ಗುರುಗ್ರಾಮ್ : ಇಲ್ಲಿನ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ವೇಗವಾಗಿ ಬಂದ ಕಾರು ಬೈಕ್‌ಗಳಿಗೆ ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ವಿಗ್ಗಿ ಡೆಲಿವರಿ ಏಜೆಂಟ್‌ಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಮುಂಜಾನೆ ನಾಲ್ವರು ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದ್ದು, ಕುಡಿದ ಮತ್ತಿನಲ್ಲಿದ್ದ ಕಾರು ಚಾಲಕನನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೃತರನ್ನು ಮಧ್ಯಪ್ರದೇಶ ಮೂಲದ ಗೋವಿಂದ್ ಪಟೇಲ್, ಉತ್ತರಾಖಂಡದ ಗೋಪಾಲ್ ಮತ್ತು ಬಿಹಾರ ಮೂಲದ ಜಿತೇಂದರ್ ಮೊಂಡಲ್ ಮತ್ತು ರಜನೀಶ್ ಮೊಂಡಲ್ ಎಂದು ಗುರುತಿಸಲಾಗಿದೆ. ಮೃತರ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೇಗವಾಗಿ ಬಂದ ಕಪ್ಪು ಬಣ್ಣದ ಸ್ಕೋಡಾ ರಾಪಿಡ್ ಕಾರು ಹಿಂದಿನಿಂದ ಎರಡು ಬೈಕ್‌ಗಳಿಗೆ ಢಿಕ್ಕಿ ಹೊಡೆದು ಅವುಗಳಲ್ಲಿ ಒಂದನ್ನು ಕೆಲವು ಮೀಟರ್‌ಗಳವರೆಗೆ ಎಳೆದೊಯ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ಉಳಿದ ಮೂವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ವೇಳೆ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ಆರೋಪಿಯನ್ನು ಸೆಕ್ಟರ್ 43ರ ನಿವಾಸಿ ಹರೀಶ್ ಅಲಿಯಾಸ್ ಹರ್ಷ್ (36) ಎಂದು ಪೊಲೀಸರು ಗುರುತಿಸಿದ್ದಾರೆ.
ಡಿಎಲ್‌ಎಫ್ ಹಂತ-1 ಪೊಲೀಸ್ ಠಾಣೆಯ ಎಸ್‌ಎಚ್‌ಒ ನರೇಶ್ ಕುಮಾರ್ ಸ್ಟೇಷನ್ ಹೌಸ್ ಆಫೀಸರ್ ಮಾತನಾಡಿ, “ನಾವು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ಆತನ ರಕ್ತದ ಮಾದರಿಯನ್ನು ತೆಗೆದುಕೊಂಡಿದ್ದೇವೆ. ನಾವು ತನಿಖೆ ನಡೆಸುತ್ತೇವೆ ಮತ್ತು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಹಾನಿಗೊಳಗಾದ ಕಾರು ಮತ್ತು ಬೈಕ್‌ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.