Advertisement

ಕಲಬುರಗಿಯ ಪ್ರಿಯಾಗೆ ಒಲಿದ 4 ಚಿನ್ನ 

11:43 AM Mar 16, 2018 | Team Udayavani |

ಬೆಂಗಳೂರು: “ಎಂಜಿನಿಯರಿಂಗ್‌ ಓದುವ ಬಯಕೆಯಿದ್ದರೂ ವೈದ್ಯ ಪದವಿ ಸೇರಿದೆ. ಸಾಕಷ್ಟು ಪರಿಶ್ರಮ ವಹಿಸಿದ್ದರಿಂದ 4 ಚಿನ್ನದ ಪದಕ ಪಡೆದೆ. ಈ ಖುಷಿ ವರ್ಣಿಸಲು ಆಗುತ್ತಿಲ್ಲ. ನನ್ನ ವೃತ್ತಿ, ಸೇವೆ ನಮ್ಮೂರಿಗೆ ಸಿಗಬೇಕು.’

Advertisement

ಹೀಗೆಂದು ಹೆಮ್ಮೆಯಿಂದ ಹೇಳಿದ್ದು, ವೈದ್ಯಕೀಯ ಪದವಿಯಲ್ಲಿ 4 ಚಿನ್ನದ ಪದಕ ಪಡೆದ ಕಲಬುರಗಿ ಜಿಲ್ಲೆಯ ಡಾ.ವಿ.ಎಂ.ಪ್ರಿಯಾ. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಬಿಎಂಸಿಆರ್‌ಐ) ಗುರುವಾರ ನಡೆದ ಪದವಿ ಪ್ರದಾನ ದಿನಾಚರಣೆಯಲ್ಲಿ 4 ಚಿನ್ನದ‌ ಪದಕ ಪಡೆದ ಪ್ರಿಯಾ, ಫೆಥಾಲಜಿ, ಮೈಕ್ರೋ ಬಯೋಲಜಿ, ಫಾರ್ಮಾಕಾಲಜಿ ಹಾಗೂ ಉನ್ನತ ಶ್ರೇಣಿ ವಿಭಾಗ ಸೇರಿ 4 ಚಿನ್ನದ ಪದಕ ಗಳಿಸಿದ್ದಾರೆ.

ಬೀದರ್‌ ಹಾಗೂ ಕಲಬುರಗಿಯಲ್ಲಿ ಶಿಕ್ಷಣ ಪಡೆದ ಪ್ರಿಯಾರ ತಂದೆ ಕೆಬಿಜೆಎಲ್‌ನಲ್ಲಿ ಸಹಾಯಕ ಎಂಜಿನಿಯರ್‌. “ಅಪ್ಪನಂತೆ ಎಂಜಿನಿಯರ್‌ ಆಗುವ ಆಸೆಯಿದ್ದರೂ ಉತ್ತಮ ರ್‍ಯಾಂಕಿಂಗ್‌, ಹಿರಿಯರ ಸಲಹೆಯಂತೆ ವೈದ್ಯ ಪದವಿಗೆ ಸೇರಿದೆ. ಹೊಸ ವಿಷಯವಾಗಿದ್ದರಿಂದ ಕಠಿಣ ಪರಿಶ್ರಮ ಪಟ್ಟೆ. ಚಿನ್ನದ ಪದಕ ಪಡೆದ ಸುದ್ದಿ ಕೇಳಿದಾಗ ಆದ ಸಂತಸ ಅಷ್ಟಿಷ್ಟಲ್ಲ. ಅದನ್ನು ಈಗಲೂ ವರ್ಣಿಸಲಾಗುತ್ತಿಲ್ಲ.

ಮುಂದೆ ಪೀಡಿಯಾಟ್ರಿಕ್‌ನಲ್ಲಿ (ಮಕ್ಕಳ ಚಿಕಿತ್ಸಾ ತಜ್ಞತೆ) ಸ್ನಾತಕೋತ್ತರ ಪದವಿ ಪಡೆಯುವ ಇಚ್ಛೆ ಇದೆ. ನಂತರ ಸರ್ಕಾರಿ ಸೇವೆಗೆ ಸೇರಿ ಕಲಬುರಗಿಯಲ್ಲೇ ಜನ ಸೇವೆ ಮಾಡುತ್ತೇನೆ. ಜತೆಗೆ ವಾರದಲ್ಲಿ ಒಮ್ಮೆ ಗ್ರಾಮೀಣ ಜನರಿಗೆ ಉಚಿತ ಆರೋಗ್ಯ ಸೇವೆ ನೀಡುವ ಚಿಂತನೆ ಇದೆ. ಮುಂದೆ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡು ಐಎಎಸ್‌ ಹುದ್ದೆಗೇರಬೇಕೆಂಬ ಗುರಿ ಕೂಡ ಇದೆ,’ ಎಂದು ಪ್ರಿಯಾ ಹೇಳಿದರು.

ಬಾಗಲಕೋಟೆಯಲ್ಲೇ ಸೇವೆ: “ವೈದ್ಯ ಸೇವೆ ಸಲ್ಲಿಸಲು ಉತ್ಸುಕನಾಗಿದ್ದೇನೆ. ಮುಂದೆ ಪೀಡಿಯಾಟ್ರಿಕ್‌ ಸರ್ಜನ್‌ ಆಗಬೇಕೆಂಬ ಗುರಿಯಿದೆ. ಸ್ನಾತಕೋತ್ತರ ಪದವಿ ಮುಗಿಸಿ ಬಾಗಲಕೋಟೆಯಲ್ಲೇ ನೆಲೆಸಿ ಜನರಿಗೆ ಆರೋಗ್ಯ ಸೇವೆ ನೀಡುತ್ತೇನೆ,’ ಎಂದವರು ವೈದ್ಯಕೀಯ ಪದವೀಧರ ಡಾ.ಪ್ರಕಾಶ್‌. ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್‌.ಕಿರಣ್‌ಕುಮಾರ್‌ ಮಾತನಾಡಿ, ವಿದ್ಯಾರ್ಥಿಗಳು ತಾವು ಗಳಿಸಿದ ಜ್ಞಾನ, ಕೌಶಲ್ಯವನ್ನು ಜನರ ಆರೋಗ್ಯ ಸೇವೆಗೆ ಬಳಸಬೇಕು.

Advertisement

ದೇಶದಲ್ಲಿ ದೊಡ್ಡ ಜನ ಸಮೂಹವಿದ್ದು, ಎಲ್ಲರಿಗೂ ಜೀವನ ಮಟ್ಟ ಸುಧಾರಿಸಲು ಯುವ ವೈದ್ಯರು ಕಾರ್ಯಪ್ರವೃತ್ತರಾಗಬೇಕು. ಉತ್ತಮ ಜೀವನ ಮಟ್ಟ, ಉದ್ಯೋಗಾವಕಾಶದಿಂದ ಆಕರ್ಷಿತರಾಗಿ ಸಾಕಷ್ಟು ವೈದ್ಯರು ವಿದೇಶಗಳಿಗೆ ಹೋಗುತ್ತಾರೆ. ಆದರೆ, ವಿದೇಶಿಗರೂ ಭಾರತದಲ್ಲಿ ಕೆಲಸ ಮಾಡಲು ಮುಂದಾಗುವ ವಾತಾವರಣ ನಿರ್ಮಿಸಬೇಕು ಎಂದು ಕಿವಿಮಾತು ಹೇಳಿದರು.

ವೈದ್ಯ ವೃತ್ತಿ ವ್ಯಾಪಾರವಲ್ಲ: ಪಿಎಂಎಸ್‌ಎಸ್‌ವೈ ಪೀಡಿಯಾಟ್ರಿಕ್‌ ಕಾರ್ಡಿಯೋಲಜಿ ವಿಭಾಗದ ಪ್ರಾಧ್ಯಾಪಕರಾದ ಡಾ.ಐ.ಬಿ.ವಿಜಯಲಕ್ಷ್ಮೀ ಮಾತನಾಡಿ, ವೈದ್ಯ ವೃತ್ತಿ ವ್ಯಾಪಾರವಲ್ಲ. ರೋಗಿಗಳು ಗ್ರಾಹಕರಲ್ಲ. ಪ್ರತಿ ಜೀವ ಅಮೂಲ್ಯವಾಗಿದ್ದು, ಅದನ್ನು ಉಳಿಸಲು ಶ್ರಮಿಸಬೇಕು ಎಂದರು.

ದೇಶದ ಅತ್ಯುನ್ನತ 10 ಕಾಲೇಜುಗಳಲ್ಲಿ ಬಿಎಂಸಿಆರ್‌ಐ 9ನೇ ಸ್ಥಾನ ಪಡೆದಿದೆ. 25 ಕೋಟಿ ರೂ. ವೆಚ್ಚದಲ್ಲಿ ಸಿಮ್ಯುಲೇಟರ್‌, ವಿಕ್ಟೋರಿಯಾ ಆಸ್ಪತ್ರೆಯಲ್ಲಿ 1000 ಹಾಸಿಗೆ ಆವರಣ, ನೂತನ ಹೊರರೋಗಿ ವಿಭಾಗ ಒಂದೆರಡು ವರ್ಷದಲ್ಲಿ ನಿರ್ಮಾಣವಾಗಲಿವೆ ಎಂದು ಬಿಎಂಸಿಆರ್‌ಐ ನಿರ್ದೇಶಕರು ಹಾಗೂ ಡೀನ್‌ ಡಾ.ಎಸ್‌.ಸಚ್ಚಿದಾನಂದ ಹೇಳಿದರು.

ಬೆಂಗಳೂರು ರೀಜನರೇಟಿವ್‌ ಅಡ್ವಾನ್ಸ್‌ ಇನ್ಸ್‌ಸ್ಟಿಟ್ಯೂಟ್‌ ಆಫ್ ನ್ಯೂರೋಸೈನ್ಸಸ್‌ ಸಂಸ್ಥೆ ಡಾ.ಎನ್‌.ಕೆ.ವೆಂಕಟರಮಣ, ಟ್ರಾಮಾ ಆ್ಯಂಡ್‌ ಎಮರ್ಜೆನ್ಸಿ ಕೇರ್‌ ಸೆಂಟರ್‌ನ ವಿಶೇಷ ಅಧಿಕಾರಿ ಡಾ.ಬಾಲಾಜಿ ಪೈ, ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಕೆ.ರವಿ ಮತ್ತಿತರರಿದ್ದರು.

ವಿದ್ಯಾರ್ಥಿನಿಯರೇ ಮೇಲುಗೈ: ಅನಾಟಮಿ- ಡಾ.ಎಂ. ಸುಶ್ಮಿತಾ, ಫಿಜಿಯೋಲಾಜಿ- ಡಾ.ಪುನೀತಲಕ್ಷ್ಮಿ ರಮೇಶ್‌, ಬಯೋಕೆಮಿಸ್ಟ್ರಿ- ಡಾ.ವಿ.ಪಾವನಾ, ಫಾರೆನ್ಸಿಕ್‌ ಮೆಡಿಸಿನ್‌- ಡಾ.ಬಿ.ಆರ್‌.ಬಿಂದುಶ್ರೀ, ಕಮ್ಯುನಿಟಿ ಮೆಡಿಸಿನ್‌- ಡಾ.ಶ್ರದ್ಧಾ ಜುಟ್ಸೆ, ಆಪ್ತಮಾಲಜಿ- ಡಾ.ಎಸ್‌.ರವಿತೇಜ್‌, ಒತೊರಿನೊಲಾರಿಂಜೊಲಾಜಿ- ಡಾ.ಎಚ್‌.ಎ. ಚಿದಾನಂದ, ಪೀಡಿಯಾಟ್ರಿಕ್ಸ್‌- ಡಾ.ಪ್ರತಿಭಾ ವಿನೋದ್‌,

ಡಾ.ಶ್ರುತಿ ಜಿ.ನಾಯಕ್‌, ಡಾ.ಕೆ.ಆಶಿಷ್‌ ಆಚಾರ್ಯ, ಜನರಲ್‌ ಮೆಡಿಸಿನ್‌- ಡಾ.ಎಸ್‌.ಬಿ.ಪುನೀತ್‌, ಜನರಲ್‌ ಸರ್ಜರಿ- ಡಾ.ಜಿ.ಡಿ.ಸುರಕ್ಷಿತ್‌, ಆಬೆಟ್ರಿಕ್ಸ್‌ ಆ್ಯಂಡ್‌ ಗೈನಕಾಲಜಿ- ಡಾ.ಕೆ.ದಿವ್ಯಶ್ರೀ, ಉನ್ನತ ಶ್ರೇಣಿ ಪಡೆದವರು- ಡಾ.ಎಂ.ಸುಶ್ಮಿತಾ, ಡಾ.ಎಚ್‌.ಎ.ಚಿದಾನಂದ, ಡಾ.ಜಿ.ಡಿ.ಸುರಕ್ಷಿತ್‌ ಹೀಗೆ ವಿವಿಧ ವಿಭಾಗದಲ್ಲಿ ಚಿನ್ನದ ಪದಕ ಪಡೆದವರಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next