Advertisement

BRS ಮಾಜಿ ಶಾಸಕ ಜರ್ಮನ್‌ ಪ್ರಜೆ, ಭಾರತೀಯ ಪೌರತ್ವ ರದ್ದು: ತೆಲಂಗಾಣ ಹೈಕೋರ್ಟ್‌ ಘೋಷಣೆ

04:18 PM Dec 10, 2024 | Team Udayavani |

ಹೈದರಾಬಾದ್(‌Hyderbad): ಬಿಆರ್‌ ಎಸ್(ಭಾರತ್‌ ರಾಷ್ಟ್ರ ಸಮಿತಿ) ಮಾಜಿ ಶಾಸಕ ಚನ್ನಮನೇನಿ ರಮೇಶ್‌ ಅವರ ಭಾರತೀಯ ಪೌರತ್ವವನ್ನು ತೆಲಂಗಾಣ ಹೈಕೋರ್ಟ್‌ ರದ್ದುಪಡಿಸಿ, ಜರ್ಮನ್‌ ನಾಗರಿಕ ಎಂದು ಘೋಷಿಸಿದೆ. ಅಲ್ಲದೇ ಜರ್ಮನ್‌ ಪೌರತ್ವವನ್ನು ಮುಚ್ಚಿಟ್ಟದ್ದಕ್ಕಾಗಿ ಮತ್ತು ನ್ಯಾಯಾಂಗದ ದಿಕ್ಕು ತಪ್ಪಿಸಿದ್ದ ಆರೋಪದಡಿ ಹೈಕೋರ್ಟ್‌ ಚನ್ನಮನೇನಿಗೆ 30 ಲಕ್ಷ ರೂಪಾಯಿ ದಂಡ ವಿಧಿಸಿದೆ. ಇದರೊಂದಿಗೆ ಮಾಜಿ ಶಾಸಕರೊಬ್ಬರು ಭಾರತೀಯ ಪೌರತ್ವ ಕಳೆದುಕೊಂಡಿರುವ ಮೊದಲ ಪ್ರಕರಣವಾದಂತಾಗಿದೆ.

Advertisement

ರಮೇಶ್‌ ಅವರ ಸುಳ್ಳಿನಿಂದಾಗಿ 2009ರಿಂದ ನಿಜವಾದ ಭಾರತೀಯ ಪೌರರಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕನ್ನು ಕಳೆದುಕೊಂಡಿರುವುದಾಗಿ ಜಸ್ಟೀಸ್‌ ಬಿ ವಿಜಯ್‌ ಸೇನ್‌ ರೆಡ್ಡಿ ತಿಳಿಸಿದರು. ಜರ್ಮನ್‌ ಪೌರತ್ವ ಹೊಂದಿರುವ ರಮೇಶ್‌ ಅವರ ಭಾರತೀಯ ಪೌರತ್ವವನ್ನು ರದ್ದುಗೊಳಿಸಬೇಕೆಂಬ ಕೇಂದ್ರ ಗೃಹ ಸಚಿವಾಲಯದ ನಿರ್ಧಾರವನ್ನು ಕೋರ್ಟ್‌ ಎತ್ತಿಹಿಡಿದಿದೆ.

ಅರ್ಜಿದಾರ ವಿ.ರೋಹಿತ್‌ ಪರ ವಕೀಲ, ಕಾಂಗ್ರೆಸ್‌ ಪಕ್ಷದ ಆದಿ ಶ್ರೀನಿವಾಸ್‌ ವಾದ ಮಂಡಿಸಿದ್ದು, 1990ರಲ್ಲಿ ಜರ್ಮನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸೆಟಲ್‌ ಆದ ನಂತರ ಜರ್ಮನ್‌ ಪೌರತ್ವ ಪಡೆದಿದ್ದರು. ವೇಮುಲಾವಾಡ ಕ್ಷೇತ್ರದಿಂದ ಸ್ಪರ್ಧಿಸಿ ನಾಲ್ಕು ಬಾರಿ ಶಾಸಕರಾಗಿದ್ದ ರಮೇಶ್‌ ಅವರು ದೀರ್ಘಾವಧಿಯ ರಾಜಕೀಯ ಭವಿಷ್ಯ ಕಂಡುಕೊಂಡಿದ್ದರು. ಇದು ಕಾನೂನಿನ ದುರ್ಬಳಕೆ ಎಂದು ಆದಿ ಶ್ರೀನಿವಾಸ್ ಪೀಠಕ್ಕೆ ತಿಳಿಸಿದ್ದರು.

2008ರ ತನಿಖೆಯಲ್ಲಿ ರಮೇಶ್‌‌  ಭಾರತೀಯ ಪೌರತ್ವ ಹೊಂದಿದ್ದರ ಹೊರತಾಗಿಯೂ ಜರ್ಮನ್‌ ಪಾಸ್‌ ಪೋರ್ಟ್‌ ಮತ್ತು ಜರ್ಮನ್‌ ಪೌರತ್ವ ಹೊಂದಿರುವುದು ಬಯಲಾಗಿತ್ತು. ವಾದ ಮಂಡನೆ ವೇಳೆ ಎಎಸ್‌ ಜಿ ಬಿ ನರಸಿಂಹ ಶರ್ಮಾ ಅವರು, ರಮೇಶ್‌ ವ್ಯಾಲಿಡ್‌ ಜರ್ಮನ್‌ ಪಾಸ್‌ ಪೋರ್ಟ್‌ ಹೊಂದಿದ್ದು, ಅದನ್ನು 2023ರವರೆಗೆ ನವೀಕರಿಸಲಾಗಿತ್ತು ಎಂದು ಮಾಹಿತಿ ನೀಡಿದ್ದರು.

Advertisement

2023ರಲ್ಲಿ ರಮೇಶ್‌ ಅವರು ಮೂರು ಬಾರಿ ಜರ್ಮನಿಗೆ ಭೇಟಿ ನೀಡಿದ್ದರು. ಒಂದು ತಿಂಗಳೊಳಗೆ ರಮೇಶ್‌ ಕಾನೂನು ಹೋರಾಟದ ವೆಚ್ಚ ಸೇರಿದಂತೆ 25 ಲಕ್ಷ ರೂಪಾಯಿಯನ್ನು ಆದಿ ಶ್ರೀನಿವಾಸ್‌ ಅವರಿಗೆ ಪಾವತಿಸಬೇಕು, ಜತೆಗೆ ತೆಲಂಗಾಣ ಹೈಕೋರ್ಟ್‌ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ 5 ಲಕ್ಷ ರೂಪಾಯಿ ಪಾವತಿಸುವಂತೆ ಕೋರ್ಟ್‌ ನಿರ್ದೇಶನ ನೀಡಿರುವುದರೊಂದಿಗೆ 15 ವರ್ಷಗಳ ದೀರ್ಘ ಕಾನೂನು ಹೋರಾಟ ಅಂತ್ಯ ಕಂಡಿದೆ.

2023ರ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ರಮೇಶ್‌ ಅವರಿಗೆ ಬಿಆರ್‌ ಎಸ್‌ ಟಿಕೆಟ್‌ ನಿರಾಕರಿಸಿ, ಲಕ್ಷ್ಮೀ ನರಸಿಂಹ ರಾವ್‌ ಅವರನ್ನು ಕಣಕ್ಕಿಳಿಸಿತ್ತು.ಭಾರತೀಯ ಪೌರತ್ವ ಹೊಂದಿರುವುದಾಗಿ ಹೇಳುವ ಮೂಲಕ ಚುನಾವಣೆ ಸ್ಪರ್ಧಾ ಹಕ್ಕನ್ನು ಪಡೆದಿದ್ದರು ಕೂಡಾ ಭಾರತೀಯ ಕಾನೂನಿನ ಪ್ರಕಾರ ದ್ವಿಪೌರತ್ವ ಕಾನೂನು ಬಾಹಿರವಾಗಿದೆ ಎಂದು ಕೋರ್ಟ್‌ ತೀರ್ಪಿನಲ್ಲಿ ಉಲ್ಲೇಖಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next