ಸಿಕ್ಕಿಂ: ಸಿಕ್ಕಿಂನ ಪಾಕ್ಯೊಂಗ್ ಜಿಲ್ಲೆಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ, ಸೇನಾ ವಾಹನವೊಂದು 800 ಅಡಿ ಆಳದ ಕಂದರಕ್ಕೆ ಬಿದ್ದು 4 ಯೋಧರು ಹುತಾತ್ಮರಾಗಿದ್ದಾರೆ.
ಸೇನಾ ವಾಹನವು ಕಡಿದಾದ ಪರ್ವತ ಪ್ರದೇಶದಲ್ಲಿ ಸಂಚರಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಪಶ್ಚಿಮ ಬಂಗಾಳದ ಪೆಡಾಂಗ್‌ನಿಂದ ಸಿಕ್ಕಿಂನ ಜುಲುಕ್‌ಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು ಈ ವೇಳೆ ಸಿಲ್ಕ್ ರೂಟ್ ಎಂದೂ ಕರೆಯಲ್ಪಡುವ ರೀನಾಕ್ ರೊಂಗ್ಲಿ ರಾಜ್ಯ ಹೆದ್ದಾರಿಯ ದಲೋಪ್‌ಚಂದ್ ದಾರಾ ಬಳಿ ವಾಹನ ಕಮರಿಗೆ ಉರುಳಿ ಬಿದ್ದಿದೆ, ಅಪಘಾತದಲ್ಲಿ ಕನಿಷ್ಠ ನಾಲ್ವರು ಭಾರತೀಯ ಸೇನಾ ಯೋಧರು ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತ ಸಂಭವಿಸಿದ ಕೂಡಲೇ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರೂ ನಾಲ್ವರು ಯೋಧರು ಸ್ಥಳದಲ್ಲೇ ಮೃತಪಟ್ಟಿದ್ದರು ಎನ್ನಲಾಗಿದೆ. ಯೋಧರನ್ನು ಮಧ್ಯಪ್ರದೇಶದ ಸೇನಾ ವಾಹನ ಚಾಲಕ ಪ್ರದೀಪ್ ಪಟೇಲ್, ಮಣಿಪುರದ ಕುಶಲಕರ್ಮಿ ಡಬ್ಲ್ಯೂ ಪೀಟರ್, ಹರಿಯಾಣದ ನಾಯಕ್ ಗುರ್ಸೇವ್ ಸಿಂಗ್ ಮತ್ತು ತಮಿಳುನಾಡಿನ ಸುಬೇದಾರ್ ಕೆ ಎಂದು ಗುರುತಿಸಲಾಗಿದೆ. ಎಲ್ಲಾ ಸೇನಾ ಸಿಬ್ಬಂದಿಗಳು ಪಶ್ಚಿಮ ಬಂಗಾಳದ ಬಿನಾಗೂರಿನ ಘಟಕಕ್ಕೆ ಸೇರಿದವರು ಎನ್ನಲಾಗಿದೆ.