ಬೆಂಗಳೂರು: ಸ್ವಾಬ್ ಟೆಸ್ಟ್ ಮಾಡದೇ ಆಧಾರ್ ಕಾರ್ಡ್ ಪಡೆದುಕೊಂಡು ನೆಗೆಟಿವ್ ಆರ್‌ಟಿಪಿಎಸ್ ಆರ್ ಟೆಸ್ಟ್ ವರದಿ ನೀಡುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಚೋಡದೇವನಹಳ್ಳಿಯ ಮುಖೇಶ್ ಸಿಂಗ್ (25) ಹೊಸಹಳ್ಳಿಯ ನಾಗರಾಜ್ ಅಲಿಯಾಸ್ ಓಂ ಶಕ್ತಿ (39) ಮತ್ತು ಲ್ಯಾಬ್ ಟೆಕ್ನಿಷಿಯನ್ ಗಳಾದ ಭಾಗ್ಯ(53) ಮತ್ತು ಅನಿಲ್ ಕುಮಾರ್(44) ಬಂಧಿತರು. ಆರೋಪಿಗಳಿಂದ ಐದು ನೆಗೆಟಿವ್ ವರದಿಗಳು ಮತ್ತು ಎರಡು ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳು ಬೊಮ್ಮಸಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದೆ, ನೆಗೆಟಿವ್ ವರದಿ ಬೇಕಾದವರಿಗೆ ಯಾವುದೇ ಸ್ವಾಬ್ ಗಳನ್ನು ಪಡೆಯದೇ ಅವರಿಂದ ಹಣ ಮತ್ತು ಆಧಾರ್ ಕಾರ್ಡ್ ಪಡೆದು ನೆಗೆಟಿವ್ ಎಂದು ಆರ್ ಟಿಪಿಸಿಆರ್ ಪರೀಕ್ಷಾ ವರದಿಗಳನ್ನು ನೀಡುತ್ತಿದ್ದರು. ಆರೋಪಿಗಳ ವಿರುದ್ಧ ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ :ಸಕ್ಕರೆ ನಾಡಿಗೆ ಕೊರೊನಾಘಾತ: 1348 ಮಂದಿಗೆ ಸೋಂಕು, 5 ಮಂದಿ ಸಾವು, 814 ಮಂದಿ ಗುಣಮುಖ
ಆರೋಪಿಗಳು ಮಧ್ಯವರ್ತಿಗಳ ಮೂಲಕ ನೆರೆ ರಾಜ್ಯ ಮತ್ತು ಜಿಲ್ಲೆಗಳಿಗೆ ತೆರಳುವ ಸಾರ್ವಜನಿಕರಿಗೆ ಪ್ರತಿ ವರದಿಗೆ 700-900 ರೂ. ಪಡೆದುಕೊಂಡು ನೆಗೆಟಿವ್ ವರದಿ ನೀಡುತ್ತಿದ್ದರು ಎಂದು ಸಿಸಿಬಿ ಪೊಲೀಸರು ಹೇಳಿದರು.