Advertisement

ಗದ್ದಲದಲ್ಲೇ ಮುಕ್ತಾಯ; ಒಂದು ದಿನ ಮೊದಲೇ ಸಂಸತ್‌ ಅಧಿವೇಶನಕ್ಕೆ ತೆರೆ

01:22 AM Dec 23, 2021 | Team Udayavani |

ಹೊಸದಿಲ್ಲಿ: ಬಹುತೇಕ ಕೋಲಾಹಲವಾಗಿಯೇ ಶುರುವಾಗಿದ್ದ ಸಂಸತ್‌ನ ಚಳಿಗಾಲದ ಅಧಿವೇಶನ ಬುಧವಾರ ಮುಕ್ತಾಯವಾಗಿದೆ. ಹೀಗಾಗಿ, ಲೋಕಸಭೆ ಮತ್ತು ರಾಜ್ಯಸಭೆಗಳ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ. ನ.29ರಂದು ಶುರುವಾಗಿದ್ದ ಅಧಿವೇಶನ ನಿಗದಿಯಾಗಿದ್ದಂತೆ ಡಿ. 23ರಂದು ಮುಕ್ತಾ­ಯ­ವಾಗಬೇಕಾಗಿತ್ತು. ಎರಡೂ ಸದನಗಳಲ್ಲಿ ವಿಪ ಕ್ಷಗಳ ಆಕ್ಷೇಪ, ಆಕ್ರೋಶಗಳ ಬೆನ್ನಲ್ಲಿಯೇ ಕಲಾಪ ಮುಂದೂ­ಡಲಾಯಿತು. ಬಳಿಕ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ವಿಪಕ್ಷಗಳು ಸುಗಮವಾಗಿ ಕಲಾಪ ನಡೆಸಲು ಅವಕಾಶ ಕೊಡಲಿಲ್ಲ ಎಂದು ದೂರಿದ್ದಾರೆ. ಅದಕ್ಕೆ ತಿರುಗೇಟು ನೀಡಿರುವ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಸೂದೆಗಳನ್ನು ಕ್ಷಿಪ್ರವಾಗಿ ಅಂಗೀಕರಿಸುವ ನಿಟ್ಟಿನಲ್ಲಿ ಸಂಸದರನ್ನು ಅಮಾನತು ಮಾಡಲಾಗಿದೆ ಎಂದು ದೂರಿದ್ದಾರೆ.

Advertisement

ಲೋಕಸಭೆಯಲ್ಲಿ ಕಲಾಪ ಆರಂಭವಾಗು­ತ್ತಿದ್ದಂತೆಯೇ ಸ್ಪೀಕರ್‌ ಓಂ ಬಿರ್ಲಾ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ನಿರ್ಧಾರ ಪ್ರಕಟಿಸಿದರು. ಕೋಲಾಹಲ, ಪ್ರತಿಭಟನೆ ಯಿಂದಾಗಿ 18 ಗಂಟೆ 48 ನಿಮಿಷಗಳ ಕಾಲ ಅವಧಿ ನಷ್ಟವಾಗಿದೆ. ಡಿ.2ರಂದು ಕೊರೊನಾ ವಿಚಾರವಾಗಿ ಸುದೀರ್ಘ‌ ಚರ್ಚೆ ನಡೆಸಿದ್ದರಿಂದ ಒಂದೇ ದಿನ ಸದನದ ಕಲಾಪ ಉತ್ಪಾದಕತೆ (ಪ್ರೊಡಕ್ಟಿವಿಟಿ) ಶೇ.204ಕ್ಕೆ ಏರಿಕೆಯಾಗಿತ್ತು ಎಂದರು. ಒಟ್ಟಾರೆಯಾಗಿ ಸದನದ ಉತ್ಪಾದಕತೆ ಶೇ.82 ಎಂದರು. ಲಖೀಂಪುರಖೇರಿ ಪ್ರಕರಣ, ಮೂರು ರೈತ ಕಾಯ್ದೆ ಸೇರಿದಂತೆ ಹಲವು ವಿಚಾರಗಳಿಗೆ ವಿಪಕ್ಷಗಳ ಸದಸ್ಯರು ಕೋಲಾಹಲ ಎಬ್ಬಿಸುತ್ತಿದ್ದರು.

ಆತ್ಮಾವಲೋಕನ ಮಾಡಿ: ರಾಜ್ಯಸಭೆಯಲ್ಲಿ ದಿನದ ಮಟ್ಟಿಗೆ ಕಲಾಪ ಶುರುವಾಗುತ್ತಿದ್ದಂತೆಯೇ ಮಾತನಾ­ಡಿದ ಸಭಾಪತಿ ಎಂ.ವೆಂಕಯ್ಯ ನಾಯ್ಡು “ಯಾವ ರೀತಿ ಸದನದಲ್ಲಿ ಕಲಾಪಗಳು ನಡೆದಿವೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ. ಮುಂದಿನ ಅಧಿವೇಶನದ ಅವಧಿಯಲ್ಲಾದರೂ ವರ್ತನೆ ತಿದ್ದಿಕೊಳ್ಳಿ’ ಎಂದು ಮನವಿ ಮಾಡಿದ್ದಾರೆ. ಮೇಲ್ಮನೆಯಲ್ಲಿ ಸದನ ನಡೆಯುವ ವೇಳೆ ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಲೇಬೇಕು ಎಂದು ಹೇಳಿದರು. ಜತೆಗೆ ಕ್ರಿಸ್‌ಮಸ್‌, ಹೊಸವರ್ಷದ ಶುಭಾಶಯಗಳನ್ನು ಕೋರಿ ಅನಿರ್ದಿಷ್ಟಾವಧಿಗೆ ಕಲಾಪ ಮುಂದೂಡಿದರು. ಮುಂಗಾರು ಅಧಿವೇಶನದಲ್ಲಿ ಅನುಚಿತ ವರ್ತನೆ ತೋರಿದ್ದಕ್ಕಾಗಿ 12 ಸಂಸದರನ್ನು ಅಮಾನತು ಮಾಡ ಲಾಗಿತ್ತು. ಮಂಗಳವಾರ ಟಿಎಂಸಿ ಸಂಸದ ಡೆರಿಕ್‌ ಒ ಬ್ರಿಯಾನ್‌ ಅವರನ್ನೂ ಅಮಾನತು ಮಾಡಲಾಗಿತ್ತು. ಇದೇ ಕಾರಣಕ್ಕೆ ಅವರು ಬುಧವಾರ ಸಂಸತ್‌ ಭವನದ ಮುಂಭಾಗದಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದಾರೆ.

ವಿಪಕ್ಷಗಳೇ ಅಡ್ಡಿ ಮಾಡಿದ್ದು
ವಿಪಕ್ಷಗಳ ಹಠಮಾರಿ ಧೋರಣೆಯಿಂದ ಸುಗಮವಾಗಿ ಕಲಾಪ ನಡೆಯಲಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಆರೋಪಿಸಿದ್ದಾರೆ. ಅಧಿವೇಶನ ಮುಂದೂಡಿಕೆಯಾದ ಬಳಿಕ ಮಾತನಾಡಿದ ಅವರು, ವಿಪ ಕ್ಷಗಳಿಗೆ ಬಿಜೆಪಿ ನೇತೃತ್ವದ ಎನ್‌ಡಿಎಗೆ 2019ರಲ್ಲಿ ಎರಡನೇ ಬಾರಿ ಅಧಿಕಾರ ಸಿಕ್ಕಿದ್ದನ್ನು ಇನ್ನೂ ಅರಗಿಸಲು ಆಗುತ್ತಿಲ್ಲ ಎಂದರು. ಸರಕಾರದ ವತಿಯಿಂದ ಸಂಧಾನಕ್ಕಾಗಿ ಪ್ರಯತ್ನಿಸಿದರೂ, ವಿಪಕ್ಷಗಳು ಅದಕ್ಕೆ ಸಹಕರಿಸಲಿಲ್ಲ ಎಂದು ಆರೋಪಿಸಿದರು. ವೋಟರ್‌ ಐಡಿಗೆ ಆಧಾರ್‌ ಲಿಂಕ್‌ ಮಾಡುವ ಮಸೂದೆ ಚುನಾವಣ ಕಾನೂನು (ತಿದ್ದುಪಡಿ) ಮಸೂದೆ ಅಧ್ಯಯನ ನಡೆಸಲು ಸಮಯಾವಕಾಶ ನೀಡಿರಲಿಲ್ಲ ಎಂಬ ಆರೋಪವನ್ನೂ ಅವರು ತಿರಸ್ಕರಿಸಿದ್ದಾರೆ.

ಇದನ್ನೂ ಓದಿ:ಆನ್‌ಲೈನ್‌ ಗೇಮ್‌ ನಿಷೇಧ : ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

Advertisement

ಮಸೂದೆ ಅಂಗೀಕರಿಸಲು ಅಮಾನತು: ಖರ್ಗೆ
ಸದನದಲ್ಲಿ ಕ್ಷಿಪ್ರವಾಗಿ ಮಸೂದೆಗಳನ್ನು ಅಂಗೀಕರಿಸುವ ನಿಟ್ಟಿನಲ್ಲಿಯೇ ರಾಜ್ಯಸಭೆಯ 12 ಮಂದಿ ಸಂಸದರನ್ನು ಅಮಾನತು ಮಾಡಲಾಯಿತು ಎಂದು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಅಮಾನತು ವಾಪಸ್‌ ಪಡೆಯುವಂತೆ ಮನವಿ ಮಾಡಿದರೂ, ಸರಕಾರ ಸ್ಪಂದಿಸಲಿಲ್ಲ. ಚೀನ ತಂಟೆ, ಹಣದುಬ್ಬರ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಸರ ಕಾ ರಕ್ಕೇ ಮನಸ್ಸು ಇರಲಿಲ್ಲ ಎಂದು ದೂರಿದ್ದಾರೆ.

ಅಂಗೀಕಾರಗೊಂಡ ಪ್ರಮುಖ ಮಸೂದೆಗಳು
-ಚುನಾವಣ ಕಾಯ್ದೆ (ತಿದ್ದುಪಡಿ) ಮಸೂದೆ
-ಮಾದಕ ವಸ್ತು ತಡೆ (ತಿದ್ದುಪಡಿ) ಮಸೂದೆ
-3 ಕೃಷಿ ಕಾಯ್ದೆ ರದ್ದು ಮಾಡುವ ಮಸೂದೆ
-ದಿಲ್ಲಿ ಪೊಲೀಸ್‌ ವ್ಯವಸ್ಥೆ (ತಿದ್ದುಪಡಿ) (ಸಿಬಿಐ, ಇ.ಡಿ. ನಿರ್ದೇಶಕರ ಅಧಿಕಾರದ ಅವಧಿ ವಿಸ್ತರಣೆಗೆ ಸಂಬಂಧಿಸಿದ್ದು)
-ಕೇಂದ್ರ ಜಾಗೃತ ದಳ ಆಯೋಗ (ತಿದ್ದುಪಡಿ) ಮಸೂದೆ

ಕಲಾಪ ಹಿನ್ನೋಟ
12- ಲೋಕ ಸಭೆಯಲ್ಲಿ ಸರಕಾರ ಮಂಡಿಸಿದ ಮಸೂದೆಗಳು
01- ರಾಜ್ಯ ಸಭೆಯಲ್ಲಿ ಮಂಡಿಸಿದ ಮಸೂದೆಗಳು
11- 2 ಸದನಗಳಲ್ಲಿ ಅಂಗೀಕಾರ ಲಭಿಸಿದ ಮಸೂದೆಗಳು
06 – ಸಂಸತ್‌ ಸಮಿತಿಗೆ ಸಲ್ಲಿಕೆಯಾದ ಮಸೂದೆಗಳು
18 ಗಂಟೆ 48 ನಿಮಿಷ-ಲೋಕ ಸಭೆಗೆ ನಷ್ಟವಾದ ಅವಧಿ
99 – ಕೊರೊನಾಚರ್ಚೆಯಲ್ಲಿ ಭಾಗವಹಿಸಿದ್ದ ಸಂಸದರು.
61- ಹವಾ ಮಾನ ಬದಲು ವಿಚಾರದಲ್ಲಿ ಭಾಗವಹಿಸಿದ್ದ ಸಂಸದರು
82%- ಸದನದ ಪ್ರೊಡಕ್ಟಿವಿಟಿ

Advertisement

Udayavani is now on Telegram. Click here to join our channel and stay updated with the latest news.

Next