಪತಿಗಳಿಗೆ ಸೂಚನೆ ನೀಡಿ¨ªಾರಂತೆ. ಈ ಶೈಕ್ಷಣಿಕ ವರ್ಷ ದಿಂದಲೇ ಜಾರಿಗೊಳ್ಳುವಂತೆ ರಾಜ್ಯದ ಎಲ್ಲ ಪದವಿ ಕಾಲೇಜುಗಳಲ್ಲಿ ಮಾನವಿಕ ವಿಜ್ಞಾನ, ಮೂಲ ವಿಜ್ಞಾನ, ಕಾಮರ್ಸ್‌… ಮುಂತಾದ ಪದವಿಗಳನ್ನು ಮೂರು ವರ್ಷಗಳಿಂದ ನಾಲ್ಕು ವಷ‌ìಗಳ ಅಂದರೆ ಎಂಟು ಸೆಮಿಸ್ಟರ್‌ಗಳ ಪದವಿ ಕೋರ್ಸ್‌ ಗಳಾಗಿ ಅನುಷ್ಠಾನಗೊಳಿಸಬೇಕು ಎನ್ನುವ ಸೂಚನೆ ನೀಡಿ¨ªಾರೆನ್ನುವ ಸುದ್ದಿ ಇದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುತ್ತೇವೆ ಎನ್ನುವ ತರಾತುರಿಯಲ್ಲಿ ಯಾವುದೇ ಪೂರ್ವ ಮಾಹಿತಿ, ಪೂರ್ವತಯಾರಿ ಇಲ್ಲದೆ ಏಕಾಏಕಿಯಾಗಿ ಈ ರೀತಿಯ ಸೂಚನೆ ನೀಡುವುದರಿಂದ ಉನ್ನತ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಬಹುದು ಎನ್ನುವುದು ಹಲವು ಶಿಕ್ಷಣ ತಜ್ಞರ ಅಭಿಪ್ರಾಯವೂ ಹೌದು. ಈ ಕುರಿತಾಗಿ ಉನ್ನತ ಶಿಕ್ಷಣ ವಲಯ ಗಂಭೀರವಾಗಿ ಚಿಂತನೆ ನಡೆಸಬೇಕಾದ ಅಗತ್ಯವಿದೆ.

ಕೊರೊನಾ ಕಾಲಘಟ್ಟದಲ್ಲಿ ಶೈಕ್ಷಣಿಕ ವ್ಯವಸ್ಥೆ ಸಂಪೂರ್ಣ ಕಂಗೆಟ್ಟಿರುವ ಹಾಗೂ ಮುಂದಿನ ಶೈಕ್ಷಣಿಕ ವರ್ಷದ ಆರಂಭ ಮತ್ತು ಕಲಿಕಾ ವ್ಯವಸ್ಥೆಯ ಬಗೆಗೆ ಗೊಂದಲಗಳು ಮುಂದುವರಿದಿರುವ ಸಂದರ್ಭದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆ ಆತುರವಾದರೂ ಏಕೆ?, ಈ ಸಂಬಂಧ ಕೈಗೊಳ್ಳಲಾಗಿರುವ ಪೂರ್ವ ಸಿದ್ಧತೆಗಳೇನು?, ಈ ಬಗ್ಗೆ ವಿಶ್ವವಿದ್ಯಾನಿಲಯಗಳು, ವಿದ್ಯಾರ್ಥಿಗಳು, ಹೆತ್ತವರಿಗೆ ಸಮರ್ಪಕ ಮಾಹಿತಿ ನೀಡಲಾಗಿದೆಯೇ?, ಪದವಿ ಕೋರ್ಸ್‌ನ ಅವಧಿಯನ್ನು ಹೆಚ್ಚಿಸುವ ಉದ್ದೇಶ ಮತ್ತು ಅಗತ್ಯವೇನು?.. ಹೀಗೆ ಹಲವಾರು ಪ್ರಶ್ನೆ, ಅನುಮಾನ, ಗೊಂದಲಗಳು ಶಿಕ್ಷಣ ವಲಯವನ್ನು ಕಾಡುತ್ತಿದ್ದು ಇವುಗಳತ್ತ ಇಲ್ಲಿ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ.

1. ವಿದ್ಯಾರ್ಥಿಗಳು ಯಾವ್ಯಾವ ವಿಷಯಗಳನ್ನು ಯಾವ್ಯಾವ ತರಗತಿಯಲ್ಲಿ ಅಧ್ಯಯನ ಮಾಡಬೇಕು?, ನಾಲ್ಕನೇ ವರ್ಷದ ಜೋಡಣೆ ಯಿಂದ ವಿದ್ಯಾರ್ಥಿಗಳಿಗೆ ಸಿಗುವ ವಿಶೇಷ ಅನುಕೂಲವೇನು? ಈ ಕುರಿತಾಗಿ ವಿ.ವಿ.ಗಳಲ್ಲಿ ಸಂಪೂರ್ಣ ಮಾಹಿತಿ ಇದೆಯೇ? ಇದನ್ನು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಮತ್ತು ಕಾಲೇಜಿನ ಉಪನ್ಯಾಸಕರು ವಿಷಯಗಳ ಅಧ್ಯಯನ ಸ್ವರೂಪವನ್ನು ಚರ್ಚೆ ಮಾಡಿ ನಿರ್ಧಾರಕ್ಕೆ ಬಂದಿ¨ªಾರೆಯೇ?..ಇಂತಹ ಹತ್ತು ಹಲವು ಪ್ರಶ್ನೆಗಳು ನೇರ ಫ‌ಲಾನುಭವಿಗಳಾದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಮೂಡುವುದು ಸಹಜ ತಾನೇ?

2. ಈ ಹಿಂದೆಯೂ ಪದವಿ ಮಟ್ಟದಲ್ಲಿ ಇಂತಹ ಕೆಲವೊಂದು ಸುಧಾರಣೆಗಳನ್ನು ತಂದಾಗ ಕೂಡ ಅದೇನು ಅಷ್ಟೊಂದು ಫ‌ಲಕಾರಿಯಾದ ಫ‌ಲಿತಾಂಶ ನೀಡಿಲ್ಲ ಎನ್ನುವುದನ್ನು ಮತ್ತೆ ಮತ್ತೆ ನೆನಪಿಸಬೇಕಾಗುತ್ತದೆ.

Advertisement

3. ವಿದ್ಯಾರ್ಥಿಗಳಲ್ಲಿ ವಿಶೇಷ ಕೌಶಲ ಮೂಡಿಸಬೇಕೆಂಬ ನಿಟ್ಟಿನಲ್ಲಿ ಪಠ್ಯೇತರ ಚಟುವಟಿಕೆಗಳಿಗೂ ಅಂಕ ನೀಡಿ ಪದವಿ ನೀಡಬೇಕು ಅನ್ನುವ ಕಾರಣಕ್ಕಾಗಿ ( ಉಇಅ)ಅದಕ್ಕಾಗಿಯೇ ಐವತ್ತು ಅಂಕಗಳನ್ನು ನೀಡುವ ಕ್ರಮ ಜಾರಿಗೆ ತಂದರು. ಅದು ಎಷ್ಟರಮಟ್ಟಿಗೆ ಫ‌ಲ ನೀಡಿದೆಯೊ ಅಥವಾ ಕಾಟಾಚಾರದ ಅಂಕಗಳ್ಳೋ ತಿಳಿದಿಲ್ಲ.

4.  ಎಲ್ಲ ಪದವಿ ತರಗತಿಗಳಿಗೆ ಭಾರತೀಯ ಸಂವಿಧಾನವನ್ನು ಕಡ್ಡಾಯವಾಗಿ ಅಧ್ಯಯನದ ವಿಷಯವಾಗಿ ಅಳವಡಿಸಿದರೂ ಅಲ್ಲಿ ಕೂಡ ಈ ವಿಷಯವನ್ನು ಕಲಿಸುವ ಪ್ರಾಧ್ಯಾಪಕರ ಆರ್ಹತೆ ಏನು ಎನ್ನುವುದನ್ನು ಖಾತ್ರಿಪಡಿಸಲೇ ಇಲ್ಲ. ಕೆಲಸ ಕಡಿಮೆ ಆದರೆ ಯಾರು ಕೂಡ ಕಲಿಸಬಹುದೆಂಬ ಅನುಕೂಲ ಶಾಸ್ತ್ರದ ಪಾಠವನ್ನು ಕಾಲೇಜುಗಳಿಗೆ ಕಲಿಸಿಕೊಟ್ಟರು. ಇವು ಎಷ್ಟು ತಮಾಷೆ ಆಗಿದೆ ಅಂದರೆ ಪಾಠ ಯಾರು ಬೇಕಾದರೂ ಮಾಡಬಹುದು, ಮೌಲ್ಯಮಾಪನ ಮಾತ್ರ ರಾಜ್ಯಶಾಸ್ತ್ರ ಪ್ರಾಧ್ಯಾಪಕರು ಮಾಡಲಿ. ಹಾಗಾದರೆ ಈ ವಿಷಯದ ಪಾವಿತ್ರ್ಯ ಎಲ್ಲಿಗೆ ಬಂತು?

5. ಅದೇ ರೀತಿಯಲ್ಲಿ ಹೊಸ ಶಿಕ್ಷಣ ನೀತಿ ಒಂದು ಕ್ರಾಂತಿಕಾರಿ ಹೆಜ್ಜೆ ಎಂದು ಹೇಳಿಕೊಂಡು ಯಾವುದೇ ಪೂರ್ವ ಯೋಜನೆ, ಯೋಚನೆ ಇಲ್ಲದೇ ನಾವೇ ಮೊದಲು ಜಾರಿಗೆ ತಂದಿದ್ದೇವೆ ಎನ್ನುವ ವರದಿಯನ್ನು ಕೇಂದ್ರ ಸರಕಾರಕ್ಕೆ ರವಾನಿಸಿ ಸಾಧನೆಯ ಪಟ್ಟಿಯಲ್ಲಿ ಸೇರಿಸಿಕೊಳ್ಳುವುದೇ ಒಂದು ಉದ್ದೇಶವಾದರೆ ಖಂಡಿತವಾಗಿಯೂ ಇದರಿಂದ ಉನ್ನತ ಶಿಕ್ಷಣಕ್ಕೆ ಸಾಧಕಕ್ಕಿಂತ ಬಾಧಕವೇ ಹೆಚ್ಚು.

6. ಇದರ ಪರಿಣಾಮಗಳ ಸಾಧ್ಯತೆ ಏನು? ಈಗಾಗಲೇ ಇಂಥ ಪದವಿಗಳಿಗೆ ಬರುವ ವಿದ್ಯಾರ್ಥಿಗಳು ಮತ್ತು ಹೆತ್ತವರಿಗೂ ಇರುವ ಮನಃಸ್ಥಿತಿ ಏನೆಂದರೆ ಮೂರು ವರ್ಷಗಳಲ್ಲಿ ಪದವಿ ಮುಗಿದು ಬಿಡುತ್ತದೆಯಲ್ಲ, ಮತ್ತೆ ಉದ್ಯೋಗವೋ ಉನ್ನತ ಶಿಕ್ಷಣಕ್ಕೋ ಹೋಗಬಹುದು ಎಂಬುದು. ಈ ಕಾರಣದಿಂದಾಗಿಯೇ ಅದೆಷ್ಟೊ ಬಡ ಕುಟುಂಬದ ಮಕ್ಕಳು ಪದವಿ ಕಾಲೇಜುಗಳಿಗೆ ಸೇರ ಬಯಸುತ್ತಾರೆ. ಇಂತಹ ಆರ್ಥಿಕ, ಸಾಮಾಜಿಕ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳಿಗೆ ಈ ಹೊಸ ಶಿಕ್ಷಣ ನೀತಿಯ ಮಾಹಿತಿ ಸಿಗದೇ ಹೋದರೆ ಅವರು ಕಾಲೇಜಿನ ಕಡೆಗೆ ಮುಖ ಮಾಡುವುದೇ ಕಷ್ಟವಾದೀತು. ಉಪನ್ಯಾಸಕರೇನೊ ವರ್ಕ್‌ಲೋಡ್‌ ಜಾಸ್ತಿ ಆಯಿತೆಂದು ಲೆಕ್ಕ ಹಾಕಬಹುದು. ಆದರೆ ಕೆಲವೊಂದು ವಿಷಯಗಳಿಗೆ ವಿದ್ಯಾರ್ಥಿಗಳ ಸೇರ್ಪಡೆ ಕಡಿಮೆಯಾಗಬಹುದು ಎಂಬ ಎಚ್ಚರಿಕೆಯೂ ಬೇಕು.

7. ವಿದ್ಯಾರ್ಥಿಗಳು ಕಡಿಮೆಯಾಗುತ್ತಾರೆ ಎನ್ನುವುದಕ್ಕೆ ಉದಾಹರಣೆಯಾಗಿ ನನ್ನ ಅನುಭವವನ್ನೇ ನೀಡುವುದಾದರೆ ಬಿ.ಎ. ತರಗತಿಗಳಲ್ಲಿ ಮೊದಲ ವರ್ಷದಲ್ಲಿ ಸುಮಾರು 25 ರಿಂದ 30 ವಿದ್ಯಾರ್ಥಿಗಳು ಸೇರ್ಪಡೆಗೊಂಡರೆ ಎರಡನೇ ವರ್ಷದಲ್ಲಿ ಅದು 20ಕ್ಕೆ ಬಂದಿರುತ್ತದೆ. ಅದೇ ಅಂತಿಮ ವರ್ಷಕ್ಕೆ ಬಂದಾಗ 15ಕ್ಕೆ ಬಂದು ನಿಂತರೆ ನಾವು ಬಚಾವ್‌! ಎನ್ನುವ ಮಟ್ಟದಲ್ಲಿ ಹೆಚ್ಚಿನ ಪದವಿ ಕಾಲೇಜುಗಳು ಉಸಿರಾಡುತ್ತಿರುವ ಪರಿಸ್ಥಿತಿಯಲ್ಲಿರುವಾಗ ಏಕಾಏಕಿಯಾಗಿ ಪದವಿ ನಾಲ್ಕು ವರ್ಷ ಅಂದರೆ ವಿದ್ಯಾರ್ಥಿಗಳ ಪ್ರವೇಶಾತಿ ಮೇಲೆ ಯಾವ ಪರಿಣಾಮ ಬೀರಬಹುದು ಅನ್ನುವ ಕುರಿತಾಗಿ ಅಧ್ಯಯನ ನಡೆಸಬೇಕಾದ ಅಗತ್ಯ ಇಲ್ಲವೇ?
ಶಿಕ್ಷಣ ವಲಯದಲ್ಲಿ ಯಾವುದೇ ಹೊಸ ಪ್ರಯೋಗ ಮಾಡುವಾಗ ಹತ್ತು ಬಾರಿ ಆಲೋಚಿಸಿ, ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದು ಹಿತಕರ ವಲ್ಲವೇ? ಮೊದಲು ನಿರ್ಧಾರ ಅನಂತರ ಮಾಹಿತಿ ಎನ್ನುವುದು ಆರೋಗ್ಯಪೂರ್ಣವಾದ ಆಡಳಿತದ ಲಕ್ಷಣ ಅಲ್ಲ.

- ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ  ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next