Advertisement

ಶಿರೂರು ಆ್ಯಂಬುಲೆನ್ಸ್‌ ಅವಘಡ : ಹನಿ ಮಳೆ, ಮಲಗಿದ್ದ ದನ ಅಪಘಾತಕ್ಕೆ ಕಾರಣವಾಯಿತೇ ?

12:06 AM Jul 21, 2022 | Team Udayavani |

ಬೈಂದೂರು: ವೇಗವಾಗಿ ಬಂದ ಆ್ಯಂಬುಲೈನ್ಸ್‌ ನಿಯಂತ್ರಣ ಕಳೆದುಕೊಂಡು ಟೋಲ್‌ ಪ್ಲಾಜಾದ ಕಂಬಕ್ಕೆ ಢಿಕ್ಕಿ ಹೊಡೆದು ನಾಲ್ವರು ಸಾವನ್ನಪ್ಪಿರುವ ಘಟನೆ ಶಿರೂರಿನಲ್ಲಿ ಬುಧವಾರ ಸಂಭವಿಸಿದೆ.

Advertisement

ಆ್ಯಂಬುಲೆನ್ಸ್‌ನಲ್ಲಿದ್ದ ಗಜಾನನ ಲಕ್ಷ್ಮಣ ನಾಯ್ಕ (36), ಜ್ಯೋತಿ ಲೋಕೇಶ್‌ ನಾಯ್ಕ (32), ಲೋಕೇಶ್‌ ಮಾಧವ ನಾಯ್ಕ (38) ಹಾಗೂ ಮಂಜುನಾಥ ನಾಯ್ಕ (42) ಮೃತಪಟ್ಟವರು. ಹೊನ್ನಾವರ ಸಮೀಪದ ಹಡಿನಬಾಳ ನಿವಾಸಿಗಳಾಗಿರುವ ಅವರು ಹೊನ್ನಾವರದ ಖಾಸಗಿ ಆಸ್ಪತ್ರೆಯಿಂದ ಉಡುಪಿಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳುತ್ತಿದ್ದರು.

ಟೋಲ್‌ ಸಿಬ್ಬಂದಿ ಸಂಬಾಜೆ ಗೋರ್ಪಡೆ (41) ಶಶಾಂಕ್‌, ಗೀತಾ, ಗಣೇಶ, ರೋಶನ್‌ ರಾಡ್ರಿಗಸ್‌ ಗಂಭೀರ ಗಾಯಗೊಂಡಿದ್ದಾರೆ. ಢಿಕ್ಕಿ ಹೊಡೆದ ರಭಸಕ್ಕೆ ಆ್ಯಂಬುಲೆನ್ಸ್‌ನಲ್ಲಿದ್ದವರು ರಸ್ತೆಗೆ ಎಸೆಯಲ್ಪಟ್ಟಿದ್ದರು. ಚಾಲಕ ವಾಹನದಡಿಯಲ್ಲಿ ಸಿಲುಕಿದ್ದ.

ಅಪಘಾತಕ್ಕೆ ಕಾರಣ: ಶಿರೂರು ಟೋಲ್‌ಗೇಟ್‌ನಲ್ಲಿ ಆ್ಯಂಬುಲೆನ್ಸ್‌ ಸಂಚಾರಕ್ಕೆ ಪ್ರತ್ಯೇಕ ಮಾರ್ಗ ಇದ್ದು, ಸೈರನ್‌ ಕೇಳಿದ ತಕ್ಷಣ ಆ ಮಾರ್ಗದ ಬ್ಯಾರಿಕೇಡ್‌ಗಳನ್ನು ತೆಗೆದು ಟೋಲ್‌ ಮುಕ್ತ ಮಾಡಿ ದಾರಿ ಬಿಡಲಾಗುತ್ತದೆ. ಬುಧವಾರ ಸಂಜೆ ಕೂಡ ಆ್ಯಂಬುಲೆನ್ಸ್‌ ವೇಗವಾಗಿ ಬಂದಿದೆ. ಆಗ ಸಣ್ಣದಾಗಿ ಮಳೆ ಸುರಿಯುತ್ತಿತ್ತು. ಗೇಟ್‌ ಸಿಬ್ಬಂದಿ ತರಾತುರಿಯಲ್ಲಿ ಬ್ಯಾರಿಕೇಡ್‌ ತೆರವು ಮಾಡಿದರು. ಇದೇ ವೇಳೆಗೆ ಎದುರುಗಡೆ ಮಲಗಿದ್ದ ದನವೊಂದನ್ನು ಕಂಡು ಚಾಲಕ ಗೊಂದಲದಿಂದ ಬ್ರೇಕ್‌ ಹಾಕುವಂತಾಯಿತು. ಕಾಂಕ್ರೀಟ್‌ ರಸ್ತೆಯಾಗಿರುವ ಕಾರಣ ಆ್ಯಂಬುಲೆನ್ಸ್‌ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಯಿತು.

ಲೋಕೇಶ ದಂಪತಿಗೆ ಇಬ್ಬರು ಪುಟ್ಟ ಮಕ್ಕಳಿದ್ದು ಅಪಘಾತದಿಂದ ಕುಟುಂಬದವರಿಗೆ ಸಿಡಿಲು ಬಡಿದಂತಾಗಿದೆ. ಟೋಲ್‌ ಸಿಬ್ಬಂದಿ ಮತ್ತು ಸ್ಥಳೀಯರು ಉರುಳಿಬಿದ್ದ ಆ್ಯಂಬುಲೆನ್ಸನ್ನು ಮೇಲಕ್ಕೆತ್ತಿ ಶಿರೂರು ಅಸೋಸಿಯೇಶನ್‌ ಆ್ಯಂಬುಲೆನ್ಸ್‌ ಮೂಲಕ ಬೈಂದೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದರು.

Advertisement

ನಡೆದದ್ದೇನು?
ಹಡಿನಬಾಳ ಗ್ರಾಮದ ಹಾಡಗೆರೆ ಮನೆಯವರಾದ ಲೋಕೇಶ್‌ ಮಾದೇವ ನಾಯ್ಕ ಕೂಲಿ ಮಾಡಿ ಬದುಕುವ ಬಡ ಕುಟುಂಬದವರಾಗಿದ್ದಾರೆ. ಬುಧವಾರ ಅಪರಾಹ್ನದ ವೇಳೆಗೆ ಅವರು ರಕ್ತದೊತ್ತಡ (ಬಿಪಿ) ಕಡಿಮೆಯಾಗಿ ಅಸ್ವಸ್ಥರಾದರು. ತತ್‌ಕ್ಷಣ ಪತ್ನಿ, ಸಂಬಂಧಿಗಳಾದ ಕವಲಕ್ಕಿಯಲ್ಲಿ ಗೋಬಿ ಅಂಗಡಿ ನಡೆಸುತ್ತಿರುವ ಮಂಜುನಾಥ ನಾಯ್ಕ (ಗೋಬಿ ಮಂಜು) ಮತ್ತು ಗಜಾನನ ಅವರು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿನ ವೈದ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಆ್ಯಂಬುಲೆನ್ಸ್‌ ಮೂಲಕ ಉಡುಪಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿಯಲ್ಲಿ ಅಪಘಾತ ಸಂಭವಿಸಿತು.

ಹಿಂದಿನ ಘಟನೆಗಳು
ಶಿರೂರು ಟೋಲ್‌ಗೇಟ್‌ನಲ್ಲಿ ಕಳೆದ ವರ್ಷ ಕಾರೊಂದು ಟೋಲ್‌ಗೇಟ್‌ ಕಂಬಕ್ಕೆ ಢಿಕ್ಕಿ ಹೊಡೆದು ಟೋಲ್‌ ಸಿಬಂದಿಯೋರ್ವ ಸ್ಥಳದಲ್ಲೇ ಮೃತಪಟ್ಟಿದ್ದ.ಬೈಂದೂರು ಭಾಗದಲ್ಲಿ ಕೆಲವು ವರ್ಷದ ಹಿಂದೆ ತ್ರಾಸಿ ಮೋವಾಡಿ ಬಳಿ ಶಾಲಾ ಬಸ್‌ ಢಿಕ್ಕಿಯಾಗಿರುವುದು ಹಾಗೂ ಮ್ಯಾಂಗನೀಸ್‌ ಲಾರಿ, ರಿಕ್ಷಾ ಡಿಕ್ಕಿ ಬಳಿಕ ಇತ್ತೀಚೆಗೆ ನಡೆದ ದೊಡ್ಡ ಅಪಘಾತ ಇದಾಗಿದೆ.

ಘಟನ ಸ್ಥಳಕ್ಕೆ ಕುಂದಾಪುರ ಡಿವೈಎಸ್‌ಪಿ ಶ್ರಿಕಾಂತ್‌, ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ, ಠಾಣಾಧಿಕಾರಿ ಪವನ್‌ ನಾಯ್ಕ ಹಾಗೂ ಪೊಲೀಸ್‌ ಸಿಬಂದಿ ಭೇಟಿ ನೀಡಿದ್ದಾರೆ.

ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next