ಹೊಸದಿಲ್ಲಿ: ಪೂರ್ವ ದೆಹಲಿಯ ಪಾಂಡವ್ ನಗರ ಪ್ರದೇಶದ ಟ್ಯೂಷನ್ ಸೆಂಟರ್‌ನಲ್ಲಿ ನಾಲ್ಕು ವರ್ಷದ ಬಾಲಕಿಯ ಮೇಲೆ ಆಕೆಗೆ ಟ್ಯೂಷನ್ ನೀಡುತ್ತಿದ್ದ ಶಿಕ್ಷಕಿಯ 34 ವರ್ಷದ ಸಹೋದರ ಅತ್ಯಾಚಾರವೆಸಗಿದ ಘಟನೆ ನಡೆದಿದೆ.
ಆರೋಪಿಯನ್ನು ಬಂಧಿಸಿ ಎಫ್‌ಐಆರ್ ದಾಖಲಿಸಲಾಗಿದೆ.ಘಟನೆ ಬಳಿಕ ಉದ್ರಿಕ್ತ ಜನರು ಕೆಲವು ವಾಹನಗಳನ್ನು ಧ್ವಂಸಗೊಳಿಸಿ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಘಟನೆ ಶನಿವಾರ ನಡೆದಿದ್ದು, ಸಂತ್ರಸ್ತ ಬಾಲಕಿಯನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಯಿಂದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್)-ದೆಹಲಿಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಟ್ಯೂಷನ್ ಸೆಂಟರ್‌ನಲ್ಲಿ ಶಿಕ್ಷಕಿ ಇಲ್ಲದಿದ್ದಾಗ ಆಕೆಯ ಸಹೋದರ ಅತ್ಯಾಚಾರವೆಸಗಿದ್ದಾನೆ. ಘಟನೆಯ ನಂತರ ಬಾಲಕಿ ಅಳುತ್ತಿದ್ದಳು. ಕೃತ್ಯದ ವಿಷಯವನ್ನು ಯಾರಿಗಾದರೂ ಬಹಿರಂಗಪಡಿಸಬಾರದು ಎಂದು ಬೆದರಿಕೆ ಹಾಕಿದ್ದಾನೆ ಎಂದು ತನ್ನ ಪೋಷಕರಿಗೆ ತಿಳಿಸಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.